ಹರಿಹರದ ಸಭೆಯಲ್ಲಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ
ಹರಿಹರ, ಆ.4- ನಗರದಲ್ಲಿ ಪ್ರತಿದಿನ 30 ರಿಂದ 40 ವ್ಯಕ್ತಿಗಳಿಗೆ ಕೊರೊನಾ ಸೋಂಕು ಹರಡುತ್ತಿದ್ದು, ಸೋಂಕು ತಡೆಗಟ್ಟಲು ವಾರ್ಡ್ ಸದಸ್ಯರು ಇಲಾಖೆಯ ಜೊತೆಯಲ್ಲಿ ಸಹಕಾರ ನೀಡುವ ಅವಶ್ಯಕತೆ ಇದೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ತಿಳಿಸಿದರು.
ಕೊರೊನಾ ಸೋಂಕು ತಡೆಗಟ್ಟಲು ವಾರ್ಡ್‌ನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲು ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಾರ್ಡ್ ಸದಸ್ಯರು ಕಂಟೈನ್ಮೆಂಟ್ ಝೋನ್‌ಗಳಲ್ಲಿ ನೀವೇ ಅಧಿಕಾರಿಗಳು ಎಂದು ಭಾವಿಸಿಕೊಂಡು ಅಲ್ಲಿನ ಜನರಿಗೆ ಮನವರಿಕೆ ಮಾಡಿ ಅವರನ್ನು ಮನವೊಲಿಸಿ ಕ್ವಾರಂಟೈನ್ ಗೆ ಸೇರಿಸುವ ಮೂಲಕ ಇನ್ನೊಂದು ಜೀವ ಉಳಿಸುವ ದೃಷ್ಟಿಯಿಂದ ಸಹಕಾರ ನೀಡಬೇಕು. ಕನಿಷ್ಠ 5 ರಿಂದ 10 ಮನೆಯವರು ಹೊರಗಡೆ ಬರದಂತೆ ಸ್ವಯಂ ಪ್ರೇರಿತರಾಗಿ ಮನೆಯಲ್ಲಿ ಇರುವಂತೆ ಎಚ್ಚರಿಕೆ ವಹಿಸುವಂತೆ ತಿಳಿಸಬೇಕು. ಅವರಿಗೆ ಊಟ, ಔಷಧಿ ಮತ್ತು ಇನ್ನಿತರೆ ಸೌಲಭ್ಯಗಳು ದೊರೆಯುತ್ತವೆ. ಎಂದು ಧೈರ್ಯ ತುಂಬುವ ಕೆಲಸವನ್ನು ಮಾಡಬೇಕು. ಇಲ್ಲದೆ ಹೋದರೆ ಕೊರೊನಾ ಸೋಂಕು ತಡೆಗಟ್ಟಲು ಸಾಧ್ಯವಿಲ್ಲ. ಕೊರೊನಾ ರೋಗದಿಂದ ಮರಣ ಹೊಂದುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ ಎಂದು ಹೇಳಿದರು.
ನಗರಸಭೆ ಸದಸ್ಯ ಎಸ್.ಎಂ. ವಸಂತ್ ಮಾತನಾಡಿ, ಸಾರ್ವಜನಿಕರಿಗೆ ಅಧಿಕಾರಿಗಳ ಮೇಲೆ ವಿಶ್ವಾಸ ಇಲ್ಲದಂತಾಗಿದೆ. ಕ್ವಾರಂಟೈನ್ ಗೆ ಹೋಗಿ ಬಂದವರು ಅಲ್ಲಿನ ನರಕ ಯಾತನೆಯ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರ ಜೊತೆಯಲ್ಲಿ ಹಂಚಿಕೆ ಮಾಡಿಕೊಂಡಿರುವುದರಿಂದ ಇಲಾಖೆಯ ಆಡಳಿತದ ಬಗ್ಗೆ ಬೇಸರವಾಗಿದೆ. ಸರಿಯಾದ ಮೂಲ ಸೌಕರ್ಯಗಳ ಕೊರತೆ ಇದೆ. ಒಂದು ವಾರಕ್ಕೆ ಆಗುವಷ್ಟು ಔಷಧಿಗಳನ್ನು ನೀಡಿ ಹೋದ ವೈದ್ಯರು ಮತ್ತು ಒಂದು ವಾರ ಆದರೂ ಸಹ ಬಂದು ಏನಾಗಿದೆ ಎಂದು ಕೇಳುವುದಿಲ್ಲ ಎಂದು ಅಲ್ಲಿಂದ ಬಂದ ವ್ಯಕ್ತಿಗಳು ಹೇಳುತ್ತಿದ್ದಾರೆ. ಇದರಿಂದಾಗಿ ನಿಮ್ಮ ಬಗ್ಗೆ ಜನರಿಗೆ ಹೇಗೆ ವಿಶ್ವಾಸ ಬರುತ್ತದೆ ಎಂದು ಹೇಳಿದರು.
ರಾಘವೇಂದ್ರ ಮಾತನಾಡಿ, ಕ್ವಾರಂಟೈನ್ ಸ್ಥಳದಲ್ಲಿ ಕಳೆದ ಮೂರು ದಿನಗಳಿಂದ ಬಳಸಲಿಕ್ಕೆ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯದ ಕೊರತೆ ಇದೆ. ಹೆಚ್ಚಿನ ಪ್ರಮಾಣದಲ್ಲಿ ಜನರು ಇರುವುದರಿಂದ ಅವರಿಗೆ ಮಲಗುವುದಕ್ಕೆ ಸ್ಥಳ ಇಲ್ಲದಂತಹ ಪರಿಸ್ಥಿತಿ ಬಂದಿದೆ. ಆದ್ದರಿಂದ ಈ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಹೇಳಿದರು.
ಸದಸ್ಯ ಜಂಬಣ್ಣ ಗುತ್ತೂರು ಮಾತನಾಡಿ, ನಗರದ ಅನೇಕ ಕಂಟೈನ್ಮೆಂಟ್ ಝೋನ್ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿಯವರು ಇರುವುದಿಲ್ಲ. ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಭಯ ಇಲ್ಲದೆ ಓಡಾಡುತ್ತಾರೆ. ಅನೇಕ ಬಾರಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗಳು ನಡೆಯುತ್ತಿವೆ ಎಂದರು.
ಸದಸ್ಯ ದಾದಾ ಖಲಂದರ್ ಮಾತನಾಡಿ, ಕಂಟೈನ್ಮೆಂಟ್ ಝೋನ್‌ಗಳಲ್ಲಿ ನಿಯಮ ಉಲ್ಲಂಘನೆ ಮಾಡಿ ಓಡಾಡುವ ಸಾರ್ವಜ ನಿಕರಿಗೆ ಕಾನೂನಿನ ಅಡಿಯಲ್ಲಿ ದಂಡವನ್ನು ವಿಧಿಸಬೇಕು. ಇದನ್ನು ಅಧಿಕಾರಿಗಳು ಮಾಡುತ್ತಿಲ್ಲ. ಇದರಿಂದಾಗಿ ಕಂಟೈನ್ಮೆಂಟ್ ಝೋನ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಓಡಾಡುತ್ತಾರೆ. ನೆಗೆಟಿವ್ ಬಂದ ವ್ಯಕ್ತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಬೇಕು. ನಗರದ ಪಾಲಿಟೆಕ್ನಿಕ್ ಕಾಲೇಜು ಖಾಲಿ ಇದ್ದು, ಬಳಕೆ ಮಾಡಿಕೊಂಡು ಹೆಚ್ಚಿನ ಜನರನ್ನು ಅಲ್ಲಿ ಇರಿಸುವುದಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೌರಾಯುಕ್ತರಾದ ಶ್ರೀಮತಿ ಎಸ್. ಲಕ್ಷ್ಮಿ, ಆರೋಗ್ಯ ಇಲಾಖೆಯ ಡಾ. ಚಂದ್ರಮೋಹನ್, ನಗರಸಭೆ ಸದಸ್ಯರಾದ ಕೆ.ಜಿ. ಸಿದ್ದೇಶ್, ವಿಜಯಕುಮಾರ್, ಅಶ್ವಿನಿ ಕೆ.ಜಿ. ಕೃಷ್ಣ, ಮಹಬೂಬ್ ಬಾಷಾ, ಪಿ.ಎನ್. ವಿರುಪಾಕ್ಷ, ನಾಗರತ್ನ, ನೀತಾ ಮೆಹರ್ವಾಡೆ, ಬಾಬುಲಾಲ್, ಮುಖಂಡರಾದ ಜಾಕೀರ್, ದಾದಾಪೀರ್ ಭಾನುವಳ್ಳಿ, ಮನ್ಸೂರ್ ಮದ್ದಿ ಹಾಗೂ ಇತರರು ಹಾಜರಿದ್ದರು.