ಕೋಟಿ, ಕೋಟಿ ಹಿಂದೂಗಳ ಶ್ರದ್ಧಾ ಕೇಂದ್ರವಾದ ಪವಿತ್ರ ರಾಮ ಜನ್ಮ ಭೂಮಿಯಲ್ಲಿ ನಿರ್ಮಿಸಿದ್ದ ಕಟ್ಟಡವನ್ನು ತೆಗೆದು ಹಾಕಲು ನೂರಾರು ವರ್ಷಗಳಿಂದ ಲಕ್ಷಾಂತರ ಹಿಂದೂಗಳು ಅನೇಕ ಬಾರಿ ಹೋರಾಟ ಮಾಡಿದ್ದು, 1992ರಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಿರ್ಣಾಯಕ ಹೋರಾಟ ಆರಂಭವಾಗಿತ್ತು. 1992ರ ಕರಸೇವೆಯ ಕಾವು ದೇಶವನ್ನೇ ಆವರಿಸಿತ್ತು. ಅಂದಿನ ದಿನಗಳ ನೆನಪು ಮತ್ತೊಮ್ಮೆ ಮರುಕಳಿಸಿದೆ.
1992ರ ಡಿಸೆಂಬರ್ 3ರಂದು ಕರ ಸೇವಕರ ಒಂದು ತಂಡ ದಾವಣಗೆರೆಯಿಂದ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊರಟಿತ್ತು. ಇಡೀ ರೈಲ್ವೆ ನಿಲ್ದಾಣ ಕೇಸರಿಮಯವಾಗಿತ್ತು. 89 ಕರ ಸೇವಕರ ತಂಡದಲ್ಲಿ, ದಾವಣಗೆರೆ ಜಿಲ್ಲಾ ಬಿಜೆಪಿ ನಾಯಕರಾಗಿದ್ದ ವೈ. ಮಲ್ಲೇಶ್ ಅಂದಿನ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿದ್ದ ಸತ್ಯನಾರಾಯಣ, ಅಂದಿನ ಬಿಜೆಪಿ ಯುವ ಮೋರ್ಚಾ ಪ್ರಮುಖರಾದ ಪಿ. ಸಿ. ಮಹಾಬಲೇಶ್ವರ ಹಾಗೂ ಹರಿಹರದ ಸಂಘದ ಕಾರ್ಯಕರ್ತರಾದ ದಿವಾಕರ ಶಾಸ್ತ್ರಿ, ದಾವಣಗೆರೆ ಬೇತೂರು ರಸ್ತೆಯ ರಾಜು ಭಾಗವಹಿಸಿದ್ದರು.
ಝಾನ್ಸಿ ಸ್ಟೇಷನ್ ತಲುಪಿದಾಗ, ನಡೆದ ವಿಶೇಷ ಘಟನೆ :
ಅಲ್ಲಿ ಧ್ವನಿವರ್ಧಕದಲ್ಲಿ, `ಅಯೋಧ್ಯೆಗೆ ಹೊರಟಿರುವ ಎಲ್ಲಾ ಕರ ಸೇವಕರು ಇಲ್ಲಿಯೇ ಇಳಿಯಬೇಕು, ಮುಂದಿನ ಸೂಚನೆಗೆ ಪ್ಲಾಟ್ ಫಾರಂ 1ರಲ್ಲಿ ಸಂಪರ್ಕಿಸಿರಿ’ ಎಂದು ಘೋಷಣೆ ಮಾಡುತ್ತಿದ್ದರು. ದಾವಣಗೆರೆಯಿಂದ ಹೊರಟಿದ್ದ ನಮ್ಮ ಇಡೀ ತಂಡದವರು ಕೆಳಗೆ ಇಳಿದೆವು. ನಾವು ಮೂರ್ನಾಲ್ಕು ಕಾರ್ಯಕರ್ತರು ಮೊದಲನೆ ಪ್ಲಾಟ್ ಫಾರ್ಮ್ ಗೆ ಹೋದೆವು. ಅಲ್ಲಿ ಅಂದಿನ ಉತ್ತರ ಪ್ರದೇಶದ ಹಿರಿಯ ಸಚಿವರೊಬ್ಬರು ಸೂಚನೆ ನೀಡುತ್ತಿದ್ದರು.’ ಅಯೋಧ್ಯೆಯಲ್ಲಿ ಹಾಗೂ ಫೈಜಾಬಾದ್‌ನಲ್ಲಿ ಜಾಗ ತುಂಬಿದೆ, ಹಾಗಾಗಿ ನಿಮಗೆಲ್ಲಾ ಇಲ್ಲಿಯೇ ವ್ಯವಸ್ಥೆ ಮಾಡಲಾಗಿದೆ. ಮುಂದಿನ ಸೂಚನೆ ಬರುವವರೆಗೂ ಇಲ್ಲಿಯೇ ಇರಬೇಕು’ ಎಂದರು. ಆಗ ಜೊತೆಯಲ್ಲಿದ್ದ ಮಹಾಬಲೇಶ್ ನನಗೆ `ಸಾರ್, ಇವರು ನಮ್ಮವರೇ ಎಂದು ಏನು ಗ್ಯಾರಂಟಿ, ನಮಗೆ ದಾರಿ ತಪ್ಪಿಸುತ್ತಿರಬಹುದು’ ಎಂದಾಗ, ಸಚಿವರು `ಕ್ಯಾ ಬೋಲ್ ರಹೇ ಹೈ’ ಎಂದರು. ನಾನು ಅವರಿಗೆ ವಿಷಯ ತಿಳಿಸಿದಾಗ, ಮತ್ತೊಮ್ಮೆ ತಮ್ಮ ಪರಿಚಯ ಮಾಡಿಕೊಂಡು, ದಯವಿಟ್ಟು ಸೂಚನೆ ಪಾಲಿಸುವಂತೆ ಹೇಳಿದರು. ಆಗ ಮಹಾಬಲೇಶ್ ನನಗೆ `ಸಾರ್, ಅವರಿಗೆ ಹೇಳಿ, ಮದುವೆ ಮನೆಗೆ ಅಕ್ಷತೆ ಸಂದರ್ಭದಲ್ಲಿ ಹೋಗುವುದು ಮುಖ್ಯ, ಊಟಕ್ಕಲ್ಲ’ ಎಂದಾಗ ಸಚಿವರು ನನಗೆ ಮತ್ತೆ `ಏನಂತೆ?’ ಎಂದರು. ನಾನು ಹೇಳಿದ್ದು ಕೇಳಿ, `ನಿಮ್ಮ ಸ್ನೇಹಿತರಿಗೆ ಹೇಳಿ, ಈಗ ಹೋಗುವುದು ಮದುವೆ ಮನೆಗೆ ಅಲ್ಲ, ರಣರಂಗದಲ್ಲಿ ಸೂಚನೆ ಪಾಲನೆ ಮುಖ್ಯ’ ಎಂದರು. ಸರಿ, ಎಲ್ಲರಿಗೂ ತಿಳಿಸಿ ಕರೆದುಕೊಂಡು ಬರಲು ಅವರಿದ್ದ ಪ್ಲಾಟ್ ಫಾರ್ಮ್ ಗೆ ಹೋದೆವು. ಇಲ್ಲಿಯೇ ಇರಬೇಕು ಎಂದು ತಿಳಿದು ಪರಸ್ಪರ ಮಾತನಾಡಿಕೊಂಡು, ಸುಮ್ಮನೆ ನಿಂತಿದ್ದು, ಮತ್ತೊಂದು ಟ್ರೇನ್ ಬರುತ್ತಿದ್ದಂತೆ, ಬಹುತೇಕರು ದಡಬಡ ಟ್ರೇನ್ ಹತ್ತಿ ಹೊರಟೇ ಬಿಟ್ಟರು..! ನಾವು 17 ಜನ ಉಳಿದಿದ್ದು, ಮೊದಲ ಪ್ಲಾಟ್ ಫಾರ್ಮ್‌ಗೆ ಬಂದೆವು. ಅಲ್ಲಿ ಕರ್ನಾಟಕದಿಂದ ಬಂದಿದ್ದ ಕರ ಸೇವಕರಿಗೆ ಒಟ್ಟಿಗೇ ಸೇರಿಸಿ ಅಣ್ಣಾ ವಿನಯಚಂದ್ರ ಅವರ ನೇತೃತ್ವದಲ್ಲಿ ಹಾಸ್ಟೆಲ್ ಗೆ ಕರೆದುಕೊಂಡು ಹೋದರು. ಅಲ್ಲಿಗೆ ಹೋದ ನಂತರ ನಾನು ವಿನಯಣ್ಣನವರಿಗೆ ವಿನಂತಿಸಿ, ನಾವು ಲಕ್ನೋವರೆಗೆ ಮಾತ್ರ ಹೋಗುತ್ತೇವೆ, ಅಲ್ಲಿಂದ ಸೂಚನೆ ಸಿಕ್ಕ ನಂತರವೇ ಮುಂದೆ ಹೋಗುತ್ತೇವೆ, ನಮ್ಮ ತಂಡದ ಬಹುತೇಕರು ಮುಂದೆ ಹೋಗಿದ್ದಾರೆಂದು ತಿಳಿಸಿ ಎಲ್ಲರನ್ನೂ ಕರೆದುಕೊಂಡು ಮತ್ತೆ ಸ್ಟೇಷನ್ ಗೆ ಬಂದು, ಸಂಜೆ ಬಂದ ಟ್ರೇನ್ ನಲ್ಲಿ ನುಗ್ಗಿದೆವು. ಆ ಟ್ರೇನ್‌ನಲ್ಲಿ ಮಹಾರಾಷ್ಟ್ರದಿಂದ ಬಂದ ಶಿವಸೇನೆ ಕಾರ್ಯಕರ್ತರೇ ಕಿಕ್ಕಿರಿದು ತುಂಬಿದ್ದರು.
ಅಂತೂ `ಲಕ್ನೋ’ ತಲುಪಿದಾಗ ಮಧ್ಯ ರಾತ್ರಿ ಆಗಿತ್ತು. ಅಲ್ಲಿಂದ ಫೈಜಾಬಾದ್‌ಗೆ ಹೋಗಲು ಮೀಟರ್ ಗೇಜ್ ಟ್ರೇನ್‌ಗೆ ಹೋಗಬೇಕಾಗಿತ್ತು, ಹಾಗಾಗಿ ನಾವು ಇಳಿದ ಸ್ಟೇಷನ್‌ನಲ್ಲಿ ಒಬ್ಬ ಪೊಲೀಸ್‌ಗೆ ನಾನು `ಮೀಟರ್ ಗೇಜ್ ಸ್ಟೇಷನ್ ಕೊ ಕೈಸೆ ಜಾನಾ’ ಎಂದಾಗ, ಆ ವ್ಯಕ್ತಿ `ಉಡಾದೊ, ಉಡಾದೊ, ಓ ಬಾಬರೀ ಕಾ ಧಾಂಚಾ ಉಡಾದೊ’ ಎಂದು ಹೇಳಿ, ನಂತರ ಸ್ಟೇಷನ್ ದಾರಿ ತೋರಿಸಿದನು. ಇದು ಅಂದಿನ ಜನಮಾನಸದ ಅಂತರಾಳದಲ್ಲಿ ಹುದುಗಿರುವ ಭಾವನೆಗಳನ್ನು ಪರಿಚಯಿಸಿತು.
ಹಿಂದೂಗಳು ಕಾತುರದಿಂದ ಕಾಯುತ್ತಿದ್ದ ಅಯೋಧ್ಯೆ ರಾಮ ಮಂದಿರದ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ. 2020 ರ ಆಗಸ್ಟ್ 5 ರಂದು ಬುಧವಾರ ಇಂದು ಮಧ್ಯಾಹ್ನ 12.15 ರ ಸುಮಾರಿಗೆ ಅಭಿಜಿತ್ ಸುಮುಹೂರ್ತದಲ್ಲಿ ಅಯೋಧ್ಯೆಯ ರಾಮ ಮಂದಿರದ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ. ಅಯೋಧ್ಯೆಯ ರಾಮ ಮಂದಿರದ ನಿರ್ಮಾಣ ಕಾರ್ಯವು ಆಗಸ್ಟ್ 5 ರಿಂದ ಆರಂಭವಾದರೂ ಕೂಡ ದೇವಾಲಯವನ್ನು ಸಂಪೂರ್ಣಗೊಳಿಸಲು ಸರಿಸುಮಾರು ಮೂರರಿಂದ ಮೂರುವರೆ ವರ್ಷಗಳು ಬೇಕಾಗಬಹುದೆಂದು ಅಂದಾಜಿಸಲಾಗಿದೆ.
ಮೀಟರ್ ಗೇಜ್ ಸ್ಟೇಷನ್ ಗೆ ಬಂದಾಗ, ಅಲ್ಲಿ ಕಾಲಿಡಲೂ ಸಾಧ್ಯವಾಗದಷ್ಟು ಕರ ಸೇವಕರ ದಂಡೇ ಸೇರಿತ್ತು. ಇಡೀ ಸ್ಟೇಷನ್ ಕೇಸರಿಮಯವಾಗಿತ್ತು. ಅವರ ಬಳಿ ಹೋಗಿ `ಸೂಚನಾ ಕ್ಯಾ ಹೈ’ ಎಂದಾಗ ಅವರು `ಚಲೋ ಅಯೋಧ್ಯಾ ಎಂದರು. ಎಲ್ಲಿ ನೋಡಿದರೂ ಉತ್ಸಾಹ ಭರಿತ ಘೋಷಣೆ ಹಾಕುತ್ತಾ,`ಜೈ ಶ್ರೀ ರಾಮ್’, `ರಾಮ್ ಲಲಾ ಹಮ್ ಆಯೇ ಹೈ, ಮಂದಿರ ವಹೀ ಬನಾಯೇಂಗೆ’ ಎಂದು ಹಾಡುತ್ತಾ, ಕುಣಿಯುತ್ತಿದ್ದ ಯುವ ಸಮೂಹ… ಪ್ರತಿ 5-10 ನಿಮಿಷಕ್ಕೆ ಒಮ್ಮೆ `ಅಭೀ ಕುಚ್ಛೀ ದೇರ್ ಮೆ ಟ್ರೇನ್ ಆಯೇಗೀ’ ಎಂದು ಘೋಷಣೆ ಮಾಡುತ್ತಿದ್ದರು. ಆದರೆ ಕಾಲ ಕಳೆದಂತೆಲ್ಲಾ ಜನಸಂದಣಿ ಹೆಚ್ಚುತ್ತಿತ್ತೇ ವಿನಃ ಟ್ರೇನ್ ಬರುವ ಯಾವ ಸುಳಿವೂ ಇರಲಿಲ್ಲ. ನಮ್ಮ ತಂಡದವರಿಗೆ ಒಂದು ಕಡೆ ಇರಲು ಹೇಳಿ, ನಾನು ಮತ್ತು ದಿವಾಕರ ಶಾಸ್ತ್ರೀ ಪ್ಲಾಟ್ ಫಾರ್ಮ್ ಮೇಲೆ ಅಡ್ಡಾಡುತ್ತಾ ಹೋದೆವು. ನಮ್ಮ ಆಶ್ಚರ್ಯಕ್ಕೆ, ನಮ್ಮನ್ನು ಝಾನ್ಸಿ ಸ್ಟೇಷನ್‌ನಲ್ಲಿ ಬಿಟ್ಟು ಬಂದಿದ್ದ ದಾವಣಗೆರೆ ಸ್ನೇಹಿತರೂ ಟ್ರೇನ್ ಕಾಯುತ್ತಾ ಮಲಗಿದ್ದರು..! ಮತ್ತೊಮ್ಮೆ ಎಲ್ಲರೂ ಒಟ್ಟಿಗೆ ಸೇರಿದ್ದು ಖುಷಿಯಾಯಿತು. ಆಗ ಅಟಲ್ ಬಿಹಾರಿ ವಾಜಪೇಯಿಯವರು ಸ್ಟೇಷನ್‌ಗೆ ಬರುತ್ತಿದ್ದಾರೆಂದು ಘೋಷಣೆ ಮಾಡಿದರು.ಕೆಲವೇ ಸಮಯದಲ್ಲಿ ಅಟಲ್ ಜಿ ಬಂದಾಗ, ಅವರನ್ನು ನೋಡಿದ ಕರ ಸೇವಕರ ಉತ್ಸಾಹ ಮೇರೆ ಮೀರಿತು. ಎಲ್ಲಿ ನೋಡಿದರೂ, `ಜೈ ಶ್ರೀ ರಾಮ್ ‘, ಘೋಷಣೆ ಮೊಳಗ ತೊಡಗಿತು. ಆ ಜನಸಾಗರ ನೋಡಿದ ಅಟಲ್ ಜೀ ಏನೂ ಮಾತನಾಡದೆ, ಎರಡೂ ಕೈ ಜೋಡಿಸಿ ಮುಗಿದು ಹೊರಟೇ ಬಿಟ್ಟರು. ನಮ್ಮವರಿಗೆಲ್ಲಾ ಸ್ಟೇಷನ್‌ನಲ್ಲಿ ಇರಲು ಹೇಳಿ, ನಾನು, ದಿವಾಕರ ಶಾಸ್ತ್ರಿ ಹೊರಗೆ ಬಸ್ ನಿಲ್ದಾಣ ಕ್ಕೆ ಬಂದೆವು. ಅದಾಗಲೇ ಬೆಳಕಾಗುತ್ತಿದ್ದು, ಫೈಜಾಬಾದ್ ಗೆ ಬಸ್ ಸಂಚಾರ ಇರುವುದನ್ನು ಖಾತ್ರಿ ಮಾಡಿಕೊಂಡು ವಾಪಸ್ ಸ್ಟೇಷನ್‌ಗೆ ಬಂದು ನಮ್ಮ ತಂಡದವರನ್ನೆಲ್ಲಾ ಕರೆದುಕೊಂಡು ಘೋಷಣೆ ಹಾಕುತ್ತಾ ಬಸ್ ನಿಲ್ದಾಣಕ್ಕೆ ಬಂದು, ಫೈಜಾಬಾದ್ ಬಸ್ ಹತ್ತಿ ಡಿಸೆಂಬರ್ 5 ರ ಬೆಳಿಗ್ಗೆ ಸುಮಾರು 8 ಗಂಟೆಗೆ ಫೈಜಾಬಾದ್ ತಲುಪಿದೆವು. ಅಲ್ಲಿ ಬರುವವರಿಗೆಲ್ಲ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ಮ್ಯಾಕ್ಸಿಕ್ಯಾಬ್‌ನಲ್ಲಿ ಅಯೋಧ್ಯೆ ತಲುಪಿದಾಗ ಎಲ್ಲರಲ್ಲೂ ಧನ್ಯತಾ ಭಾವ ತುಂಬಿತ್ತು.
ಅಯೋಧ್ಯೆಯಲ್ಲಿ ನಮಗೆ ಕೃಷ್ಣ ಡೇರೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ನಮ್ಮ ಜಿಲ್ಲೆಗೆ ಅ.ಪು. ನಾರಾಯಣಪ್ಪ ಪ್ರಮುಖರಾಗಿದ್ದರು. ಅವರ ಮೂಲಕ ಸಿಗುವ ಸೂಚನೆ ಪಾಲಿಸುವಂತೆ ತಿಳಿಸಲಾಗಿತ್ತು. ನನಗೆ ಘಟನಾಯಕ ಎಂದು ಸೂಚಿಸಿ, 8 ಕರ ಸೇವಕರ ಪಟ್ಟಿ ನೀಡಲಾಯಿತು.ಅವರುಗಳ ಜವಾಬ್ದಾರಿ ನೀಡಲಾಯಿತು. ಮಾನ್ಯ ಹಿರಿಯೂರು ಕೃಷ್ಣಮೂರ್ತಿಗಳೂ ಭೇಟಿಯಾದರು. ಅಂದು ಮಧ್ಯಾಹ್ನ ವಿಶ್ವ ಹಿಂದೂ ಪರಿಷತ್‌ನ ಹಾಗೂ ಅನೇಕ ಸಾಧು, ಸಂತರ ಭಾಷಣಗಳ ಆಯೋಜನೆ ಯಾಗಿತ್ತು. ಅಶೋಕ್ ಸಿಂಘಾಲ್ ಜಿ, ಉಮಾಭಾರತಿ ಹಾಗೂ ಸಾಧ್ವಿ ಋತಂಬರಾ ಅವರ ಭಾಷಣಗಳು ಬಹಳ ಪ್ರಭಾವಿಯಾಗಿದ್ದವು.
ಮಾತನಾಡಿದ ಎಲ್ಲರೂ ಪ್ರಭು ಶ್ರೀ ರಾಮ ಚಂದ್ರನ ಮಂದಿರ ನಿರ್ಮಾಣ, `ರಾಷ್ಟ್ರ ನಿರ್ಮಾಣ’ ಕ್ಕೆ ಬುನಾದಿ ಎಂದು ತಿಳಿಸಿ, ಜೊತೆಯಲ್ಲಿ , ಸೇರಿರುವ ಎಲ್ಲಾ ಕರ ಸೇವಕರು ಕಡ್ಡಾಯವಾಗಿ ಸೂಚನೆ ಪಾಲಿಸುವಂತೆ ತಿಳಿಸಿದರು. ಸಂಜೆ ಶ್ರೀ ರಾಮ ಚಂದ್ರನ ದರ್ಶನ ಮಾಡಿದೆವು. ರಾತ್ರಿ ನಮಗೆ ಸಿಕ್ಕ ಸೂಚನೆ ಪ್ರಕಾರ, ಮಾರನೇ ದಿನ ಬೆಳಿಗ್ಗೆ ಸರಯೂ ನದಿಯಿಂದ ಮರಳು ತಂದು ಸೂಚಿಸಿದ ಸ್ಥಳದಲ್ಲಿ ಹಾಕಿ, ಸಾಂಕೇತಿಕವಾಗಿ ಕರ ಸೇವೆ ಮಾಡಬೇಕೆಂದು ಸೂಚಿಸಲಾಯಿತು.ಆದರೆ ಇದನ್ನು ಕೇಳಿದ ಬಹಳಷ್ಟು ಕರ ಸೇವಕರು ಅಸಮಾಧಾನಗೊಂಡರು.ಇದಕ್ಕಾಗಿ ನಾವು ಬರಬೇಕಿತ್ತೇ ಎಂದು ಗೊಣಗುತ್ತಿದ್ದರು. ಮಾರನೇ ದಿನ ಬೆಳಿಗ್ಗೆ ನಾವು ಸಿದ್ಧರಾಗಿ, ಸೇರಿದೆವು. ಅದ್ವಾಣಿಜಿ ಹಾಗೂ ಇತರೆ ನಾಯಕರು ಮಾತನಾಡುತ್ತಿದ್ದರು. ಪ್ರಮೋದ್ ಮಹಾನ್ ಮಾತನಾಡುತ್ತಾ `ಏ ಧಾಂಚಾ…’ಎಂದು ಹೇಳುತ್ತಾ ಆ ಕಡೆ ನೋಡಿದಾಗ, ಒಂದು ಗುಮ್ಮಟದ ಮೇಲೆ ಕೆಲವು ಕರಸೇವಕರು ಹತ್ತಿ, ಕೈಯಲ್ಲಿದ್ದ ಕೋಲು ಹಿಡಿದು, ಧ್ವಜ ಹಿಡಿದು ಕುಣಿಯ ತೊಡಗಿದ್ದರು. ಇದನ್ನು ನೋಡಿದ ಕೂಡಲೇ ವೇದಿಕೆಯಿಂದ ಮಹಾಜನ್ ರವರು ತಮ್ಮ ಭಾಷಣ ಮೊಟಕುಗೊಳಿಸಿ, ಮೈಕನ್ನು ಸಭಾ ಸಂಚಾಲನೆ ಮಾಡುತ್ತಿದ್ದ ವಿನಯ್ ಕಟಿಯಾರ್‌ಗೆ ಕೊಟ್ಟರು. ಕಟಿಯಾರ್‌ರವರು, `ತಕ್ಷಣವೇ ಎಲ್ಲರೂ ಕೆಳಗೆ ಇಳಿಯಬೇಕು, ಕೂಡಲೇ ಕೆಳಗೆ ಇಳಿಯಿರಿ’ ಎಂದು ಸೂಚನೆ ನೀಡಿದರು. ಆದರೆ ಮೇಲೆ ಇದ್ದವರು ಇಳಿಯುವ ಯಾವುದೇ ಲಕ್ಷಣ ಕಾಣಲಿಲ್ಲ, ಬದಲಾಗಿ ಮೇಲೆ ಹತ್ತುವವರ ಸಂಖ್ಯೆ ಹೆಚ್ಚಾಯಿತು. ಇದನ್ನು ನೋಡಿ ತುಂಬಾ ಕಸಿವಿಸಿಯಾದ ನಾನು, ನನ್ನ ಪಕ್ಕದಲ್ಲಿ ಕುಳಿತಿದ್ದ ವಿಜಯ ಕುಮಾರ್‌ಗೆ ಹೇಳಿದೆ `ಇವರಾರೂ ನಮ್ಮವರಲ್ಲ, ನಮ್ಮವರಾಗಿದ್ದರೆ ಖಂಡಿತಾ ಸೂಚನೆ ಪಾಲಿಸುತ್ತಿದ್ದರು, ಆದರೆ ಯಾರೋ ನಮ್ಮೊಡನೆ ಸೇರಿ, ಷಡ್ಯಂತ್ರ ಮಾಡಿ, ಯೋಜನೆಯನ್ನು ಹಾಳು ಮಾಡುತ್ತಿದ್ದಾರೆ’ ಎಂದೆ. ಕೆಲವೇ ಸಮಯದಲ್ಲಿ ಇಡೀ ವಾತಾವರಣವೇ ಪ್ರಕ್ಷುಬ್ಧವಾಗಿ, ಯಾರೂ ಯಾರ ಮಾತನ್ನೂ ಕೇಳದ ಸ್ಥಿತಿ ನಿರ್ಮಾಣವಾಯಿತು. ಎಲ್ಲಾ ಕಡೆಗಳಿಂದ ಗುಮ್ಮಟಗಳನ್ನು ಏರುತ್ತಿದ್ದ ಉದ್ರಿಕ್ತ ಯುವಕರು ಕೈಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಉಪಯೋಗಿಸಿ ಕಟ್ಟಡ ಧ್ವಂಸ ಮಾಡತೊಡಗಿದರು. ಸುಮಾರು 10-11 ಗಂಟೆ ವೇಳೆಗೆ ಮೊದಲ ಗುಮ್ಮಟ ಧರಾಶಾಹಿಯಾಯಿತು. ಧ್ವನಿವರ್ಧಕದಲ್ಲಿ ಕರಸೇವಕರಲ್ಲಿ ವೈದ್ಯರುಗಳಿದ್ದಲ್ಲಿ ಕೂಡಲೇ ವೈದ್ಯಕೀಯ ವಿಭಾಗಕ್ಕೆ ಬರಲು ಸೂಚಿಸಲಾಯಿತು. ನಾನು ನನ್ನ `ಪ್ರವೇಶಿಕ’ದ ಬದಲು ನನ್ನ ಕಾರ್ಡ್ ಹಾಕಿಕೊಂಡು ವೈದ್ಯಕೀಯ ಕಕ್ಷೆಗೆ ಧಾವಿಸಿದೆ. ನನ್ನ ಜೊತೆ ಮಲ್ಲೇಶ್‌ರವರೂ ಬಂದರು. ಅಲ್ಲಿಯ ಸ್ಥಿತಿ ಗಂಭೀರವಾಗಿತ್ತು. ಕೈ ಮುರಿದುಕೊಂಡ, ಕಾಲು ಮುರಿದುಕೊಂಡ, ತಲೆಗೆ ಪೆಟ್ಟಾಗಿ ರಕ್ತ ಸೋರುತ್ತಿದ್ದ, ಗಾಯಗಳಿಂದ, ಮೂಕೇಟುಗಳಿಂದ, ನರಳುತ್ತಿದ್ದ ಕರಸೇವಕರು. ಅವರನ್ನು ತಾತ್ಕಾಲಿಕವಾಗಿ ಶುಶ್ರೂಷೆ ಮಾಡಿ, ತೀವ್ರವಾಗಿ ಗಾಯಗೊಂಡವರನ್ನು ಆಂಬ್ಯುಲೆನ್ಸ್‌ನಲ್ಲಿ ಫೈಜಾಬಾದ್ ಗೆ ರವಾನಿಸಲಾಗುತ್ತಿತ್ತು. ಈ ಮಧ್ಯೆ ನಮ್ಮ ತಂಡದಲ್ಲಿದ್ದವರಾದ ಮಹಾಬಲೇಶ್ ಮತ್ತು ಶಿವಲಿಂಗಪ್ಪ ಕಾಣಲಿಲ್ಲ. ಗಾಬರಿಯಿಂದ ಮಲ್ಲೇಶ್‌ಗೆ ಫೈಜಾಬಾದ್‌ಗೆ ಹೋಗಿಬರುವುದಾಗಿ ತಿಳಿಸಿ, ಆಂಬ್ಯುಲೆನ್ಸ್‌ನಲ್ಲಿ ಹೊರಟೆ. ದಾರಿಯುದ್ದಕ್ಕೂ ಅಲ್ಲಲ್ಲಿ ಬೆಂಕಿ ಹಚ್ಚಿದ್ದು, ಯಾವುದೇ ವಾಹನ ಸಂಚಾರವಿಲ್ಲ. ರುದ್ರಭೀಕರ ವಾತಾವರಣವಿತ್ತು.
ಫೈಜಾಬಾದ್ ಆಸ್ಪತ್ರೆ ಅಯೋಧ್ಯೆಯಿಂದ ಕರೆತರಲಾಗುತ್ತಿದ್ದ ಗಾಯಾಳುಗಳಿಂದ ತುಂಬಿತ್ತು. ನಾನು ಅಲ್ಲಿದ್ದ ರಿಜಿಸ್ಟರ್‌ನಲ್ಲಿ ಇವರ ಹೆಸರು ಹುಡುಕಿ ಇಡೀ ಆಸ್ಪತ್ರೆ ಸುತ್ತಿದೆ, ತುಂಬಾ ಆತಂಕವಾಯಿತು. ವೈದ್ಯಕೀಯ ವಿಭಾಗಕ್ಕೆ ಹೋದಾಗ ಮಲ್ಲೇಶ್ ನನಗೆ `ಡಾಕ್ಟ್ರೇ, ಮೂರನೇ ಗುಮ್ಮಟವೂ ಬಿತ್ತು’ ಎಂದರು. ಸಂಜೆ ವೇಳೆಗೆ ನಮಗೆ ನಮ್ಮ ಊರಿಗೆ ವಾಪಸ್ ಹೋಗಲು ಸೂಚನೆ ಸಿಕ್ಕಿತು. ಆಗ ನಮ್ಮ ಟೆಂಟ್ ಗೆ ಮಹಾಬಲೇಶ್ ಮತ್ತು ಶಿವಲಿಂಗಪ್ಪ ವಾಪಸ್ ಬಂದಿದ್ದು, ಮನಸ್ಸಿಗೆ ಸಮಾಧಾನವಾಯಿತು.
ವಾಪಸ್ ಬರಲು ರೈಲ್ವೆ ನಿಲ್ದಾಣದ ಕಡೆ ಹೋಗುತ್ತಿದ್ದಾಗ ಮತ್ತೆ ಧ್ವನಿವರ್ಧಕದಲ್ಲಿ `ಎಲ್ಲರೂ ಕೂಡಲೇ ಬನ್ನಿರಿ’ ಎಂಬ ಘೋಷಣೆ ಕೇಳಿ ಬಂದಿತು. ಎಲ್ಲರೂ ದಡಬಡಾಯಿಸಿ ವಾಪಸ್ ಹೋದೆವು. ಕಲ್ಯಾಣ್ ಸಿಂಗ್ ನೇತೃತ್ವದ ರಾಜ್ಯ ಸರ್ಕಾರ ರಾಜೀನಾಮೆ ನೀಡಿದ್ದು, ಪರಿಣಾಮವಾಗಿ ರಾಜ್ಯದಲ್ಲಿ `ರಾಷ್ಟ್ರಪತಿ ಆಳ್ವಿಕೆ’ ಜಾರಿಗೊಳಿಸಲಾಗಿತ್ತು.ಯಾವುದೇ ಕ್ಷಣದಲ್ಲಿ ಆರ್.ಪಿ.ಎಫ್. (Rapid Action Force)ಬಂದು ಇಡೀ ಸ್ಥಳವನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದ್ದು, ಅದಕ್ಕಿಂತ ಮೊದಲು, ದಶಕಗಳಿಂದ ಪೂಜೆಗೊಳ್ಳುತ್ತಿದ್ದ ಶ್ರೀ ರಾಮನ ಮೂರ್ತಿಯನ್ನು ಕೂಡಲೇ ಮತ್ತೆ ಪ್ರತಿಷ್ಠಾಪನೆ ಮಾಡುವುದು ಅತೀ ಅವಶ್ಯಕವಾಗಿತ್ತು. ಹಾಗಾಗಿ ಇಡೀ ರಾತ್ರಿ ಎಲ್ಲರೂ ಕರ ಸೇವೆ ಮಾಡಿ, `ತಾತ್ಕಾಲಿಕ ಮಂದಿರ’ ನಿರ್ಮಾಣ ಮಾಡಿ, ಬೆಳಗಾಗುವುದರಲ್ಲಿ ಶ್ರೀ ರಾಮ ಚಂದ್ರನ ಮೂರ್ತಿಯನ್ನು ಶಾಸ್ತ್ರೋಕ್ತವಾಗಿ ಪುನರ್ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು.
ನಂತರ ಶ್ರೀ ರಾಮನ ದರ್ಶನ ಪಡೆದು ರೇಲ್ವೆ ಸ್ಟೇಷನ್ ಕಡೆ ಹೊರಟೆವು.ರೇಡಿಯೋ ಮತ್ತು ದಿನ ಪತ್ರಿಕೆಗಳಲ್ಲಿ ದೇಶದಾದ್ಯಂತ ನಡೆಯುತ್ತಿದ್ದ ಗಲಭೆಗಳ ವರದಿಗಳಿದ್ದವು. ನಾವು ವಾಪಸ್ ಹೊರಟಾಗ, ಎಲ್ಲರೂ ಒಟ್ಟಿಗೆ ಬರಲು ಸಾಧ್ಯವಾಗಲಿಲ್ಲ. ನಮ್ಮ ತಂಡದಲ್ಲಿ ಅ.ಪು. ನಾರಾಯಣಪ್ಪ, ವೈ. ಮಲ್ಲೇಶ್, ಅಯೋಧ್ಯೆ ರಾಜು, ವೆಂಕಟೇಶ್ (ಬಿಜೆಪಿ ಎಸ್.ಸಿ.ಮೋರ್ಚಾ) ಇದ್ದೆವು. ಕರ ಸೇವಕರಿಂದ ಕಿಕ್ಕಿರಿದು ತುಂಬಿದ್ದ ರೈಲ್ವೆ ಬೋಗಿ. ನಮ್ಮ ರೈಲಿಗೆ ಬೋರ್ಡ್ ಇರಲಿಲ್ಲ. ಎಲ್ಲಿಯವರೆಗೆ ಹೋಗುವುದೋ ಗೊತ್ತಿರಲಿಲ್ಲ. ಆದರೆ ಮೌಖಿಕವಾಗಿ ನಮಗೆ ಮಹಾರಾಷ್ಟ್ರ, ಕರ್ನಾಟಕದವರು ಈ ಟ್ರೇನ್ ಹತ್ತಲು ತಿಳಿಸಲಾಗಿತ್ತು. ಅಂತೂ ಟ್ರೇನ್ ಹೊರಟಿತು. ನಮ್ಮ ಟ್ರೇನ್ ಗಿಂತ ಮೊದಲು ಒಂದು ಗೂಡ್ಸ್ ಟ್ರೇನ್ ಹೋಗುತ್ತಿತ್ತು. ಅದು ಮುಂದಿನ ನಿಲ್ದಾಣ ತಲುಪಿದ ನಂತರವೇ ನಮ್ಮ ಟ್ರೇನ್ ಹೊರಡುತ್ತಿತ್ತು. ಕೊನೆಗೆ ನಾವು ಪೂನಾ ತಲುಪಿದೆವು. ಅಲ್ಲಿಂದ ಬೇರೆ ಟ್ರೇನ್‌ನಲ್ಲಿ ಹೊರಟು ಮೀರಜ್ ಮುಖಾಂತರ ಹುಬ್ಬಳ್ಳಿ ತಲುಪಿದಾಗ, ಅಲ್ಲಿ ಇಳಿದು ನನ್ನ ಸ್ನೇಹಿತ ಮನಗೂಳಿಯ ಮನೆಗೆ ಹೋದೆನು. ನನ್ನ ಅನುಭವವನ್ನೆಲ್ಲಾ ಅವನೊಂದಿಗೆ ಹಂಚಿಕೊಂಡು, ದಾವಣಗೆರೆಗೆ ಬಂದಿಳಿದೆ.
ಅಂತೂ 1528 ರಿಂದ ಶ್ರೀ ರಾಮ ಮಂದಿರ ಪುನರ್ ನಿರ್ಮಾಣಕ್ಕೆ ನಡೆದ ಹೋರಾಟಗಳಲ್ಲಿ, ಅಂತಿಮ ಘಟನೆಗಳ ಸಾಕ್ಷೀಕರಿಸಿದ ಭಾವನೆಗಳು ಹೃದಯಾಂತರಾಳದಲ್ಲಿವೆ.
ಹಿಂದೂ ಸಮಾಜ ಅನೇಕ ದಶಕಗಳಾದರೂ, ಶಾಂತಿಯುತ ಪರಿಹಾರಕ್ಕಾಗಿ ಕಾದು ಅಂತಿಮವಾಗಿ ನ್ಯಾಯಾಲಯದಲ್ಲಿ ತೀರ್ಮಾನವಾದಾಗಲೂ ತುಂಬಾ ಜವಾಬ್ದಾರಿಯಿಂದ ನಡೆದುಕೊಂಡಿತು. ಶಾಂತಿಭಂಗ ಮಾಡುವ, ಕೋಮು ದ್ವೇಷ ಪ್ರಚೋದಿಸುವ, ಸಾಮರಸ್ಯ ಹಾಳು ಮಾಡುವ, ಯಾವುದೇ ವ್ಯಕ್ತಿ, ಅಥವಾ ಸಂಘಟನೆಗೆ ಅವಕಾಶ ಆಗದಂತೆ ನಡೆದುಕೊಂಡು ಮೇಲ್ಪಂಕ್ತಿ ಹಾಕಿತು. ಶತಮಾನದ ಕನಸು ಸಾಕಾರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ಒಟ್ಟಾಗಿ, ಒಂದಾಗಿ `ಭವ್ಯ ಭಾರತದ ಭವಿಷ್ಯದ ನಿರ್ಮಾತೃಗಳಾಗುವ ಸತ್ಸಂಕಲ್ಪ ಮಾಡೋಣ.
ಡಾ. ಎ.ಹೆಚ್. ಶಿವಯೋಗಿಸ್ವಾಮಿ
ಮಾಜಿ ಮುಖ್ಯ ಸಚೇತಕರು, ವಿಧಾನ ಪರಿಷತ್
[email protected]