ಮಲೇಬೆನ್ನೂರು, ನ.12- ಕೊಮಾರನಹಳ್ಳಿ ಸಮೀಪದ ಗುಡ್ಡಗಾಡು ಪ್ರದೇಶದಲ್ಲಿರುವ ಮೆಕ್ಕೆಜೋಳದ ಹೊಲದಿಂದ ಮಂಗಳವಾರ ಸಂಜೆ ಕಾಣೆಯಾಗಿದ್ದ 6 ವರ್ಷದ ಜೊಯಾ ಎಂಬ ಬಾಲಕಿ ಬುಧವಾರ ಪತ್ತೆಯಾಗಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ.
ಮನೆಯವರೆಲ್ಲಾ ಮೆಕ್ಕೆಜೋಳದ ತೆನೆ ಮುರಿಯುವುದರಲ್ಲಿ ನಿರತರಾಗಿದ್ದಾಗ ಬಾಲಕಿ ನಾಪತ್ತೆಯಾಗಿದ್ದಳು. ನಂತರ ಅವಳನ್ನು ರಾತ್ರಿಯಿಡೀ ಹುಡುಕಿದರೂ ಸಿಕ್ಕಿರಲಿಲ್ಲ.
300 ಕ್ಕೂ ಹೆಚ್ಚು ಜನ ಬಾಲಕಿಯ ಹುಡುಕಾಟದಲ್ಲಿದ್ದರು. ಬಾಲಕಿಯ ಅಳುವಿನ ಸದ್ದು ಅರಣ್ಯ ಇಲಾಖೆ ನೌಕರ ಮುನ್ನಾ ಎಂಬುವವರಿಗೆ ಕೇಳಿಸಿದಾಗ ಅವಳ ಪತ್ತೆಯಾಯಿತು. ನಂತರ ಬಾಲಕಿಗೆ ನೀರು ಕುಡಿಸಿ, ಸಮಾಧಾನ ಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ.
ಕಾಡಿನಲ್ಲೇ 24 ಗಂಟೆ ಕಳೆದಿರುವ ಬಾಲಕಿ ಸದ್ಯ ಯಾವುದೇ ಪ್ರಾಣಿಗಳ ಕೈಗೆ ಸಿಗದೇ ಸುರಕ್ಷಿತವಾಗಿ ಪತ್ತೆಯಾಗಿರುವುದಕ್ಕೆ ಕುಟುಂಬದ ಸದಸ್ಯರು, ಸಂಬಂಧಿಕರು, ನಾಗರಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.