ವಾಲ್ಮೀಕಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರ ಭರವಸೆ
ಹರಪನಹಳ್ಳಿ, ಆ.9- ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನನ್ನ ಮೇಲೆ ವಿಶ್ವಾಸವಿಟ್ಟು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ದಿ ನಿಗಮದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಪುಟ ದರ್ಜೆ ಸ್ಥಾನ ಮಾನ ನೀಡುವ ಭರವಸೆ ನೀಡಿ ದ್ದಾರೆ ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಎಸ್. ವಿ.ರಾಮಚಂದ್ರ ಹೇಳಿದರು.
ತಾಲ್ಲೂಕಿನ ಹುಟ್ಟೂರು ಕಸವನಹಳ್ಳಿ ಗ್ರಾಮದಲ್ಲಿ ಇಂದು ಏರ್ಪಡಿಸಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಹುಟ್ಟೂರಿನಲ್ಲಿ ಸನ್ಮಾನ ಮಾಡುತ್ತಿರುವುದು ನನಗೆ ಸಂತಸ ತಂದಿದೆ ಎಂದರು.
ಗ್ರಾಮೀಣ ಪ್ರದೇಶದ ಜನರು ಮುಖ್ಯವಾಹಿನಿಗೆ ಬರಲು ನಿಗಮದಿಂದ ಸಾಲ ಸೌಲಭ್ಯ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಿಗಮದ ಅಧ್ಯಕ್ಷನಾಗುತ್ತೇನೆಂದು ಊಹಿಸಿರಲಿಲ್ಲ. ವಿದ್ಯಾರ್ಥಿಗಳಿಗೆ, ರೈತರಿಗೆ ಬೋರವೆಲ್ ಸೇರಿದಂತೆ ವಿವಿಧ ರೀತಿಯ ಸಾಲ ಸಿಗುವಂತೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಕಸವನಳ್ಳಿಯಲ್ಲಿ ಶೀಘ್ರದಲ್ಲಿ ಮದಕರಿ ನಾಯಕನ ಪುತ್ಥಳಿ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.
ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಕೋರಿಶೆಟ್ಟಿ ಉಚ್ಚೆಂಗೆಪ್ಪ ಮಾತನಾಡಿ, ರಾಜ್ಯದಲ್ಲಿ 60 ಲಕ್ಷದಷ್ಟು ವಾಲ್ಮೀಕಿ ನಾಯಕ ಸಮಾಜದವರಿದ್ದಾರೆ. ಸಂಕಷ್ಟದಲ್ಲಿರುವ ಬಡ ವರಿಗೆ ನಿಗಮದಿಂದ ಬರುವ ಸೌಲಭ್ಯಗಳನ್ನು ನೀಡಲಿ. ಸಮಾಜದವರು ಶಿಕ್ಷಣ ವಂತರಾದರೆ ಆರ್ಥಿಕ, ಸಾಮಾಜಿಕ, ರಾಜಕೀಯ ರಂಗದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.
ವಾಲ್ಮೀಕಿ ಸಮಾಜದ ಉಪಾಧ್ಯಕ್ಷ ಕೆ.ಶಿವನಂದ, ಸಂಘಟನಾ ಕಾರ್ಯದರ್ಶಿಗಳಾದ ಜಿ.ಕೆ.ಬಸವರಾಜ್, ಲಿಂಗರಾಜ್ ಫಣಿಯಾಪುರ, ನೀಲಗುಂದ ತಿಮ್ಮೇಶ್, ಬಿಜೆಪಿ ಎಸ್ಟಿ ಘಟಕದ ಅಧ್ಯಕ್ಷರಾದ ಟಿ.ಮನೋಜಾ, ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ, ಎಂ.ಅಂಜನೇಯ, ನಿವೃತ್ತ ಮುಖ್ಯ ಶಿಕ್ಷಕ ಆನಂದಪ್ಪ, ನ್ಯಾಯವಾದಿ ಕೆ.ಎಂ.ಪ್ರಾಣೇಶ್, ಮುಖಂಡರಾದ ಬಿಸ್ತುವಳ್ಳಿ ಬಾಬಣ್ಣ, ನಂದಿಬೇವೂರು ರಾಜಪ್ಪ, ಕಾವಲಳ್ಳಿ ಭರ್ಮಪ್ಪ, ಟಿ.ಬಿ.ರಾಜು, ಟಿ.ಚಂದ್ರಪ್ಪ, ಯೊಗೇಶ್, ನಾಗೇಂದ್ರಪ್ಪ, ಶಿಕ್ಷಕ ಚಂದ್ರಪ್ಪ, ಗುತ್ತಿಗೆದಾರರಾದ ಬಿ.ಅಂಜಿನಪ್ಪ, ಬಂಗೇರ ತಿಮ್ಮಣ್ಣ, ಬಡಿಗೇರ ಹನುಮಂತಪ್ಪ, ಎಂ. ಪರುಶುರಾಮ, ಸಿಳ್ಳೇರ ಭೀಮಣ್ಣ, ಜಿ.ರೇವಣ್ಣ, ಬಾನಳ್ಳಿ ಕೆಂಚನಗೌಡ್ರು, ಹಡಗಲಿ ಶ್ರೀನಿವಾಸ ನಾಯಕ, ರೈತ ಸಂಘದ ಕರಡಿ ದುರ್ಗದ ಚೌಡಪ್ಪ, ಎಂ.ಸುರೇಶ್ ಸೇರಿದಂತೆ ಇತರರು ಹಾಜರಿದ್ದರು.