ದಾವಣಗೆರೆ, ನ.27- ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ರೆಗ್ಯುಲೇಟರಿ ಬೋರ್ಡ್ ವತಿಯಿಂದ ದಾವಣಗೆರೆ ಮತ್ತು ಚಿತ್ರದುರ್ಗ ನಗರಗಳಲ್ಲಿರುವ ಎಲ್ಲಾ ಮನೆಗಳಿಗೂ ಪೈಪ್ ಮೂಲಕ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆ ಯೋಜನೆಯ ಕುರಿತು ಸಂಸದ ಜಿ.ಎಂ.ಸಿದ್ಧೇಶ್ವರ ಅವರು ಇಂದು ಯೂನಿಸಾನ್ ಕಂಪನಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಈ ಯೋಜನೆಗೆ 2018 ರಲ್ಲಿ ಭೂಮಿ ಪೂಜೆ ನೆರವೇರಿಸಲಾಗಿತ್ತು. ಕೇಂದ್ರ ಸರ್ಕಾರದ ಪೆಟ್ರೋಲಿಯಂ ಸಚಿವಾಲಯ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ದೇಶದ ಒಟ್ಟು 86 ಭೌಗೋಳಿಕ ಪ್ರದೇಶಗಳನ್ನು ವಿವಿಧ ಕಂಪನಿಗಳಿಗೆ ಹಂಚಿಕೆ ಮಾಡಲಾಗಿದೆ. ಅದರಂತೆ ಮೆ. ಯೂನಿಸಾನ್ ಎನ್ವಿಯಾರ್ನ್ ಪ್ರೈವೇಟ್ ಲಿಮಿಟೆಡ್ ಇವರಿಗೆ ಚಿತ್ರದುರ್ಗ ಮತ್ತು ದಾವಣಗೆರೆ ಭೌಗೋಳಿಕ ಪ್ರದೇಶಗಳನ್ನು ಹಂಚಿಕೆ ಮಾಡಲಾಗಿದೆ. ಮುಂಬರುವ ಏಳೆಂಟು ವರ್ಷಗಳಲ್ಲಿ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಸುಮಾರು ಒಂದು ಲಕ್ಷದ ಹತ್ತು ಸಾವಿರದಷ್ಟು ಮನೆಗಳಿಗೆ ಪೈಪ್ ಗ್ಯಾಸ್ ಸಂಪರ್ಕ ಕಲ್ಪಿಸುವ ಉದ್ದೇಶವಿದೆ ಎಂದು ಯೂನಿಸಾನ್ ಕಂಪನಿಯ ಅಡಿಷನಲ್ ಮ್ಯಾನೇಜರ್ ಸುದೀಪ್ ಶರ್ಮಾ ಮಾಹಿತಿ ಒದಗಿಸಿದರು.
ಯೂನಿಸಾನ್ ಕಂಪನಿಯವರು ಈಗಾಗಲೇ ಚಿತ್ರದುರ್ಗ ನಗರದಲ್ಲಿ ಮನೆ ಮನೆಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಕಾಮಗಾರಿಯನ್ನು ಪ್ರಾರಂಭಿಸಿದ್ದು, ಈಗ ದಾವಣಗೆರೆ ನಗರದ ಎಸ್.ಎಸ್.ಬಡಾವಣೆ ಮತ್ತು ವಿನಾಯಕ ಬಡಾವಣೆ ಈ ಎರಡು ಬಡಾವಣೆಗಳಲ್ಲಿ ಜನವರಿ ತಿಂಗಳಲ್ಲಿ ಕಾಮಗಾರಿ ಪ್ರಾರಂಭ ಮಾಡಲಿದ್ದಾರೆ. ಈ ಎರಡು ಬಡಾವಣೆಗಳಲ್ಲಿ ಯೂನಿಸಾನ್ ಕಂಪನಿಯವರು ಈಗಾಗಲೇ ಸರ್ವೆ ಕಾರ್ಯ ನಡೆಸಿದ್ದು, ಸುಮಾರು 16 ಕಿ.ಮೀ ನಷ್ಟು ಪೈಪ್ ಲೈನ್ ಕಾಮಗಾರಿ ಕೈಗೊಳ್ಳುವ ಉದ್ದೇಶ ಹೊಂದಿದ್ದಾರೆ. ಈ ಎರಡೂ ಬಡಾವಣೆಗಳಲ್ಲಿ ಕೈಗೊಳ್ಳಲಿರುವ ಕಾಮಗಾರಿಯ ಸಂಪೂರ್ಣ ವಿವರವನ್ನು ದಾವಣಗೆರೆ ಮಹಾನಗರ ಪಾಲಿಕೆಗೆ ಸಲ್ಲಿಸಲಾಗಿದ್ದು, ಪೈಪ್ ಲೈನ್ ಅಳವಡಿಸಿದ ನಂತರ ರಸ್ತೆ ದುರಸ್ತಿ ಸೇರಿದಂತೆ ಇತರೆ ಡ್ಯಾಮೇಜ್ ಚಾರ್ಜ್‍ಗಳ ಡಿಮ್ಯಾಂಡ್ ನೋಟ್ ಪಾಲಿಕೆಯವರು ನೀಡಿದ ನಂತರ ಪೈಪ್ ಲೈನ್ ಕಾಮಗಾರಿ ಪ್ರಾರಂಭಿಸುವುದಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಯೂನಿಸಾನ್ ಕಂಪನಿಯ ಅಡಿಷನಲ್ ಜನರಲ್ ಮ್ಯಾನೇಜರ್ ಸಂದೀಪ್ ಕುಮಾರ್ ಶರ್ಮಾ ಸಂಸದರಿಗೆ ತಿಳಿಸಿದರು.
ಗೇಲ್ ಕಂಪನಿಯ ನ್ಯಾಚುರಲ್ ಗ್ಯಾಸ್ ಪೈಪ್ ಲೈನ್‌ನ ಪ್ಲಾಂಟ್ ಚಿತ್ರದುರ್ಗದಲ್ಲಿದ್ದು, ಚಿತ್ರದುರ್ಗದಿಂದ ಸುಮಾರು 60 ಕಿ.ಮೀ ಉದ್ದದ ಪೈಪ್ ಲೈನ್ ಮಾಡಿ ದಾವಣಗೆರೆ ನಗರದ ಸಮೀಪ 1 ಎಕರೆ ಜಾಗದಲ್ಲಿ ಗ್ಯಾಸ್ ರಿಸೀವಿಂಗ್ ಸ್ಟೇಷನ್ ನಿರ್ಮಾಣ ಮಾಡಲಾಗುವುದು ಎಂದರು.
ಗ್ಯಾಸ್ ರಿಸಿವಿಂಗ್ ಸ್ಟೇಷನ್ ನಿರ್ಮಾಣ ಮಾಡಲು ಒಂದು ಎಕರೆ ಜಮೀನಿನ ಹುಡುಕಾಟದಲ್ಲಿರುವುದಾಗಿ ಸಂಸದರ ಗಮನ ಸೆಳೆದರು. ತಕ್ಷಣ ಜಿಲ್ಲಾಧಿಕಾರಿಯವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿದ ಸಂಸದರು, ಯೂನಿಸಾನ್ ಕಂಪನಿಯವರ ಜೊತೆ ಮಾತನಾಡಿ, ನಗರದ ಸಮೀಪ ಕಂಪನಿಯ ಬೇಡಿಕೆಗೆ ಅನುಸಾರ ಜಮೀನು ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು. ಜಮೀನು ಲಭ್ಯತೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹೆದ್ದಾರಿ ಪಕ್ಕದಲ್ಲಿ ಪೈಪ್ ಲೈನ್ ಅಳವಡಿಸಲು ಅನುಮತಿ ನೀಡಿದ ತಕ್ಷಣ ಚಿತ್ರದುರ್ಗದಿಂದ ದಾವಣಗೆರೆ ನಗರಕ್ಕೆ ಪೈಪ್ ಲೈನ್ ಕಾಮಗಾರಿ ಪ್ರಾರಂಭಿಸುವುದಾಗಿ ಶರ್ಮಾ ತಿಳಿಸಿದರು.
ಒಟ್ಟಾರೆಯಾಗಿ ಜನವರಿಯಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿ ಈ ಎರಡೂ ಬಡಾವಣೆಗಳಲ್ಲಿ ಕೆಲಸ ಪ್ರಾರಂಭವಾದ ತಕ್ಷಣ ಉಳಿದ ವಾರ್ಡುಗಳಿಗೆ ಅನುಮತಿ ಕೋರಿ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದರೆ ಅನುಮತಿ ನೀಡುವುದಾಗಿ ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ತಿಳಿಸಿದರು.
ಸಭೆಯಲ್ಲಿ ಸಂಪರ್ಕಾಧಿಕಾರಿ ಸುನಿಲ್ ಪೂಜಾರಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಉಪಸ್ಥಿತರಿದ್ದರು.