ರೈತರ ಕ್ಷಮೆ ಕೇಳಲು ಕೃಷಿ ಸಚಿವರಿಗೆ ಬಸವರಾಜು ಶಿವಗಂಗಾ ಆಗ್ರಹ

ರೈತರ ಕ್ಷಮೆ ಕೇಳಲು ಕೃಷಿ ಸಚಿವರಿಗೆ ಬಸವರಾಜು ಶಿವಗಂಗಾ ಆಗ್ರಹ - Janathavaniದಾವಣಗೆರೆ, ಡಿ.4- ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಹೇಳಿಕೆ ನೀಡಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ರೈತರ ಕ್ಷಮೆ ಕೇಳಬೇಕೆಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ವಿ.ಶಿವಗಂಗಾ ಒತ್ತಾಯಿಸಿದ್ದಾರೆ. 

ಕೃಷಿ ಸಚಿವರು ಇಂತಹ ಹೇಳಿಕೆ ನೀಡಿ, ಅನ್ನದಾತರಿಗೆ ಅಗೌರವ ಸೂಚಿಸಿದ್ದಾರೆ ಎಂದರು. ಎಲ್ಲ ರೈತರು ಕಷ್ಟಪಟ್ಟು ಬೆವರಿಳಿಸಿ, ದುಡಿಯುತ್ತಾರೆ. ಯಾರೂ ಸಹ ಶ್ರಮ ವಹಿಸದೇ ಬೆಳೆ ಬೆಳೆಯಲು ಆಗುವುದಿಲ್ಲ. ಸಾಲಬಾಧೆ, ಬೆಂಬಲ ಬೆಲೆ ಸಿಗದೇ ಬೆಳೆ ನಷ್ಟ ಮತ್ತು ಸರ್ಕಾರ ರೈತರ ಬಗ್ಗೆ ಕಾಳಜಿ ಇಲ್ಲದ ಕಾರಣ ಅನ್ನದಾತರು ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದರು.

ಸರ್ಕಾರ ರೈತರ ಬೆಳೆಗಳಿಗೆ ವೈಜ್ಞಾನಿಕವಾದ ಬೆಲೆ ನೀಡಿದರೆ ಅವರು ಆತ್ಮಹತ್ಯೆ ಮಾಡಿಕೊಳ್ಳಲ್ಲ. ಫಸಲಿಗೆ ಸೂಕ್ತ ಬೆಲೆ ಸಿಕ್ಕರೆ ಸರ್ಕಾರಕ್ಕೆ ರೈತರೇ ಸಾಲ ನೀಡುತ್ತಾರೆ. ದೇಶಕ್ಕೆ ಅನ್ನ ಕೊಡುವ ರೈತರ ಬಗ್ಗೆ ಕೃಷಿ ಸಚಿವ ಪಾಟೀಲ್ ಇಂತಹ ಹೇಳಿಕೆ ನೀಡಿ ಅಗೌರವ ಸೂಚಿಸಬಾರದೆಂದು ಬಸವರಾಜು ತಿಳಿಸಿದರು. ರೈತರ ಆತ್ಮಹತ್ಯೆ ಬಗ್ಗೆ ಕೃಷಿ ಸಚಿವರು ಮೊದಲು ತಿಳಿದುಕೊಳ್ಳಬೇಕು. ರೈತರಿಗೆ ಆತ್ಮಸ್ಥೈರ್ಯ ತುಂಬಬೇಕು. ಆದರೆ, ರೈತರನ್ನು ಹೇಡಿಗಳು ಎಂದು ಕರೆಯುವುದು ನಿಮ್ಮ ಸ್ಥಾನಕ್ಕೆ ಯೋಗ್ಯವಲ್ಲ ಎಂದರು.

error: Content is protected !!