ಬಿಎಂಶ್ರೀ ಕವನಗಳು ಹೊಸಗನ್ನಡದ ಕವಿಗಳಿಗೆ ಸ್ಫೂರ್ತಿ

ಬಿಎಂಶ್ರೀ ಕವನಗಳು ಹೊಸಗನ್ನಡದ ಕವಿಗಳಿಗೆ ಸ್ಫೂರ್ತಿ - Janathavaniದಾವಣಗೆರೆ, ನ.13- ಬಿ.ಎಂ. ಶ್ರೀಕಂಠಯ್ಯ ಅವರ ಕವನಗಳು ಜನರನ್ನು ಮೋಡಿ ಮಾಡಿ ಹಿಡಿದಿಟ್ಟಿದ್ದವು. ಮುಂದಿನ ಹೊಸಗನ್ನಡದ ಪೀಳಿಗೆಯ ಕವಿಗಳಿಗೆ ಹಾಗೂ ಅವರ ಕವಿತೆಗೆ ಸ್ಫೂರ್ತಿ ನೀಡಿದವು ಎಂದು ಹಿರಿಯ ಸಾಹಿತಿ ಪ್ರೊ. ಎಚ್.ಎಸ್. ಹರಿಶಂಕರ್ ನುಡಿದರು.

ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಅಂತರ್ಜಾಲ ಕನ್ನಡ ನುಡಿ ಹಬ್ಬ ಕಾರ್ಯಕ್ರಮದಲ್ಲಿ ಆಚಾರ್ಯ ಬಿಎಂಶ್ರೀ ಅವರ ಸಾಹಿತ್ಯ ವಿಷಯ ಕುರಿತಾಗಿ ಅವರು ಉಪನ್ಯಾಸ ನೀಡಿದರು.

ಆಧುನಿಕ ಕನ್ನಡದ ನವಯುಗದ ಪ್ರವರ್ತಕರಲ್ಲಿ ಅಗ್ರಗಣ್ಯರಾಗಿದ್ದ ಬಿಎಂಶ್ರೀ ಕನ್ನಡದ ಕಣ್ವರು. ಹೊಸಗನ್ನಡ ಕಾವ್ಯ ಕುಲಪತಿಗಳು ಎಂದು ನಾಡೇ ಗೌರವಿಸಿದೆ. ಇವರು ನವೋದಯ ಕಾವ್ಯ ಸಾಹಿತ್ಯದ ಪ್ರವರ್ತಕ, ಪಿತಾಮಹ ಎಂದೇ ಕರೆಸಿಕೊಂಡಿದ್ದಾರೆ. ಜನರಿಗೆ ತಿಳಿಯದ ಭಾಷೆಯಲ್ಲಿ ಬರೆಯುವುದರಲ್ಲಿ ಯಾವ ಬುದ್ಧಿವಂತಿಕೆಯೂ ಇಲ್ಲ. ಹೊಸಗನ್ನಡವನ್ನೇ ಎಲ್ಲರೂ ಹಿಡಿಯಬೇಕು ಎಂದು ಕರೆಕೊಟ್ಟರು. ನವೋದಯ ಕನ್ನಡ ಸಾಹಿತ್ಯಕ್ಕೆ ಅವರು ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಬಿಎಂಶ್ರೀ ಆಧುನಿಕ ಸಾಹಿತ್ಯದ ಪ್ರವರ್ತಕ. ಕನ್ನಡ ಸಾಹಿತ್ಯ ಪರಿಷತ್‌ಗೆ ಮಹಾನ್ ಕಾಯಕಲ್ಪ ತಂದುಕೊಟ್ಟ ಮಹಾನ್ ಚೇತನ. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನುಡಿ ಎಂಬ ಪತ್ರಿಕೆಯನ್ನು ಪ್ರಕಟಿಸಿದ ಪ್ರಥಮರು. ಕಸಾಪ ನಡೆಸುತ್ತಿರುವ ಪರೀಕ್ಷೆಗಳ ಆರಂಭಕ್ಕೂ ಕಾರಣೀಭೂತರಾದರು. ಪರಿಷತ್ತಿನ ಲೋಗೋ, §ಸಿರಿಗನ್ನಡಂ ಗೆಲ್ಗೆ¬ ಎಂಬ ಘೋಷವಾಕ್ಯವನ್ನು ಅನುಷ್ಠಾನಗೊಳಿಸಿದರು ಎಂದು ಸ್ಮರಿಸಿದರು.

ವೀಣಾ ಕೃಷ್ಣಮೂರ್ತಿ ಸ್ವಾಗತಿಸಿದರು. ಜಾನಪದ ಕಲಾತಂಡದ ಸದಸ್ಯೆ ರುದ್ರಾಕ್ಷಿ ಬಾಯಿ ಮತ್ತು ಸಂಗಡಿಗರು ಸುಗಮ ಸಂಗೀತ ನಡೆಸಿಕೊಟ್ಟರು.

error: Content is protected !!