ಜಿಲ್ಲೆಯಲ್ಲಿ 4 ರೈತ ಉತ್ಪಾದಕ ಸಂಸ್ಥೆಗಳ ರಚನೆ

ದಾವಣಗೆರೆ, ನ. 18-  ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ನಾಲ್ಕು ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿಂದು ನಡೆದ ರೈತ ಉತ್ಪಾದಕ ಸಂಸ್ಥೆಗಳ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ ಸಭೆ ಹಾಗೂ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಕರ್ನಾಟಕ ರೈತ ಸುರಕ್ಷೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನ ಕುರಿತ ಸಭೆಯಲ್ಲಿ ತೀರ್ಮಾನಿಸಲಾಯಿತು.

ದಾವಣಗೆರೆ ತಾಲ್ಲೂಕಿನಲ್ಲಿ ತೆಂಗು, ಹರಿಹರ ತಾಲ್ಲೂಕಿನಲ್ಲಿ ವೀಳ್ಯೆದೆಲೆ, ಹೊನ್ನಾಳಿ ತಾಲ್ಲೂಕಿನಲ್ಲಿ ಬಾಳೆ ಹಾಗೂ ತರಕಾರಿ ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ ಶೇಂಗಾ ಬೆಳೆಯಲ್ಲಿ ಮೌಲ್ಯವರ್ಧನೆ ಗಾಗಿ ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಲು ನಿರ್ಣಯಿಸಲಾಯಿತು.

ಇದೇ ವೇಳೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು, ಹಿಂಗಾರು ಮತ್ತು ಬೇಸಿಗೆ ಬೆಳೆ ವಿಮೆ ಕುರಿತಂತೆ ಸಿದ್ಧಪಡಿಸಲಾದ ಕರಪತ್ರಗಳನ್ನು ಬಿಡುಗಡೆ ಮಾಡಿ, 2019-20ನೇ ಸಾಲಿನಲ್ಲಿ 25,734 ರೈತರು  385.98 ಲಕ್ಷ ರೂ. ಪ್ರೀಮಿಯಂ ಪಾವತಿಸಿ ನೋಂದಣಿ ಮಾಡಿಕೊಂಡಿದ್ದಾರೆ.  1536.14 ಲಕ್ಷ  ರೂ. ಬೆಳೆ ವಿಮಾ ಮೊತ್ತ ರೈತರ ಖಾತೆಗಳಿಗೆ ಜಮಾವಣೆ ಮಾಡಿರುವುದಾಗಿ ತಿಳಿಸಿದರು. 

ತೋಟಗಾರಿಕೆ ಬೆಳೆಗಳಲ್ಲಿ 6,563 ರೈತರು ಬೆಳೆ ವಿಮೆ ಮಾಡಿಸಿದ್ದು, ಒಟ್ಟು346.93 ಲಕ್ಷ ರೂ. ಪ್ರೀಮಿಯಂ ಮೊತ್ತ ಪಾವತಿಸಿದ್ದಾರೆ.  1257.42 ಲಕ್ಷ ರೂ. ಬೆಳೆ ವಿಮೆ ರೈತರ ಖಾತೆಗೆ ಜಮೆಯಾಗಿದೆ ಎಂದರು. 

error: Content is protected !!