ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿರುವ ಅಂತರ್ಜಾಲದ ಮೂಲಕ ಕನ್ನಡ ನುಡಿಹಬ್ಬದಲ್ಲಿ ಬಿ.ಟಿ ಜಾಹ್ನವಿ ವ್ಯಾಕುಲತೆ
ದಾವಣಗೆರೆ, ನ. 28- ಸಂಪ್ರದಾಯ ಮತ್ತು ನಂಬಿಕೆಗಳನ್ನು ಹುಟ್ಟುಹಾಕುವುದು ಸಮಾಜದ ಪುರುಷ ಪ್ರಧಾನ ಪ್ರವೃತ್ತಿಯಾಗಿದ್ದು, ಇದರಿಂದ ಹುಟ್ಟಿದ ಮೂಢನಂಬಿಕೆಗಳು ಮಹಿಳೆಯರನ್ನೇ ತಲೆತಲಾಂತರದಿಂದ ಮುಖ್ಯ ಗುರಿಯಾಗಿಸಿಕೊಂಡಿವೆ ಎಂದು ಕಥೆಗಾರ್ತಿ ಬಿ.ಟಿ ಜಾಹ್ನವಿ ಅವರು ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿರುವ ಅಂತರ್ಜಾಲದ ಮೂಲಕ ಕನ್ನಡ ನುಡಿಹಬ್ಬದ 23ನೇ ದಿನದ `ಮಹಿಳೆ ಮತ್ತು ಮೂಢನಂಬಿಕೆಗಳು’ ವಿಷಯ ಕುರಿತು ಅವರು ಮಾತನಾಡಿದರು.
ತನ್ನನ್ನು ಬಲಿಪಶು ಮಾಡುವ ಈ ಮೂಢ ನಂಬಿಕೆಗಳನ್ನು ನಿರಾಕರಿಸುವ, ಪ್ರತಿಭಟಿಸುವ ಬದಲು ಮಹಿಳೆಯೇ ಅವುಗಳನ್ನು ವೈಭವೀಕರಿಸಿ ಕೊಂಡು ಹೋಗಬೇಕಾದಂತಹ ಪರಿಸ್ಥಿತಿ ಸಮಾಜದಲ್ಲಿ ಏರ್ಪಟ್ಟಿರುವುದು ವಿಪರ್ಯಾಸವೇ ಸರಿ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಮೂಢನಂಬಿಕೆಗಳ ಪ್ರಹಾರ ಬಾಲ್ಯದಿಂ ದಲೇ ಹೆಣ್ಣಿನ ಮೇಲೆ ಶುರುವಾಗುತ್ತದೆ. ತವರಿ ನಲ್ಲಿ ಹೆಣ್ಣಿಗೆ ಯಾವತ್ತೂ ಸ್ಥಾನವಿಲ್ಲ. ಅವಳು ಯಾವುದಕ್ಕೂ ಬಾದ್ಯಸ್ಥಳಲ್ಲ ಎನ್ನುವಂತಹ ಒಂದು ಅಭಿಪ್ರಾಯದಿಂದ ತೊಟ್ಟಿಲಲ್ಲಿಯೇ ಹೆಣ್ಣು ಮಗುವಿಗೆ ಬಾಸಿಂಗ ಕಟ್ಟುವ (ಮದುವೆ ಮಾಡುವ) ಪದ್ದತಿ ಇತ್ತು. ಇದು ತುಂಬಾ ಶೋಚನೀಯ ವಾದಂತಹ ಸ್ಥಿತಿ ಎಂದು ವಿಷಾದಿಸಿದರು.
1976 ರಲ್ಲಿ ಬಾಲ್ಯ ವಿವಾಹ ತಡೆಗಟ್ಟುವ ಕಾಯ್ದೆ ಜಾರಿಗೆ ಬಂದಿದ್ದು, ಭಾರತ ಸರ್ಕಾರ 2006 ರಲ್ಲಿ ಈ ಕಾನೂನಿಗೆ ತಿದ್ದುಪಡಿ ಮಾಡಿ ಬಾಲ್ಯವಿವಾಹವನ್ನು ನಿಷೇಧಿಸಿತು. ಆದರೆ ದುಃಖದ ಸಂಗತಿಯೆಂದರೆ ಇತ್ತೀಚಿನ ದಿನಗಳಲ್ಲಿ ಸಾಮೂಹಿಕ ವಿವಾಹಗಳ ನೆಪದಲ್ಲಿ ಮಠಗಳು, ಸಂಘಗಳು ಸಂಸ್ಥೆಗಳು, ಶ್ರೀಮಂತ ಚಾರಿಟಬಲ್ ಸಂಸ್ಥೆಗಳು ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವ ಭರದಲ್ಲಿ ಸುಳ್ಳು ಪ್ರಮಾಣ ಪತ್ರ ನೀಡಿ ಮತ್ತೆ ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತಿರುವುದು ತುಂಬಾ ಖೇದಕರ ಸಂಗತಿ ಎಂದರು. ಇಂತಹ ಹುಸಿ ಸುಧಾರಣಾ ಕ್ರಮಗಳು ಮಹಿಳೆಯ ಬದುಕನ್ನು ಸರ್ವ ನಾಶ ಮಾಡುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
`ಗಂಡ ಸತ್ತರೆ ಹೆಂಡತಿಯಾಗುವವಳು ವಿಧವೆ. ಹೆಂಡತಿ ಸತ್ತರೆ ಗಂಡ ಆಗುವವನು ಮದುವೆ’ ಈ ಮಾತು ಭಾರತೀಯ ವೈವಾಹಿಕ ಹೆಣ್ಣುಮಗಳ ದುರಂತವನ್ನು ಎತ್ತಿ ತೋರಿಸುತ್ತದೆ. ಇಂದಿಗೂ ಧಾರ್ಮಿಕ, ಕೌಟುಂಬಿಕ ಕಾರ್ಯ ಕ್ರಮಗಳಲ್ಲಿ ಮಹಿಳೆಯನ್ನು ದೂರವಿಡುವ ವ್ಯವಸ್ಥೆಯನ್ನು ಕಾಣುತ್ತೇವೆ. ಅವಳು ಅಪಶಕುನ, ಅನಿಷ್ಠ ಎಂಬಿತ್ಯಾದಿ ಭಾವನೆಗಳು ಹೊರಬರುತ್ತಿರುವುದು ಕಂಡುಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವೈಧವ್ಯ ಎನ್ನುವುದು ಹೆಣ್ಣಿನ ಜೀವನದಲ್ಲಿ ಸಹಿಸಲಾಗದ ಒಂದು ಶೋಷಣೆಯಾಗಿದೆ.
ಬಂಜೆತನ ಒಂದು ವೈದ್ಯಕೀಯ ಸಮಸ್ಯೆಯಾಗಿದ್ದರೂ ಸಹ ಮೌಢ್ಯತೆ ಯಿಂದಾಗಿ ಅವಮಾನ ಮತ್ತು ಗೌಪ್ಯತೆಗೆ ಸಿಲುಕಿದೆ. ಇದೊಂದು ಶಾಪವಾಗಿ ಪರಿಣಮಿಸಿದೆ. ಸೀಮಂತ, ನಾಮಕರಣ, ಜವಳ ಇತ್ಯಾದಿ ಆಚರಣೆಗೆ ಮಕ್ಕಳಿಲ್ಲದ ಹೆಣ್ಣು ಮಕ್ಕಳನ್ನು ದೂರವಿಡುತ್ತಾರೆ. ದೇವದಾಸಿ ಪದ್ಧತಿ, ಬೆತ್ತಲೆ ಸೇವೆ ಇವು ತುಂಬಾ ಪ್ರಾಚೀನವಾದ ಅಮಾನವೀಯವಾದ ಪದ್ಧತಿಗಳು ಧಾರ್ಮಿಕ ನಂಬಿಕೆಗಳ ಭಾಗವಾಗಿ ಬೆಳೆದು ಬಂದಿವೆ.
ಇನ್ನೊಂದು ಮುಖ್ಯ ಮೂಢ ನಂಬಿಕೆ ಎಂದರೆ `ಜ್ಯೋತಿಷ್ಯ’ ಇದು ಮಹಿಳೆಯರ ಪಾಲಿನ ದೊಡ್ಡ ವೈರಿ ಎಂದೇ ಹೇಳಬಹುದು. ಇಂದು ಟಿ.ವಿ., ಪತ್ರಿಕೆ ಹೀಗೆ ಎಲ್ಲೆಲ್ಲೂ ಇವರದೇ ಹಾವಳಿ.ಜ್ಯೋತಿಷ್ಯಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲದಿದ್ದರೂ ಇವರ ಮೊರೆ ಹೋಗುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಇಂದು ಯಾವುದು ನಂಬಿಕೆ, ಯಾವುದು ಮೂಢನಂಬಿಕೆ ಎಂದು ವರ್ಗೀಕರಣ ಮಾಡುವುದು ಕಷ್ಟ ಸಾಧ್ಯವಾಗಿದೆ. ಮಹಿಳೆಯರೇ ಹೆಚ್ಚಾಗಿ ಈ ಮೂಢನಂಬಿಕೆಗಳಿಗೆ ಒಳಪಡುತ್ತಾರೆ ಎಂಬ ಭಾವನೆಯಿದೆ. ಇದಕ್ಕೆ ಕೆಲವು ಅಂಶಗಳಾದ ಶಿಕ್ಷಣದ ಕೊರತೆ, ಬಡತನ, ಅಜ್ಞಾನ, ಮಹಿಳೆ ಅಬಲೆ ಎಂಬ ಮಾತು ಹೀಗೆ ಹಲವು ಅಂಶಗಳು ಕಾರಣವಾಗಬಹುದಾದರೂ ವೈಚಾರಿಕತೆ, ವೈಜ್ಞಾನಿಕ ಭಾವನೆಗಳು ಮಹಿಳೆಯರಲ್ಲಿ ಹೆಚ್ಚುತ್ತಿ ರುವುದರಿಂದ ಈ ಮೂಢನಂಬಿಕೆಗಳಿಂದ ಇನ್ನಾ ದರೂ ಹೊರ ಬರಬಹುದೆಂಬ ಆಶಾಭಾವನೆ ಹೊಂದಿದ್ದೇವೆ ಎಂದು ತಿಳಿಸಿದರು.
ಶ್ರೀಮತಿ ಬಿ. ಮಂಜುಳಾ ರಾಜಶೇಖರ್ ಸ್ವಾಗತಿಸಿದರು. ಅಧಮ್ಯ ಕಲಾ ತಂಡದ ಶ್ರೀಮತಿ ಗೀತಾ ಮಾಂತೇಶ್ ಮತ್ತು ತಂಡದವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.