ಕೂಡ್ಲಿಗಿಯಲ್ಲಿ ಕಾಲೇಜಿನತ್ತ ಸುಳಿಯದ ವಿದ್ಯಾರ್ಥಿಗಳು ವಿದ್ಯಾರ್ಥಿಗಳಿಗಾಗಿ ಕಾದು ಕಾದು ಸುಸ್ತಾದ ಉಪನ್ಯಾಸಕರು

ಕೂಡ್ಲಿಗಿ, ನ.17- ಮಂಗಳವಾರ ಇಡೀ ರಾಜ್ಯಾದ್ಯಂತ ಪದವಿ ಕಾಲೇಜುಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ದೊರೆತರೂ, ಪಟ್ಟಣದಲ್ಲಿ ಮಾತ್ರ ಸರ್ಕಾರಿ ಪದವಿ ಕಾಲೇಜಿನ ಕಡೆಗೆ ವಿದ್ಯಾರ್ಥಿಗಳ ಸುಳಿವೇ ಕಾಣಲಿಲ್ಲ. ಆಗ ಬರುತ್ತಾರೆ ಈಗ ಬರುತ್ತಾರೆ ಎಂದು ಉಪನ್ಯಾಸಕರು ಕಾದು ಕಾದು ಸುಸ್ತಾದರೂ ಸಂಜೆಯಾದರೂ ವಿದ್ಯಾರ್ಥಿಗಳು ಬರಲಿಲ್ಲ. ಹೀಗಾಗಿ ಉಪನ್ಯಾಸಕರು ಮುಂಜಾಗೃತಾ ಕ್ರಮಕೈಗೊಂಡು ಬೆಳಿಗ್ಗೆಯಿಂದ ಸಂಜೆಯವರೆಗೆ ಕಾದು ಕಾದು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆಗೆ ತೆರಳಬೇಕಾಯಿತು. 

ಸೋಮವಾರದಿಂದಲೇ ಕಾಲೇಜು ಸ್ವಚ್ಛತೆ : ಸೋಮವಾರವೇ ಇಡೀ ಕಾಲೇಜನ್ನು ಸ್ವಚ್ಛಗೊಳಿಸಿ ಪ್ರತಿ ಕೊಠಡಿಯನ್ನೂ ಸ್ಯಾನಿಟೈಜ್ ಮಾಡಿಸಿ, ಕಾಲೇಜಿನ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಸಹ ಕೋವಿಡ್ ಪರೀಕ್ಷೆ ಮಾಡಿಸಿ ಎಲ್ಲರ ವರದಿ ನೆಗಟಿವ್ ಬಂದಿದ್ದು, ಬೋಧನೆ ಮಾಡಲು ಉತ್ಸುಕರಾಗಿದ್ದ ಉಪನ್ಯಾಸಕರಿಗೆ ಮಂಗಳವಾರ ಮಾತ್ರ ಶಾಕ್ ಕಾದಿತ್ತು. 

ಬಿ.ಎ. ಹಾಗೂ ಬಿಕಾಂ ಸೇರಿ 1172 ವಿದ್ಯಾರ್ಥಿಗಳಿದ್ದರೂ ಒಬ್ಬ ವಿದ್ಯಾರ್ಥಿಯೂ ಸಹ ಕಾಲೇಜು ಕಡೆಗೆ ಸುಳಿಯಲಿಲ್ಲ. ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮೂಲಕ ಕೋವಿಡ್ ಟೆಸ್ಟ್ ಮಾಡಲು ಎಲ್ಲಾ ರೀತಿಯ ಮುಂಜಾಗೃತಾ ಕ್ರಮಕೈಗೊಳ್ಳಲಾಗಿತ್ತು. ಆದರೂ ಸಹ ವಿದ್ಯಾರ್ಥಿಗಳು ಮಾತ್ರ ಯಾರೂ ಬರಲಿಲ್ಲ. 

ಕಾಲೇಜಿಗೆ ತಹಶೀಲ್ದಾರ್ ಭೇಟಿ : ಕೂಡ್ಲಿಗಿ  ತಹಶೀಲ್ದಾರ್ ಮಹಾಬಲೇಶ್ವರ್ ಅವರು ಇಂದು ಬೆಳಿಗ್ಗೆ ಕಾಲೇಜಿಗೆ ಭೇಟಿ ನೀಡಿ, ಪೋಷಕರ ಕಡೆಯಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳಬೇಕು. ಆರೋಗ್ಯ ಇಲಾಖೆಯಿಂದ ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ಪರೀಕ್ಷೆಯಾಗಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

error: Content is protected !!