ಹರಪನಹಳ್ಳಿ, ಆ.7- ಹರಪನಹಳ್ಳಿ ಹಾಗೂ ಹೂವಿನಹಡಗಲಿ ತಾಲೂಕುಗಳ ನದಿ ತೀರದಲ್ಲಿ ಪ್ರವಾಹ ಭೀತಿ ಆರಂಭವಾಗಿದ್ದು, ಪರಿಹಾರ ಕ್ರಮ ಕೈಗೊಳ್ಳಲು ತಲಾ 10 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಮಂಜುನಾಥ ತಿಳಿಸಿದ್ದಾರೆ.
ಪಟ್ಟಣದ ತಾಲೂಕು ಪಂಚಾಯ್ತಿಯ ರಾಜೀವಗಾಂಧಿ ಸಭಾಂಗಣದಲ್ಲಿ ಪ್ರವಾಹ ಎದುರಿಸಲು ಹೂವಿನಹಡಗಲಿ ಹಾಗೂ ಹರಪನಹಳ್ಳಿ ತಾಲ್ಲೂಕುಗಳ ಕಂದಾಯ, ತಾ.ಪಂ. ಅಧಿಕಾರಿಗಳ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹರಪನಹಳ್ಳಿ ಹಾಗೂ ಹೂವಿನಹಡಗಲಿ ತಾಲ್ಲೂಕು ಗಳ ನದಿ ತೀರದಲ್ಲಿ ಪ್ರವಾಹ ಭೀತಿ ಆರಂಭವಾಗಿದ್ದು, ಯಾವುದೇ ಕ್ಷಣದಲ್ಲಾದರೂ ನದಿ ಉಕ್ಕಿ ಹರಿದು, ಬೆಳೆ ಹಾನಿ, ಮನೆಗಳಿಗೆ ನೀರು ನುಗ್ಗುವ ಸಂಭವವಿದ್ದು, ಅದನ್ನು ಎದುರಿಸಲು ಕಂದಾಯ, ಗ್ರಾಮ ಪಂಚಾಯ್ತಿ ಸಿಬ್ಬಂದಿ ಸನ್ನದ್ಧರಾಗಿರಬೇಕು ಎಂದು ಅವರು ತಿಳಿಸಿದರು. ಹರಪನಹಳ್ಳಿ ಹಾಗೂ ಹೂವಿನಹಡಗಲಿ ತಾಲೂಕುಗಳಿಗೆ ಗೃಹ ರಕ್ಷಕದಳ ಹಾಗೂ ಅಗ್ನಿ ಶಾಮಕ ದಳಗಳ ಎರಡು ಕ್ವಿಕ್ ರೆಸ್ಪಾನ್ಸ್ ಟೀಂಗಳನ್ನು ಕಳಿಸಿ ಕೊಡಲಾಗುವುದು, ಬೆಳೆ ಹಾನಿ ಹಾಗೂ ಮನೆಗಳ ಹಾನಿ ವರದಿಗಳನ್ನು ಸಂಬಂಧ ಪಟ್ಟ ಸಿಬ್ಬಂದಿ ತ್ವರಿತವಾಗಿ ಕಳಿಸಿಕೊಡಬೇಕು,
ನದಿ ತೀರದ ಗ್ರಾಮಗಳಲ್ಲಿ ಪರಿಹಾರ ಕೇಂದ್ರ ಹಾಗೂ ಜ್ವರ, ನೆಗಡಿ ಕೆಮ್ಮುಗಳಿದ್ದ ನಿರಾಶ್ರಿತರನ್ನು ಇರಿಸಲು ಕಾಳಜಿ ಕೇಂದ್ರಗಳನ್ನು ಸ್ಥಾಪನೆ ಮಾಡಬೇಕು, ನದಿ ತೀರದ ಭಾಗದಲ್ಲಿರುವ ಗ್ರಾಮ ಲೆಕ್ಕಿಗರು, ಪಿಡಿಓಗಳು ಹಾಗೂ ಇತರ ಸಿಬ್ಬಂದಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು ಹಾಗೂ ಮೊಬೈಲ್ ಗಳನ್ನು ಸ್ವಿಚ್ ಆಪ್ ಮಾಡಬಾರದು ಎಂದು ಅವರು ಸೂಚಿಸಿದರು. ತಾವರಗೊಂದಿ ಗ್ರಾಮದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಜಲಾವೃತ ಗೊಂಡಿರುವುದರಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ ಎಂದು ಆ ಭಾಗದ ಪಿಡಿಒ ಕೆಂಚಪ್ಪ ಸಭೆಯ ಗಮನಕ್ಕೆ ತಂದಾಗ ತಾತ್ಕಾಲಿಕವಾಗಿ ಟ್ಯಾಂಕರ್ ನೀರು ಪೂರೈಕೆ ಮಾಡಲು ಅವರು ಸೂಚಿಸಿದರು.
ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿಗಳಲ್ಲಿ ಪ್ರವಾಹ ಸಮಸ್ಯೆ ಆಲಿಸಲು ಕಂಟ್ರೋಲ್ ರೂಂ ನಿಗದಿ ಮಾಡಿ ಸಹಾಯ ವಾಣಿ ಸ್ಥಾಪನೆ ಮಾಡಲು ಅವರು ಹೇಳಿದರು.
ಡಿವೈಎಸ್ಪಿ ಮಲ್ಲೇಶ ದೊಡ್ಮನಿ ಮಾತನಾಡಿ, ಎಲ್ಲಿಯಾದರೂ ಮನೆಗಳನ್ನು ಸ್ಥಳಾಂತರ ಮಾಡಲು ನಮ್ಮ ಇಲಾಖೆಯ ಸಹಾಯ ಪಡೆಯಿರಿ ಎಂದು ಆಯಾ ಭಾಗದ ಪೋಲೀಸ್ ಅಧಿಕಾರಿಗಳ ಮಾಹಿತಿ ನೀಡಿದರು.
ಉಪವಿಭಾಗಾಧಿಕಾರಿ ಪ್ರಸನ್ನಕುಮಾರ, ಹರಪನಹಳ್ಳಿ ತಹಶೀಲ್ದಾರ ಅನಿಲ್ ಕುಮಾರ, ಹಡಗಲಿ ತಹಶೀಲ್ದಾರ ವಿಜಯಕುಮಾರ, ಇಓ ಅನಂತರಾಜು ಮಾತನಾಡಿದರು.