ಕಾಂಗ್ರೆಸ್ ಅವಧಿಯಲ್ಲಿ ಸರ್ಕಾರಿ ಜಾಗ ಒತ್ತುವರಿಯಾಗಿಲ್ಲ
ಸಂಸದರು ಮಾಡಿದ್ದೇನು ?
ಸಂಸದ ಜಿ.ಎಂ.ಸಿದ್ದೇಶ್ವರ ಅವರು ಜವಳಿ ಪಾರ್ಕ್ ನಿರ್ಮಿಸುವುದಾಗಿ ಹೇಳಿ 12ಎಕರೆ ಜಾಗವನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ಡಿ.ಬಸವರಾಜ್ ಆರೋಪಿಸಿದರು.
ಸಂಸದರು ಜಿಎಂಐಟಿ ಯಲ್ಲಿ 35 ಎಕರೆ ಏಕ ನಿವೇಶನವನ್ನಾಗಿ ಮಾಡಿಸಿಕೊಂಡಿದ್ದಾರೆ ಎಂದು ಎ. ನಾಗರಾಜ್ ಹೇಳಿದರು.
ದಾವಣಗೆರೆ, ನ.21- ದೂಡಾದಲ್ಲಿ ಕಾಂಗ್ರೆಸ್ ಆಡಳಿತವಾಧಿಯಲ್ಲಿ ಸರ್ಕಾರಿ ಜಾಗಗಳ ಒತ್ತುವರಿಯಾಗಿಲ್ಲ. ಪ್ರಚಾರಕ್ಕಾಗಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕಮಾರ್ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಡಿ.ಬಸವರಾಜ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಧಿಕಾರಕ್ಕೆ ಬಂದು ಒಂದು ವರ್ಷದ ಸಾಧನೆಗಳ ಬಗ್ಗೆ ಹೇಳಿಕೆ ನೀಡುವ ಬದಲು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರು ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದ್ದಾಗಿ ಹೇಳಿದರು.
ಎಸ್ಪಿ ಕಚೇರಿ ಬಳಿಯ ಫ್ಲೈ ಓವರ್, ರಿಂಗ್ ರಸ್ತೆಯಲ್ಲಿ ಅತ್ಯಾಧುನಿಕ ಗಡಿಯಾರ, ಪಿ.ಬಿ. ರಸ್ತೆಯಲ್ಲಿ ಅಲಂಕಾರಿಕ ವಿದ್ಯುತ್ ದೀಪಗಳು, ದೂಡಾದಿಂದ ಸಾವಿರಾರು ಟ್ರೀ ಗಾರ್ಡ್ಗಳ ಅಳವಡಿಕೆ, ಗಾಜಿನ ಮನೆ, ಎಸ್.ಎಸ್. ಉದ್ಯಾನವನ, ವಿಶ್ವೇಶ್ವರಯ್ಯ ಉದ್ಯಾನವನ, ಸೇವಾಲಾಲ್ ಉದ್ಯಾನವನ, ಮಾತೃಧಾಮೆ ಹೀಗೆ 31 ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕಾಂಗ್ರೆಸ್ ಆಡಳಿತಾವಧಿ ಅಭಿವೃದ್ಧಿ ಪರ್ವ ಎಂದು ಹೇಳಿದರು.
ಅಯೂಬ್ ಪೈಲ್ವಾನ್ ಹಾಗೂ ಶಾಮನೂರು ರಾಮಚಂದ್ರಪ್ಪ ಅವರು ದೂಡಾ ಅಧ್ಯಕ್ಷರಾಗಿದ್ದಾಗ ನೂರಾರು ಕೋಟಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಬಾತಿ ಕೆರೆ ಬಳಿ ಒತ್ತುವರಿ ಮಾಡಿಕೊಂಡಿರುವ ಬಡಾವಣೆ ಮಾಲೀಕರು ಬೆಂಗಳೂರಿನವರು. ಅದನ್ನು ವಾಪಾಸ್ ಪಡೆದಿರುವುದು ಸ್ವಾಗತಾರ್ಹ ಎಂದರು.
ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಮಾತನಾಡಿ, ಎಸ್.ಎಸ್. ಮಾಲ್ ಬಗ್ಗೆ ದೂಡಾ ಅಧ್ಯಕ್ಷರು ಸುಳ್ಳು ಆರೋಪ ಮಾಡಿದ್ದಾರೆ. ಗಾಂಜಿ ವೀರಪ್ಪನವರಿಗೆ ಸೇರಿದ 9 ನಿವೇಶನಗಳನ್ನು ಖರೀದಿಸಿ ಏಕ ನಿವೇಶನವನ್ನಾಗಿ ಕಾನೂನಾತ್ಮಕವಾಗಿಯೇ ಮಾಡಿಕೊಳ್ಳಲಾಗಿದೆ ಎಂದರು.
ಯಾವುದೇ ಸರ್ಕಾರಿ ಜಮೀನು ಅತಿಕ್ರಮಿಸದೆ ನ್ಯಾಯಯುತವಾಗಿ ಕಟ್ಟಡ ಕಟ್ಟಲಾಗಿದೆ. ಕಟ್ಟಡ ಕಟ್ಟಲು ಮಹಾನಗರ ಪಾಲಿಕೆಯಿಂದ ಎನ್ಒಸಿ ನೀಡಲಾಗಿದೆ. ಬಿಜೆಪಿ ನಾಯಕರು ಹಲವಾರು ಬಾರಿ ಈ ಬಗ್ಗೆ ಸುಳ್ಳು ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ದಾಖಲೆಗಳಿದ್ದರೆ, ಅಕ್ರಮ ನಡೆದಿದ್ದರೆ ಬೇಕಾದರೆ ಕಾನೂನು ಕ್ರಮ ಕೈಗೊಳ್ಳಲಿ ಎಂದರು.
ಪಾಲಿಕೆ ಸದಸ್ಯ ಕೆ.ಚಮನ್ ಸಾಬ್, ಬಿಜೆಪಿ ಮುಖಂಡರು ಪ್ರಚಾರಕ್ಕಾಗಿ ಅನಗತ್ಯ ಆರೋಪ ಮಾಡದೆ, ತಪ್ಪಿದ್ದರೆ ಕಾನೂನು ಕ್ರಮ ಕೈಗೊಳ್ಳಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಮಂಜುನಾಥ ಗಡಿಗುಡಾಳ್, ಮುಖಂಡರಾದ ಲಿಯಾಖತ್ ಅಲಿ, ಕೆ.ಎಂ. ಮಂಜುನಾಥ್, ಬಿ.ಶಿವಕುಮಾರ್, ಬಿ.ಹೆಚ್. ಉದಯ ಕುಮಾರ್, ಬಾಷಾ ಇತರರಿದ್ದರು.