ತಪ್ಪಿತಸ್ಥರ ಬಂಧನಕ್ಕೆ ಮಡಿಕಟ್ಟೆ ಮಡಿವಾಳರ ಸಂಘ ಆಗ್ರಹ
ದಾವಣಗೆರೆ, ನ.9- ಜಾತಿ ನಿಂದನೆ ಮಾಡಿ ಅತ್ಯಾಚಾರಕ್ಕೆ ಪ್ರಚೋದನೆ ನೀಡಿದ ವ್ಯಕ್ತಿಯನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಜಿಲ್ಲಾ ಮಡಿವಾಳ ಮಾಚಿದೇವ ಸಂಘ ಹಾಗೂ ಜಿಲ್ಲಾ ಮಡಿಕಟ್ಟೆ (ಧೋಬಿಘಾಟ್) ಮಡಿವಾಳರ ಸಂಘದಿಂದ ಇಂದು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜಯದೇವ ವೃತ್ತದಿಂದ ಆರಂಭ ಗೊಂಡ ಪ್ರತಿಭಟನಾ ಮೆರವಣಿಗೆ ಅಶೋಕ ರಸ್ತೆ, ಮಹಾತ್ಮಾಗಾಂಧಿ ವೃತ್ತ, ಪಿ.ಬಿ.ರಸ್ತೆಯಲ್ಲಿ ಸಾಗಿ ಪೊಲೀಸ್ ಉಪಾಧೀಕ್ಷಕರ ಕಚೇರಿ ತಲುಪಿ ಮನವಿ ಸಲ್ಲಿಸಿತು. ಜಿಲ್ಲಾ ಪೊಲೀಸ್ ಅಧೀಕ್ಷಕರ ಪರವಾಗಿ ಉಪಾಧೀಕ್ಷಕರಾದ ನಾಗೇಶ್ ಐತಾಳ್ ಮನವಿ ಸ್ವೀಕರಿಸಿದರು.
ಇದೇ ವೇಳೆ ಮಾತನಾಡಿದ ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಎಂ. ನಾಗೇಂದ್ರಪ್ಪ, ದೂರವಾಣಿಯಲ್ಲಿ ಕರೆ ಮಾಡುವ ವ್ಯಕ್ತಿಯೊ ಬ್ಬನು ಮಾತನಾಡಿರುವ ಸಂಭಾಷಣೆಯು ವಾಟ್ಸಾಪ್ ಗ್ರೂಪ್‍ನಲ್ಲಿ ಹರಿದಾಡುತ್ತಿದ್ದು, ಈ ರೀತಿ ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಕೆಲ ಸಮುದಾಯಗಳನ್ನೇ ಗುರಿಯಾಗಿಟ್ಟುಕೊಂಡು ಜಾತಿ ನಿಂದನೆ ಮಾಡಿದ್ದಲ್ಲದೇ, ರೇಪ್ ಮಾಡುವಂತೆ ಪ್ರಚೋದನೆ ಮಾಡಿರುವ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಮಾಜದ ಕಾರ್ಯಾಧ್ಯಕ್ಷ ಆವರಗೆರೆ ಹೆಚ್.ಜಿ. ಉಮೇಶ್ ಮಾತನಾಡಿ, ಆರೋಪಿತ ವ್ಯಕ್ತಿಯನ್ನು ಮಾಧ್ಯಮಗಳ ಮೂಲಕ ಬಹಿರಂಗ ಪಡಿಸಬೇಕು. ಆರೋಪಿಯನ್ನು 10 ವರ್ಷಗಳ ಕಾಲ ರಾಜ್ಯದಿಂದ ಗಡಿಪಾರು ಮಾಡಬೇಕು. ಯಾವುದೇ ಸಮಾಜದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನೆ ಹೇಳಿಕೆಗಳು ಕಂಡ ಕೂಡಲೇ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಿ ಆರೋಪಿತರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಹ ಕಾಯದರ್ಶಿ ಆರ್.ಎನ್. ಧನಂಜಯ, ಉಪಾಧ್ಯಕ್ಷ ವಿಜಯಕುಮಾರ್, ಫೋಟೋ ಮಂಜುನಾಥ್, ಖಜಾಂಚಿ ಸುರೇಶ್ ಕೋಗುಂಡೆ, ನಿರ್ದೇಶಕರಾದ ಎಂ.ವೈ.ಸತೀಶ್, ಅಂಜಿನಪ್ಪ ನಿಟುವಳ್ಳಿ, ರುದ್ರೇಶ್, ವೇಣುಗೋಪಾಲ್, ಕಿಶೋರ್‍ಕುಮಾರ್, ಅಡಿವೆಪ್ಪ, ರವಿಕುಮಾರ್, ಮಾಲತೇಶ್, ಎಂ.ಡಿ. ಹನುಮಂತಪ್ಪ, ಪೇಂಟರ್ ಹನುಮಂತಪ್ಪ, ರಾಮಪುರದ ರಮೇಶ್, ಕೆ.ನಾಗರಾಜ್, ಎಸ್. ಅಣ್ಣಪ್ಪ, ಎನ್. ಪ್ರಮೋದ್‍ಕುಮಾರ್, ಶಿವುಕುಮಾರ, ಪ್ರವೀಣ್, ಜಗದೀಶ್, ಗಣೇಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.