ಜನರಲ್ಲಿ ಅರಿವು ಮೂಡಿಸಿರುವುದರಿಂದ ಹೆಚ್ಚಿನ ಸ್ಪಂದನೆ : ತಹಶೀಲ್ದಾರ್ ಬಿ.ಎನ್. ಗಿರೀಶ್
ದಾವಣಗೆರೆ, ನ. 30 – ಕಂದಾಯ ಇಲಾಖೆ ಸೇರಿದಂತೆ ನಾಲ್ಕು ಇಲಾಖೆಗಳಲ್ಲಿ ಸಕಾಲ ಸಪ್ತಾಹವನ್ನು ಸೋಮವಾರದಿಂದ ಆರಂಭಿಸಲಾಗಿದೆ. ಇದರ ಅನ್ವಯ ಸಕಾಲವನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ಜೊತೆಗೆ, ಜನರಿಂದ ಅಭಿಪ್ರಾಯ ಸಂಗ್ರಹಿಸುವ ಕಾರ್ಯವನ್ನೂ ಕೈಗೊಳ್ಳಲಾಗುತ್ತಿದೆ.
ನವೆಂಬರ್ 30ರಿಂದ ಡಿಸೆಂಬರ್ 5ರವರೆಗೆ ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಆಹಾರ ಇಲಾಖೆ ಹಾಗೂ ಸಾರಿಗೆ ಇಲಾಖೆಗಳಲ್ಲಿ ಸಕಾಲ ಸಪ್ತಾಹ ಕೈಗೊಳ್ಳಲಾಗುತ್ತಿದೆ.
ಈ ಇಲಾಖೆಗಳ ಕಚೇರಿಗಳಿಗೆ ಸಕಾಲದಲ್ಲಿ ಅರ್ಜಿ ಸಲ್ಲಿಸಲು ಆಗಮಿಸುವವರಿಗೆ ನೆರವಾಗಲು ಹೆಲ್ಪ್ ಡೆಸ್ಕ್ಗಳನ್ನು ಸ್ಥಾಪಿಸಲಾಗಿದೆ. ಇದೇ ವೇಳೆ ಸಾರ್ವಜನಿಕರಿಂದ ಸಕಾಲ ಮಿಷನ್ ಕುರಿತು ಮಾಹಿತಿ ಸಂಗ್ರಹಿಸುವ ಸಮೀಕ್ಷೆಯನ್ನೂ ನಡೆಸಲಾಗುತ್ತಿದೆ.
ಈ ಸಮೀಕ್ಷೆಯಲ್ಲಿ ಸಕಾಲ ಮಿಷನ್ ಬಗ್ಗೆ ಜನರಲ್ಲಿ ಎಷ್ಟು ಅರಿವಿದೆ, ಸಕಾಲ ಸೇವೆಯ ಅನುಭವ, ಸಕಾಲ ಮಿಷನ್ ಕುರಿತ ಮೌಲ್ಯಾಂಕ, ಸಕಾಲ ಯೋಜನೆಯಿಂದ ಇರುವ ನಿರೀಕ್ಷೆಗಳು, ಸಹಾಯವಾಣಿ ಕುರಿತ ಅಭಿಪ್ರಾಯ ಮತ್ತಿತರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ.
ಈ ರೀತಿಯ ಅಭಿಪ್ರಾಯವನ್ನು ಸಂಗ್ರಹಿಸಿ ಸಕಾಲ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿ ಮಾಡುವ ಉದ್ದೇಶವಿದೆ. ವಿವಿಧ ಕಚೇರಿಗಳಲ್ಲಿ ಹೆಲ್ಪ್ಡೆಸ್ಕ್ಗಳನ್ನು ಸ್ಥಾಪಿಸಿ ಅಲ್ಲಿ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ.
ಜನರಿಂದ ಸಂಗ್ರಹಿಸಲಾಗುವ ಅಭಿಪ್ರಾಯವನ್ನು ಸರ್ಕಾರಕ್ಕೆ ರವಾನಿಸಲಾಗುವುದು ಎಂದು ಹೇಳಿರುವ ತಹಶೀಲ್ದಾರ್ ಬಿ.ಎನ್. ಗಿರೀಶ್, ಈಗಾಗಲೇ ಸಕಾಲ ಸಪ್ತಾಹದ ಕುರಿತು ಜನರಲ್ಲಿ ಅರಿವು ಮೂಡಿಸಿರುವುದರಿಂದ ಹೆಚ್ಚಿನ ಸ್ಪಂದನೆ ಸಿಗುತ್ತಿದೆ ಎಂದಿದ್ದಾರೆ.
ಕಂದಾಯ ಇಲಾಖೆ ವತಿಯಿಂದ ತಹಶೀಲ್ದಾರ್ ಕಚೇರಿ ಮತ್ತು ಆನಗೋಡು ಹಾಗೂ ಮಾಯಕೊಂಡದ ನಾಡಕಚೇರಿಗಳಲ್ಲಿ ಹೆಲ್ಪ್ಡೆಸ್ಕ್ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಜನಾಭಿಪ್ರಾಯ ಸಂಗ್ರಹಿಸುವುದರಿಂದ ಜನರಿಗೆ ಅಧಿಕಾರಿಗಳು ಯಾವ ರೀತಿ ಸ್ಪಂದಿಸುತ್ತಿದ್ದಾರೆ, ಅರ್ಜಿಗಳ ವಿಲೇವಾರಿ ಕುರಿತು ಜನರ ಅಭಿಪ್ರಾಯ ಏನಿದೆ ಎಂಬುದು ತಿಳಿಯುತ್ತದೆ ಎಂದವರು ವಿವರಿಸಿದ್ದಾರೆ.
ಸರ್ಕಾರ ಸಕಾಲ ಯೋಜನೆಗೆ, ಅದರಲ್ಲೂ ಸಕಾಲ ಸಪ್ತಾಹಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಈ ಸಪ್ತಾಹದಲ್ಲಿ ಪಡೆಯುವ ಅರ್ಜಿಗಳ ತ್ವರಿತ ವಿಲೇವಾರಿಗೆ ಸೂಚನೆಯನ್ನೂ ನೀಡಲಾಗಿದೆ. ಜನರು ಸಪ್ತಾಹದಲ್ಲಿ ಅರ್ಜಿ ಸಲ್ಲಿಸಿ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬೇಕು ಎಂದವರು ಮನವಿ ಮಾಡಿಕೊಂಡಿದ್ದಾರೆ.