ಭದ್ರಾ ನಾಲೆಗೆ ಅಕ್ರಮ ಪಂಪ್ ಸೆಟ್ : ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ರೈತರ ತಿರ್ಮಾನ

ಮಲೆಬೆನ್ನೂರು, ನ.21 – ಭದ್ರಾನಾಲೆಗೆ ಅಕ್ರಮವಾಗಿ  ಅಳವಡಿಸಿರುವ ಪಂಪ್ ಸೆಟ್‍ಗಳನ್ನು ತೆರವು ಮಾಡುವಂತೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ರಾಜ್ಯ ಸರ್ಕಾರ ಅಥವಾ ಜಿಲ್ಲಾಡಳಿತ ಇದುವರೆಗೂ ಅನುಷ್ಠಾನಗೊಳಿಸದಿರುವ ಕಾರಣ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ತಿರ್ಮಾನಿಸಿದ್ದೇವೆ ಎಂದು ಹೈಕೋರ್ಟ್‍ಗೆ ದೂರು ನೀಡಿದ್ದ ಹೊಳೆಸಿರಿಗೆರೆ ಗ್ರಾಮದ ಎಂ. ತಿಪ್ಪೆರುದ್ರಪ್ಪ ತಿಳಿಸಿದರು.

ಶನಿವಾರ ಇಲ್ಲಿನ ನೀರಾವರಿ ಇಲಾಖೆ ಆವರಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಂಕ 4.11.2019 ರಂದು ಕೋರ್ಟ್ ತೀರ್ಪು ಬಂದ ನಂತರ ಆದೇಶ ಪ್ರತಿಗಳನ್ನು ನಾವೇ ಖುದ್ದು ಸಂಬಂಧ ಪಟ್ಟ ಇಲಾಖೆಗಳಿಗೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

ಅಕ್ರಮ ಪಂಪ್ ಸೆಟ್‍ಗಳನ್ನು ತೆರವುಗೊಳಿಸುವ ಜವಾಬ್ದಾರಿ ಹೊಂದಿ ರುವ ನೀರಾವರಿ ಇಲಾಖೆ ಅಧಿಕಾರಿ ಗಳು ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಬೆಸ್ಕಾಂ, ಹೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಈಗಲೂ ಅಕ್ರಮ ಪಂಪ್ ಸೆಟ್‍ಗಳನ್ನು ರಾಜರೋಷ ವಾಗಿ ನಾಲೆಗೆ ಹಾಕಿದ್ದಾರೆಂದು ಪೋಟೋ ಸಮೇತ ತೋರಿಸಿದರು. ಪೋಲಿಸ್ ರಕ್ಷಣೆ ಪಡೆದು ಪಂಪ್‍ಸೆಟ್ ತೆರವುಗೊಳಿಸ ಬೇಕಾದ ಅಧಿಕಾರಿಗಳನ್ನು ಕೇಳಿದರೆ ಒಬ್ಬರ ಮೇಲೆ ಒಬ್ಬರು ಹೇಳಿ ಜಾರಿ ಕೊಳ್ಳುತ್ತಿದ್ದಾರೆಂದು ದೂರಿದ ತಿಪ್ಪೇರುದ್ರಪ್ಪ ಅವರು, ಅಧಿಕಾರಿಗಳ ನಿರ್ಲಕ್ಷದಿಂದ ಬೇಸತ್ತು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಮುಂದಾಗಿದ್ದೇನೆ, ಅಕ್ರಮ ಪಂಪ್‍ಸೆಟ್‌ಗಳನ್ನು ತೆರವು ಮಾಡದಿದ್ದರೆ ಮುಂದಿನ ಬೇಸಿಗೆ ಬೆಳೆಯಲು ಕೊನೆ ಭಾಗಕ್ಕೆ ನೀರು ತಲಪುವುದು ಅನುಮಾನವಾಗಿದೆ. ಅಷ್ಟೇ ಅಲ್ಲ, ತೋಟಗಳು ನೀರಿಲ್ಲದೆ ಒಣಗುವ ಆಂತಕವಿದೆ ಎಂದರು. 

ಕೊನೆ ಭಾಗದ ರೈತರಾದ ಆರ್.ಟಿ. ಸೋಮಶೇಖರ್, ಕೆ.ರಾಜಪ್ಪ, ಎಂ. ದೇವರಾಜ್, ಎಂ.ವಿ. ಹನುಮಂತಪ್ಪ, ಕೆ.ಶಿವಶಂಕರ್, ಎಂ. ರೇವಣಸಿದ್ದಪ್ಪ, ಕೆ. ಶಿವಶಂಕರ್‌, ಪ್ರಭುಗೌಡ, ಕುಂಬಳೂರಿನ ಕೆ.ಪಾರ್ಥಪ್ಪ, ಕೆ.ಎನ್.ಹನುಮಂತಪ್ಪ, ಗಂಗಾಧರ್, ಮಂಜುನಾಥ್, ಸಿ.ಶಾಂತಪ್ಪ ಮತ್ತಿತರ ರೈತರು ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!