ರೈತರು ಕಡೆಯ ದಿನಾಂಕದೊಳಗೆ ಬೆಳೆ ವಿಮೆ ಮಾಡಿಸಲು ಸೂಚನೆ

ದಾವಣಗೆರೆ, ನ.19- 2020-21ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸುವ ಸಂಬಂಧ ಹೆಚ್ಚಿನ ಪ್ರಚಾರ ನೀಡಿ, ವಿಮೆ ಮಾಡಿಸಬೇಕೆಂದು ಜಿಲ್ಲಾಧಿ ಕಾರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರೈತ ಉತ್ಪಾದಕ ಸಂಸ್ಥೆಗಳ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ ಸಭೆ ಹಾಗೂ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಪ್ರಸಕ್ತ ಸಾಲಿನಲ್ಲಿ ದಾವಣಗೆರೆ, ಹರಿಹರ, ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿಗೆ ಹೊಸದಾಗಿ 4 ರೈತ ಉತ್ಪಾದಕ ಸಂಸ್ಥೆಗಳನ್ನು ರಚನೆ ಮಾಡಲು ಗುರಿ ಹೊಂದಲಾಗಿದೆ. ದಾವಣಗೆರೆ ತಾಲ್ಲೂಕು ತೆಂಗು, ಹರಿಹರ ತಾಲ್ಲೂಕು ವೀಳ್ಯೆದೆಲೆ, ಹೊನ್ನಾಳಿ ತಾಲ್ಲೂಕು ಬಾಳೆ ಮತ್ತು ತರಕಾರಿ, ನ್ಯಾಮತಿ ತಾಲ್ಲೂಕಿನಲ್ಲಿ ಶೇಂಗಾ ಬೆಳೆಯಲ್ಲಿ ಮೌಲ್ಯವರ್ಧನೆಗಾಗಿ ರೈತ ಉತ್ಪಾದಕ ಸಂಸ್ಥೆಯನ್ನು ರಚಿಸುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು.

ಇದೇ ಸಂದರ್ಭದಲ್ಲಿ ಹಿಂಗಾರು ಮತ್ತು ಬೇಸಿಗೆ ಬೆಳೆ ವಿಮೆ ಕುರಿತಂತೆ ಸಿದ್ಧಪಡಿಸಲಾದ ಕರಪತ್ರವನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು. ಕೊನೆಯ ದಿನಾಂಕದೊಳಗೆ ರೈತರು ತಮ್ಮ ಬೆಳೆ ವಿಮೆಯನ್ನು ನೋಂದಣಿ ಮಾಡಿಕೊಳ್ಳಲು ಕೋರಿದ ಅವರು 2019-20ನೇ ಸಾಲಿನಲ್ಲಿ 25,734 ರೈತರು ರೂ. 385.98 ಲಕ್ಷ ಪ್ರೀಮಿಯಂ ಪಾವತಿಸಿ ನೋಂದಣಿ ಮಾಡಿಕೊಂಡಿದ್ದು, ರೂ. 1,536.14 ಲಕ್ಷ ಬೆಳೆ ವಿಮಾ ಮೊತ್ತ ರೈತರ ಖಾತೆಗೆ ಜಮಾವಣೆ ಮಾಡಿರುವುದಾಗಿ ತಿಳಿಸಿದರು.

ತೋಟಗಾರಿಕೆ ಬೆಳೆಗಳಲ್ಲಿ 6,563 ರೈತರು ಬೆಳೆ ವಿಮೆ ಮಾಡಿಸಿದ್ದು, ಒಟ್ಟು ರೂ.346.93 ಲಕ್ಷ ಪ್ರೀಮಿಯಂ ಮೊತ್ತ ಪಾವತಿಸಿದ್ದು, ರೂ. 1,257.42 ಲಕ್ಷ ಬೆಳೆ ವಿಮೆ ರೈತರ ಖಾತೆಗೆ ಜಮೆ ಆಗಿರುವುದಾಗಿ ತಿಳಿಸಿದರು.

ಸಭೆಯಲ್ಲಿ ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮತ್ತು ಇತರೆ ಅಧಿಕಾರಿಗಳು ಇದ್ದರು.

error: Content is protected !!