ದಾವಣಗೆರೆ, ನ.21- ಇಲ್ಲಿನ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ ಪಿ ನರಸಿಂಹ ವಿ. ತಾಮ್ರಧ್ವಜ ಅವರು ತಮ್ಮ ಜನ್ಮ ದಿನವನ್ನು ನಿರಾಶ್ರಿತರ ಮತ್ತು ಹಿರಿಯ ನಾಗರಿಕರಿಗೆ ಹಣ್ಣು-ಹಂಪಲು ವಿತರಿಸಿ ಯೋಗಕ್ಷೇಮ ವಿಚಾರಿಸುವ ಮುಖೇನ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಅಲ್ಲದೇ ಕಾನೂನು ತಿಳುವಳಿಕೆ ನೀಡಿದ್ದು ವಿಶೇಷ.
ತುರ್ಚಘಟ್ಟ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ನಿರಾಶ್ರಿತರಿಗೆ ಮತ್ತು ವೃದ್ದರಿಗೆ ಹಣ್ಣುಗಳನ್ನು ವಿತರಿಸಿದರು. ಅಲ್ಲದೇ ಆರೋಗ್ಯದ ಬಗ್ಗೆ ವಿಚಾರಿಸಿದರು. ಅಂತೆಯೇ ಹರಿಹರ ತಾಲ್ಲೂಕಿನ ಗುತ್ತೂರು ಗ್ರಾಮದಲ್ಲಿರುವ ಶ್ರೀ ಶಕ್ತಿ ಹಿರಿಯ ನಾಗರಿಕರ ವಸತಿ ಕೇಂದ್ರಕ್ಕೂ ಭೇಟಿ ನೀಡಿ ಅಲ್ಲಿನ ಹಿರಿಯ ನಾಗರಿಕರಿಗೆ ಹಣ್ಣುಗಳನ್ನು ವಿತರಿಸಿ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮಿಸಿದರು.
ನಿರಾಶ್ರಿತರ ವಾಸ್ತವ್ಯ ಹಾಗೂ ಆರೋಗ್ಯವನ್ನು ವಿಚಾರಿ ಸುವುದರ ಜೊತೆಗೆ ಅವರಿಗೆ ತಮ್ಮ ಮುಂದಿನ ಜೀವನದ ಬಗ್ಗೆ ಮಾನಸಿಕವಾಗಿ ಸದೃಢಗೊಳ್ಳುವಂತೆ ನರಸಿಂಹ ವಿ. ತಾಮ್ರ ಧ್ವಜ ಅವರು ಸೂಕ್ತ ಸಲಹೆಗಳನ್ನು ನೀಡಿದರು. ಇಲಾಖೆ ವತಿಯಿಂದ ERSS-112 ಬಗ್ಗೆ ಮಾಹಿತಿ ನೀಡಿ ತಮಗೆ ಯಾವುದೇ ರೀತಿಯ ಸಮಸ್ಯೆ ಹಾಗೂ ಸಹಾಯ ಬೇಕಾದಲ್ಲಿ 112ಕ್ಕೆ ಕರೆ ಮಾಡುವ ಮುಖಾಂತರ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಆತ್ಮಸ್ಥೈರ್ಯ ತುಂಬಿದರು.