ಗ್ರಂಥ ಸರಸ್ವತಿ ಪ್ರತಿಭಾರಂಗದ ಕಾರ್ಯಕ್ರಮದಲ್ಲಿ ಶಿವಾನಂದ ಹೊಂಬಳ
ದಾವಣಗೆರೆ, ನ.28 – ಸುಮಾರು 2500 ವರ್ಷಗ ಳಷ್ಟು ಹಳೆಯದಾದ ಕನ್ನಡ ಸಾಹಿತ್ಯ ಮೊದಲ ಶಾಸನ ಸಾಹಿತ್ಯವಾಗಿದ್ದು ಕನ್ನಡದ ಪ್ರಥಮ ಶಾಸನ ಹಲ್ಮಿಡಿ ಶಾಸನ ಹಾಸನ ಜಿಲ್ಲೆ ಹಲ್ಮಿಡಿಯಲ್ಲಿ ಸಿಕ್ಕ ಶಾಸನ ಕನ್ನಡ ಸಾಹಿತ್ಯಕ್ಕೆ ಒಂದು ಮೈಲಿಗಲ್ಲಾಯಿತು ಎಂದು ಬಳ್ಳಾ ರಿಯ ಶ್ರೀ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ಉಪ ನ್ಯಾಸಕ ಶಿವಾನಂದ ಪಿ. ಹೊಂಬಳ ಅವರು ತಿಳಿಸಿದರು.
ನಗರದ ಗ್ರಂಥ ಸರಸ್ವತಿ ಪ್ರತಿಭಾರಂಗವು ಹಮ್ಮಿಕೊಂಡಿರುವ ಅಂತರ್ಜಾಲಿತ ಕನ್ನಡಕಬ್ಬ ಉಗಾದಿಹಬ್ಬ ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿ ‘ಪಂಪನ ಎರಡು ಮಹಾನ್ ಕೃತಿಗಳು’ ವಿಷಯ ಕುರಿತು ತಮ್ಮ ನುಡಿಗಾಣಿಕೆ ಸಲ್ಲಿಸಿದರು.
7ನೇ ಶತಮಾನದಿಂದ 10-11ನೇ ಶತಮಾನದವ ರೆಗೆ ಸಾಗಿರುವ ಸಾಹಿತ್ಯ ಸಂದರ್ಭದಲ್ಲಿ ಕವಿರಾಜ ಮಾರ್ಗ ಬಂದಿತು. ಇದನ್ನು ರಚಿಸಿದವರು ಶ್ರೀವಿಜಯ. ಇವನು ನೃಪತುಂಗ ರಾಜನ ಆಸ್ಥಾನದಲ್ಲಿದ್ದನು, ಆಸ್ಥಾನ ವಿದ್ವಾಂಸನಾಗಿದ್ದ ಇವನು ಕನ್ನಡ ನಾಡನ್ನು ಕಾವೇರಿಯಿಂದ ಗೋದಾವರಿವರೆಗೆ ಇದೆ ಎಂದು ಗಡಿಯನ್ನು ಗುರುತಿಸಿದನು ಎಂದು ವಿವರಿಸಿದರು.
ಹತ್ತನೇ ಶತಮಾನದಲ್ಲಿ ಪಂಪ ನಡೆದದ್ದೇ ದಾರಿ ಅನ್ನುವ ಹಾಗೆ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯಗಳನ್ನು ರಚಿಸಿದವನು ಪಂಪ. ಜೈನರು ಕನ್ನಡಕ್ಕೆ ಬೇಕಾದಷ್ಟು ಕೆಲಸ ಮಾಡಿದ್ದಾರೆ. ಇವರು ಗದ್ಯ-ಪದ್ಯ ಸಮ್ಮಿಶ್ರವಾದ ಚಾಂಪೂವನ್ನು ತಂದರು. ಹೀಗಾಗಿ ಸಂಸ್ಕೃತವು ಕನ್ನಡದ ಮೇಲೆ ಅಪಾರ ಪ್ರಭಾವ ಬೀರಿದೆ ಎಂದು ಅಭಿಪ್ರಾಯ ಪಟ್ಟರು. ಕೊನೆಗೆ ಪಂಪ ಮಹಾ ಕವಿಯು ಮಹಾಭಾರತದಲ್ಲಿ ನೆನೆಯುವುದಾದರೆ ಕರ್ಣ ನನ್ನು ನೆನೆಯಬೇಕು. ಅವನ ತ್ಯಾಗ ಮತ್ತು ಶೌರ್ಯದ ಬಗ್ಗೆ ಪಂಪ ಹೇಳುತ್ತಾ ಹೋಗುತ್ತಾನೆ. ಒಟ್ಟಿನಲ್ಲಿ ಹೇಳುವುದಾದರೆ 10ನೇ ಶತಮಾನವು ಜೈನ ಸಾಹಿತ್ಯ ಅಥವಾ ಕನ್ನಡ ಸಾಹಿತ್ಯದ ಯುಗವೆಂದೇ ಹೇಳಬಹುದು ಎಂದು ಶಿವಾನಂದ ಹೊಂಬಳ ತಿಳಿಸಿದರು.
ಆರ್.ಶಿವಕುಮಾರಸ್ವಾಮಿ ಕುರ್ಕಿ ಪಂಪನ ಕಾವ್ಯ ವಾಚನ ಮಾಡಿದರು. ಗಾಯಕಿಯರಾದ ಶ್ರೀಮತಿ ಉಮಾ ಶ್ರೀನಿವಾಸ ಹಾಗೂ ಶ್ರೀಮತಿ ಸೂರ್ಯಪ್ರಭಾ ಸುರೇಶ ಅವರು ಭಾವಗೀತೆಗಳ ಹಾಡಿದರು.