ಜಗಳೂರಿನ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಶಾಸಕ ಎಸ್.ವಿ. ರಾಮಚಂದ್ರ
ಜಗಳೂರು, ಡಿ.2 – ಕಾಂಗ್ರೆಸ್‍ನವರು ಬರೀ ಪ್ರಚಾ ರಕ್ಕಾಗಿ ಯೋಜನೆಗಳನ್ನು ಘೋಷಣೆ ಮಾಡಿ ಅನುಷ್ಠಾನಕ್ಕೆ ತರದೇ ನಿರ್ಲಕ್ಷ್ಯ ವಹಿಸಿದ್ದರು. ಇದೀಗ ಬಿಜೆಪಿ ಆಡಳಿ ತದಲ್ಲಿ ನನ್ನ ಅಧಿಕಾರವಧಿಯಲ್ಲಿ ನೆನೆಗುದಿಗೆ ಬಿದ್ದಿದ್ದ ಯೋಜನೆಗಳನ್ನು ಕೈಗೆತ್ತಿಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸುವ ಕೆಲಸ ಮಾಡುತ್ತಿದ್ದೇನೆ. ಇದನ್ನು ಸಹಿಸದ ವಿಪಕ್ಷಗಳು ವೃಥಾ ಆರೋಪ ಮಾಡುತ್ತಾ ಕಾಲ ಕಳೆಯುವ ಬದಲು ಗ್ರಾಮೀಣ ಭಾಗದಲ್ಲಿ ಹೋಗಿ ನಾವು ಮಾಡಿರುವ ಕೆಲಸಗಳನ್ನು ನೋಡಿ ಮಾತನಾಡಲಿ ಎಂದು ಶಾಸಕ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ.ರಾಮಚಂದ್ರ ರಾಜಕೀಯ ವಿರೋಧಿಗಳಿಗೆ ಸವಾಲು ಹಾಕಿದರು.
ತಾಲ್ಲೂಕಿನ ತಪೋಕ್ಷೇತ್ರ ಕಣ್ವಕುಪ್ಪೆ ಗವಿ ಮಠದಲ್ಲಿ ಬಿಜೆಪಿಯಿಂದ ಇಂದು ಆಯೋಜಿಸಲಾಗಿದ್ದ ಜಗಳೂರು ವಿಧಾನಸಭಾ ಕ್ಷೇತ್ರದ ಪ್ರಶಿಕ್ಷಣ ವರ್ಗ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಪರ ಕೆಲಸಗಳನ್ನು ಜಾರಿಗೆ ತರುವ ಎಲ್ಲಾ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿವೆ ಎಂದರು.
ಈ ಹಿಂದೆ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಕೇವಲ ಅನುಮೋದನೆ ನೀಡಲಾಗಿತ್ತು. ಆದರೆ, ಇದೀಗ ಬಿಜೆಪಿ ಆಡಳಿತದಲ್ಲಿ ಸಿಎಂ ಯಡಿಯೂರಪ್ಪನವರ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ವಹಿಸಿ ಯೋಜನೆಗಳನ್ನು ಇದೀಗ ಸಾಕಾರಗೊಳಿಸುತ್ತಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಿರಿಗೆರೆ ಶ್ರೀಗಳ ಆಶೀರ್ವಾದ ಹಾಗೂ ಒತ್ತಡದ ಪರಿಣಾಮವಾಗಿ ಸಕಾಲದಲ್ಲಿ ಹಣ ಬಿಡುಗಡೆಗೊಂಡು ಪೈಪ್‍ಲೈನ್ ಕಾಮಗಾರಿ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷ ಕೆರೆಗಳಿಗೆ ನೀರು ತುಂಬಿಸುವ ವಿಶ್ವಾಸ ವ್ಯಕ್ತಪಡಿಸಿದರು. ಆದರೆ, ಕೆಲವರು ಅವರ ಅಧಿಕಾರವಧಿಯಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆ ಬಂದಿದೆ ಎಂದು ಸುಳ್ಳು ಹೇಳುತ್ತಾ ತಿರುಗಾಡುತ್ತಿದ್ದಾರೆ ಎಂದು ಅವರು ಮಾಜಿ ಶಾಸಕರನ್ನು ಟೀಕಿಸಿದರು.
ನಮ್ಮ ಅವಧಿಯಲ್ಲಿ ತಾಲ್ಲೂಕಿನಾದ್ಯಂತ 60 ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮಾಡಲಿದ್ದು, ಈಗಾಗಲೇ 40 ಕಾರುಗಳನ್ನು ನಿಗಮದಡಿ ನೀಡಲಾಗಿದೆ. ಎಸ್‍ಟಿ ಜನಾಂಗದವರಿಗೆ 200 ಬೋರ್‍ವೆಲ್‍ಗಳನ್ನು ಕೊರೆಸಲಾಗಿದೆ. ಮುಂದಿನ ದಿನಗಳಲ್ಲಿ ಅನ್ಯ ವರ್ಗಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಸುಧಾ ಜಯರುದ್ರೇಶ್, ಬಿಜೆಪಿ ಮಂಡಲ ಅಧ್ಯಕ್ಷ ಹೆಚ್.ಸಿ.ಮಹೇಶ್, ಜಿಲ್ಲಾ ಉಪಾಧ್ಯಕ್ಷ ಡಿ.ವಿ.ನಾಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್. ನಾಗರಾಜ್, ಜಿಪಂ ಸದಸ್ಯರಾದ ಶಾಂತಕುಮಾರಿ ಶಶಿಧರ್, ಎಸ್.ಕೆ.ಮಂಜು ನಾಥ್, ರಶ್ಮಿ ರಾಜಪ್ಪ, ಪ.ಪಂ ಅಧ್ಯಕ್ಷ ಆರ್.ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಲಲಿತ ಶಿವಣ್ಣ, ಪ.ಪಂ ಸದಸ್ಯರಾದ ಪಾಪಲಿಂಗಪ್ಪ, ನವೀನ್ ಕುಮಾರ್, ಒಬಿಸಿ ಮೋರ್ಚಾದ ಇಂದ್ರೇಶ್, ಯುವ ಮೋರ್ಚಾದ ಸೂರ್ಯಕಿರಣ್, ರೈತ ಮೋರ್ಚಾದ ಕೆಂಚನಗೌಡ್ರು, ಶಿವಕುಮಾರಸ್ವಾಮಿ, ಕಸ್ತೂರಿಪುರ ಶಿವಣ್ಣ, ಉಮೇಶ್‍ನಾಯ್ಕ್, ಮಹಿಳಾ ಮೋರ್ಚಾದ ಪದ್ಮಮ್ಮ, ಅಲ್ಪಸಂಖ್ಯಾತರ ಘಟಕದ ಖಾಸಿಂ ಅಲಿ, ಎಂ.ಧರ್ಮನಾಯ್ಕ್, ಹನುಮಂತನಾಯ್ಕ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.