ದಾವಣಗೆರೆ, ನ.17- ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಪಡಿತರ ವಿತರಣೆ ತಾರತಮ್ಯ ನಿವಾರಣೆಗೆ ಒತ್ತಾಯಿಸಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಇಂದು ಪ್ರತಿಭಟನಾ ಧರಣಿ ನಡೆಸಲಾಯಿತು.
ಉಪವಿಭಾಗಾಧಿಕಾರಿ ಕಚೇರಿ ಎದುರು ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿ ಕುಮಾರ್ ನೇತೃತ್ವದಲ್ಲಿ ಪ್ರತಿಭಟಿಸಿ ನಂತರ ಉಪ ವಿಭಾಗಾಧಿಕಾರಿ ಕಚೇರಿ ಶಿರಸ್ತೇದಾರ್ ಮುಖಾಂ ತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
1970ರಿಂದ 2020ರವರೆಗೆ ಬಗರ್ ಹುಕ್ಕುಂದಾರರಾದ ಸಣ್ಣ ರೈತರಿಗೆ ಈವರೆಗೆ ಹಕ್ಕುಪತ್ರ ನೀಡಿಲ್ಲ. ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಕೆಲ ಇಲಾಖೆಗಳು ಮಾಡುತ್ತಿದ್ದು, ಈ ವಿಷಯದ ಬಗ್ಗೆ ತುರ್ತು ಸಭೆ ಕರೆದು, ಸಮಸ್ಯೆ ಪರಿಹರಿಸಬೇಕು. ಅಸಮರ್ಪಕ ಜೀವನ ನಡೆಸುತ್ತಿ ರುವ ಸಾರ್ವಜನಿಕರಿಗೆ ಪಡಿತರ ಚೀಟಿಯಲ್ಲಿನ ತಾರತಮ್ಯವನ್ನು ಸರಿಪಡಿಸಬೇಕು. ವಿಧವಾ ವೇತನ, ವೃದ್ಧಾಪ್ಯ ವೇತನಕ್ಕಾಗಿ ಸುಮಾರು ವರ್ಷಗಳಿಂದ 60 ವರ್ಷದ ನಂತರದ ವ್ಯಕ್ತಿಗಳು, ವಿಧವೆಯರು ಪದೇ ಪದೇ ತಾಲ್ಲೂಕು ಕಚೇರಿಗೆ ಅಲೆದಾಡುತ್ತಿದ್ದು, ಈವರೆಗೂ ಫಲಾನುಭವಿಗಳಿಗೆ ಸಿಗದ ಸೂಕ್ತ ಸಹಾಯ ಧನವನ್ನು ತಕ್ಷಣವೇ ಕೊಡಿಸಬೇಕು. ಜಿಲ್ಲೆಯಲ್ಲಿ ಕೆರೆಗಳು ಒತ್ತುವರಿ ಯಾಗಿದ್ದು, ಸುಮಾರು 5 ವರ್ಷಗಳಿಂದಲೂ ಸಭೆ ಸಹ ನಡೆಸಿಲ್ಲ. ಇನ್ನಾದರೂ ಕೆರೆಗಳ ಒತ್ತುವರಿ ತೆರವು ಮಾಡಬೇಕು ಎಂದು ಬಲ್ಲೂರು ರವಿಕುಮಾರ್ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಆವರಗೆರೆ ಇ. ಬಸವರಾಜಪ್ಪ, ಕೆ.ಎಸ್. ಪ್ರಸಾದ, ರಾಂಪುರದ ಆರ್.ಜಿ. ಬಸವರಾಜ, ಎಂ. ಪರಶುರಾಮ ರೆಡ್ಡಿ, ಪಾಮೇನಹಳ್ಳಿ ಲಿಂಗರಾಜ, ಗೆದ್ಲಹಟ್ಟಿ ಹನುಮಂತಪ್ಪ, ಬೂದಾಳ್ ಮಹೇಶ, ಬಲ್ಲೂರು ನಾಗರಾಜ, ಮಾಯಕೊಂಡ ಅಶೋಕ, ನಾಗರ ಕಟ್ಟೆ ಜಯನಾಯ್ಕ, ಆಲೂರು ಟಿ.ಸಿ.ಮಂಜಪ್ಪ, ಮಾಯಕೊಂಡ ನಿಂಗಣ್ಣ, ಮಂಜುನಾಥ ಕೋಗಳಿ, ಆಲೂರು ಆರ್. ಪರಮೇಶಪ್ಪ, ನಾಗೇಂದ್ರಪ್ಪ, ಕರೇಕಟ್ಟೆ ಗದಿಗೇಶ, ಹರಿಹರದ ವಕೀಲ ಕೊಮಾರನಹಳ್ಳಿ ಮಂಜುನಾಥ, ಆರ್.ಎಚ್. ಪ್ರತಾಪ ಮಾಯಕೊಂಡ ಸೇರಿದಂತೆ ಇತರರು ಭಾಗವಹಿಸಿದ್ದರು.