ರೈತ ವಿರೋಧಿ ಕಾಯ್ದೆ ಹೋರಾಟದಲ್ಲಿ ಲಕ್ಷಾಂತರ ರೈತರು ಭಾಗಿ

ದಾವಣಗೆರೆ, ಡಿ. 2- ದೇಶದ ಹಲವು ರಾಜ್ಯಗಳ ಲಕ್ಷಾಂತರ ರೈತರು ರಾಜಧಾನಿ ದೆಹಲಿಯಲ್ಲಿ ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಹೋರಾಟದಲ್ಲಿ ನಿರತರಾಗಿದ್ದಾರೆ ಎಂದು ಎಐಎಂಎಸ್ಎಸ್ ರಾಜ್ಯ ಅಧ್ಯಕ್ಷರಾದ  ಬಿ.ಆರ್. ಅಪರ್ಣಾ ಹೇಳಿದರು.

ನಗರದ ಗಾಂಧಿ ವೃತ್ತದಲ್ಲಿ ಹೋರಾಟ ನಿರತ ರೈತರೇ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಘೋಷಣೆಯೊಂದಿಗೆ ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ, ಎಐಎಂಎಸ್ಎಸ್ ಮಹಿಳಾ ಸಂಘಟನೆ ಮತ್ತು ಎಐಡಿವೈಓ ಯುವಜನ ಸಂಘಟನೆಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಪ್ರಜಾತಾಂತ್ರಿಕ ವಿರೋಧಿಯಾಗಿ ಸುಗ್ರೀವಾಜ್ಞೆಗಳ ಮೂಲಕ ಜಾರಿಯಾಗಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಮತ್ತು ವಿದ್ಯುತ್ ಬಿಲ್ ತಿದ್ದುಪಡಿ ಕಾಯ್ದೆಗಳು ಒಂದೆಡೆ ಲಾಭದಾಹಿ ಕಾರ್ಪೊರೇಟ್ ಮನೆತನಗಳಿಗೆ ಮುಕ್ತ ಅವಕಾಶ ನೀಡುತ್ತವೆ, ಇನ್ನೊಂದೆಡೆ ರೈತರಿಗೆ ಮರಣ ಶಾಸನ ವಾಗಿವೆ. ಈ ಕಾಯ್ದೆಗಳು ಕೇವಲ ರೈತ ವಿರೋಧಿ ಅಷ್ಟೇ ಅಲ್ಲ, ಇಡಿ ಜನ ಸಮುದಾಯವನ್ನೇ ಸಂಕಷ್ಟಕ್ಕೆ ನೂಕುವ ಕರಾಳ ಕಾಯ್ದೆಗಳಾಗಿವ ಎಂದು ಟೀಕಿಸಿದರು.

ಎಐಡಿವೈಓ ಜಿಲ್ಲಾ ಉಪಾಧ್ಯಕ್ಷ ಮಧು ತೊಗಲೇರಿ ಮಾತನಾಡಿ, ರೈತರ ಬಗ್ಗೆ ಕಾಳಜಿ ಇರುವಂತೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಕೇಂದ್ರ ಸರ್ಕಾರ ರೈತರ ನ್ಯಾಯಯುತ ಹೋರಾಟವನ್ನು ಹತ್ತಿಕ್ಕಲು ನಡೆಸುತ್ತಿರುವ ಹುನ್ನಾರ ನಿಜಕ್ಕೂ ಅಮಾನವೀಯ, ಅಪ್ರಜಾತಾಂತ್ರಿಕ ವಾಗಿದೆ ಎಂದರು. ದಾರಿಗೆ ಅಡ್ಡಲಾಗಿ ಗುಂಡಿ ತೋಡಿ, ಸಿಮೆಂಟ್ ಬ್ಯಾರಿಕೇಡ್‍ಗಳನ್ನು ಹಾಕಿ, ಜಲಫಿರಂಗಿ ಮತ್ತು ಟೀಯರ್ ಗ್ಯಾಸ್ ಬಳಸಿ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಮಾಡಿದ ಎಲ್ಲಾ ಕುತಂತ್ರಗಳನ್ನು ಮೆಟ್ಟಿನಿಂತ ರೈತ ಸಮುದಾಯ ದೆಹಲಿಗೆ ದಾಪುಗಾಲು ಇಟ್ಟಿದೆ. ಕೊರೆಯುವ ಚಳಿಯಲ್ಲಿ ಸಾವಿರಾರು ಧೀರೋದಾತ್ತ ರೈತ ಮಹಿಳೆಯರು ದಿಟ್ಟತನದಲ್ಲಿ ಹೋರಾಟದಲ್ಲಿ ತೊಡಗಿರು ವುದು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ ಎಂದು ತಿಳಿಸಿದರು.

 ಎಐಡಿವೈಓ ಜಿಲ್ಲಾ ಸಂಘಟನಕಾರಾದ ಪರಶುರಾಮ್ ಪಿ ಸಭೆಯ ನಿರ್ವಹಣೆ ನಡೆಸಿದರು, ಈ ಸಂದರ್ಭದಲ್ಲಿ ಎಐಎಂಎಸ್ಎಸ್ ನ ಕಾರ್ಯದರ್ಶಿ ಭಾರತಿ, ಇತರೆ ಸಂಘಟನಾಕಾರರಾದ ಸೈಯದ್, ಮಮತ, ಧನುಷ್, ಸ್ಮಿತಾ, ಸೌಮ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!