ಹರಪನಹಳ್ಳಿ : ಸರ್ಕಾರಿ ನೌಕರರ ಒಕ್ಕೂಟ ಆಗ್ರಹ
ಹರಪನಹಳ್ಳಿ, ನ.12- ಸರ್ಕಾರಿ ನೌಕರರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಸಂವಿಧಾನ ವಿರೋಧಿ ತಿದ್ದುಪಡಿಗಳನ್ನು ಕೈಬಿಡುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಎಂ. ಆಂಜನೇಯ ಮಾತನಾಡಿ, ಸ್ವಾತಂತ್ರ್ಯ ಬಂದು 73 ವರ್ಷ ಕಳೆದರೂ ಸಾಂವಿಧಾನಿಕ ಹಕ್ಕುಗಳಿಗೆ ಬಹು ದೊಡ್ಡ ಪೆಟ್ಟು ನೀಡುವ ನಿಯಮಗಳನ್ನೇ ಸರ್ಕಾರ ಜಾರಿಗೊಳಿಸಲು ಹೊರಟಿರುವುದು ಆಘಾತಕಾರಿ ವಿಷಯವಾಗಿದೆ. ನೌಕರರ ಸೇವಾ ನಡತೆ ನಿಯಮಗಳನ್ನು ಪರಿಷ್ಕರಿಸಲು ಹೊರಟಾಗ ವೈಯಕ್ತಿಕ ಸ್ವಾತಂತ್ರ್ಯ ಮತ್ತು ನಾಗರಿಕ ಮೂಲಭೂತ ಹಕ್ಕುಗಳಿಗೆ ಚ್ಯುತಿ ತರುವ ಅಂಶಗಳನ್ನೇ ಉಳಿಸಿಕೊಳ್ಳುವುದರ ಜೊತೆಗೆ ಕೆಲವು ಹೊಸ ಅಂಶಗಳನ್ನು ಸೇರಿಸಿರುವುದು ಆಕ್ಷೇಪಾರ್ಹವಾಗಿದೆ ಎಂದು ಆರೋಪಿಸಿದರು.
ನೌಕರರ ನಡತೆಯನ್ನು ನಿಯಂತ್ರಿಸಿ ಆ ಮೂಲಕ ಉತ್ತಮ ಪ್ರಜಾಸ್ನೇಹಿ ಆಡಳಿತ ವ್ಯವಸ್ಥೆ ರೂಪಿಸುವುದು ಬಹು ಮುಖ್ಯವೇ. ಆದರೂ ಅದೇ ವೇಳೆ ನಡತೆ ನಿಯಮಗಳ ಲ್ಲಿರುವ ಬ್ರಿಟಿಷ್ ಕಾಲದ ವಸಾಹತು ಮನೋಧೋರಣೆಯ ಅಂಶಗಳನ್ನು ಪರಿಷ್ಕರಿಸಿ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಮೂಲಭೂತ ಹಕ್ಕು ಗಳನ್ನು ಸಂರಕ್ಷಿಸುವುದು ಮುಖ್ಯವಾ ಗಿದ್ದು, ಉದ್ದೇಶಿತ ನಡತೆ ನಿಯಮಗಳ ಜಾರಿಯ ಪ್ರಸ್ತಾವನೆಯನ್ನು ಸರ್ಕಾರ ಸಂಪೂರ್ಣ ವಾಗಿ ಕೈಬಿಡಬೇಕೆಂದು ಒತ್ತಾಯಿಸುತ್ತವೆ ಎಂದರು. ಸಂಘಟನೆಯ ಪಿ. ಬಸವರಾಜ, ಪಿ. ಮಂಜಪ್ಪ. ಈ. ಯಂಕನಾಯ್ಕ, ಮೂರ್ತಿನಾಯ್ಕ ಇನ್ನಿತರರಿದ್ದರು.