ದಾವಣಗೆರೆ, ಡಿ.3- ಇತ್ತೀಚಿನ ದಿನಗಳಲ್ಲಿ ನಮ್ಮ ರೈತರು ಉಪ ಕಸುಬುಗಳಿಂದ ದೂರವಿರುವುದಕ್ಕೆ ಇಂದು ನಾವು ಕೃಷಿಯಲ್ಲಿ ಸುಸ್ಥಿರತೆಯನ್ನು ಕಾಣಲಾಗುತ್ತಿಲ್ಲ ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ತಿಳಿಸಿದರು.
ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು-ಕನ್ನಡ ನುಡಿ ಹಬ್ಬ ಉಪನ್ಯಾಸ ಕಾರ್ಯಕ್ರಮದಲ್ಲಿ ಸುಸ್ಥಿರ ಕೃಷಿ-ಸವಾಲುಗಳು ಮತ್ತು ಅವಕಾಶಗಳು ವಿಷಯ ಕುರಿತು ಅವರು ಮಾತನಾಡಿದರು.
ಸುಸ್ಥಿರ ಕೃಷಿಗೆ ಸುಲಭದ ಮಾರ್ಗಗಳೆಂದರೆ ಸಾವ ಯವ ಕೃಷಿ, ಸಮಗ್ರ ಕೃಷಿ, ಬೆಳೆ ಪರಿವರ್ತನೆ, ಉಪ ಕಸುಬುಗಳಾದ ಹೈನುಗಾರಿಕೆ, ಮೀನುಗಾರಿಕೆ, ಕುರಿ ಸಾಕಾ ಣಿಕೆ, ಜೇನು ಸಾಕಾಣಿಕೆ ಮುಂತಾದವುಗಳು. ಕೃಷಿ ಯಾವ ಉಪ ಕಸುಬುಗಳನ್ನು ಬಿಟ್ಟಿಲ್ಲ. ಇವೆಲ್ಲವೂ ಒಂದಕ್ಕೊಂದು ಸಂಬಂಧವನ್ನು ಹೊಂದಿವೆ. ಜೊತೆಗೆ ಉಪ ಕಸುಬುಗಳಿಂದ ನಾವು ನಿರ್ದಿಷ್ಟವಾದ ಆದಾಯವನ್ನು ಕಾಣಬಹುದು. ರೈತರು ಇದರತ್ತ ಗಮನ ಹರಿಸಬೇಕು ಎಂದರು.
ಭಾರತೀಯ ಕೃಷಿ ಪರಂಪರೆ ಮುಂದಿನ ಪೀಳಿಗೆಯವರೆಗೂ ಉಳಿಯಬೇಕೆಂದರೆ ಪರಿಸರ ಸ್ನೇಹಿ ಕೃಷಿಯೊಂದೇ ಮಾರ್ಗ. ಯುವಕರು ಹೆಚ್ಚು ಹೆಚ್ಚು ಕೃಷಿ ಕಡೆಗೆ ಆಕರ್ಷಿತರಾದಷ್ಟು ಏಳ್ಗೆ ಸಾಧ್ಯ. ಜೊತೆಗೆ ಸರ್ಕಾರಗಳೂ ಸಹ ಉತ್ತಮ ಕೃಷಿ ನೀತಿಯನ್ನು ರೂಪಿಸಿದಲ್ಲಿ ರೈತರಿಗೆ ಕೃಷಿಯಿಂದ ಉತ್ತಮ ಲಾಭಾಂಶ ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷೀಯ ನುಡಿಗಳನ್ನಾಡಿ ಯಾವುದೇ ದೇಶ-ನಾಡು ಅಭಿವೃದ್ಧಿಯಾಗ ಬೇಕಾದರೆ ಕೃಷಿ ಅಭಿವೃದ್ಧಿ ಮುಖ್ಯ. ಕೃಷಿ ಕುಟುಂಬ ಅಭಿವೃದ್ಧಿ ಸಾಧಿಸಬೇಕಾದರೆ ತೋಟಗಾರಿಕಾ ಚಟುವಟಿಕೆ ಗಳಲ್ಲಿ ತೊಡಗಿಸಿಕೊಂಡು ವಾಣಿಜ್ಯ ಬೆಳೆಗಳನ್ನು ಬೆಳೆದು, ಆಧು ನಿಕ ವ್ಯವಸ್ಥೆಯನ್ನು ರೂಢಿಸಿಕೊಳ್ಳಬೇಕಾಗಿದೆ ಎಂದರು.
ಬೆಳಗಾವಿ ಕುರಿತು ಮಹಾರಾಷ್ಟ್ರ ಉಪ ಮುಖ್ಯ ಮಂತ್ರಿ ಪವಾರ್ ಉದ್ಧಟತನದ ಮಾತನಾಡಿರುವುದನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕಸಾಪ ಹಾಗೂ ತಾಲ್ಲೂಕು ಕಸಾಪ ಘಟಕಗಳು ತೀವ್ರವಾಗಿ ಖಂಡಿಸುತ್ತವೆ ಎಂದರು. ಪರಿಷತ್ತಿನ ನಿರ್ದೇಶಕ ಎಂ.ಬಿ. ಷಡಕ್ಷರಪ್ಪ ಬೇತೂರು ಸ್ವಾಗತಿಸಿದರು. ಸುಗಮ ಸಂಗೀತ ಕಾರ್ಯಕ್ರವನ್ನು `ಬೆಳಕು’ ಜಾನಪದ ಕಲಾ ತಂಡದ ರುದ್ರಾಕ್ಷಿ ಬಾಯಿ ಪುಟ್ಟಾನಾಯಕ್, ಐಸಿರಿ ಹಾಗೂ ನಿರಂಜನ್ ನಡೆಸಿಕೊಟ್ಟರು.