ರಾಷ್ಟ್ರಕವಿ ಕುವೆಂಪುರವರ ವಾಣಿಯಂತೆ `ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು’ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ರವರ ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ.
ಜಲವೆಂದರೆ ಕಾಲುವೆ ನೀರಲ್ಲ ಅದು ಪಾವನ ತೀರ್ಥ ಎಂದು ಹೇಳಿರುವುದು ನಿಜವಾಗಲೂ ಅರ್ಥಗರ್ಭಿತ ಮತ್ತು ಮಹತ್ವದ್ದೇ ಆಗಿದೆ. ಕನ್ನಡ ಭಾಷೆಗೆ ಅರ್ಥ ಮತ್ತು ಆ ತರಹದ ಶಕ್ತಿ ಇರುವುದು ಎಲ್ಲರಿಗೂ ತಿಳಿದಿದೆ.
ನವೆಂಬರ್ ತಿಂಗಳು ಕರ್ನಾಟಕ ರಾಜ್ಯದ ಎಲ್ಲ ಕನ್ನಡಿಗರ ಹಬ್ಬ. ತಿಂಗಳ ತುಂಬಾ ಕನ್ನಡ ಹಬ್ಬದ ಆಚರಣೆ ನಡೆಯುತ್ತದೆ. ಕನ್ನಡ ಭಾಷೆಯನ್ನು ಮಾತನಾಡುವವರನ್ನು ಒಟ್ಟುಗೂಡಿಸಿ ನವೆಂಬರ್ 1 ರಂದು ಕನ್ನಡ ರಾಜ್ಯ ಸ್ಥಾಪನೆಯಾಯಿತು. ಅದರ ಅಂಗವಾಗಿ ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸ ವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ, ಉಳಿವಿಗೆ ಹಾಗೂ ಕನ್ನಡಕ್ಕೆ ಸಂಬಂಧಿಸಿದ ಸಾಧನೆಗಳನ್ನು ಗುರುತಿಸಿ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.
ರಾಜ್ಯ, ಜಿಲ್ಲಾವಾರು, ತಾಲ್ಲೂಕುವಾರು ಸಾಧಕರನ್ನು ಆಯ್ಕೆ ಮಾಡಿ ಗೌರವಿಸುವ ಕೆಲಸ ರಾಜ್ಯದ ಮೂಲೆ ಮೂಲೆಗಳಲ್ಲಿ ನಡೆಯುತ್ತದೆ.
ಈ ಸಂದರ್ಭದಲ್ಲಿ ಅತ್ಯಂತ ಪುರಾತನ ಭಾಷೆ ಎಂದು ಕರೆಸಿಕೊಳ್ಳುವ ಹಾಗೂ ಸುಮಾರು 2500 ವರ್ಷಗಳ ಇತಿಹಾಸವನ್ನು ಹೊಂದಿರುವ ನಮ್ಮ ಮಾತೃಭಾಷೆ ಚಂದದ ಭಾಷೆ. ಕನ್ನಡದ ಬಗ್ಗೆ ಒಂದಿಷ್ಟು ವಿಷಯಗಳನ್ನು ಸ್ಮರಿಸುವುದು ಔಚಿತ್ಯ ಪೂರ್ಣ ಎನಿಸುತ್ತದೆ.
1. ಪುರಾತನ ಭಾಷೆ :
ಕನ್ನಡ ಭಾಷೆ ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದು. ವಿಶ್ವದ ನಾನಾ ಭಾಷೆಗಳಲ್ಲಿ ಸಿಕ್ಕಿರುವ ಅಚ್ಚ ಕನ್ನಡದ ಶಾಸನಗಳು ಕನ್ನಡದ ಪ್ರಾಚೀನತೆಯನ್ನು ಸಾಬೀತುಪಡಿಸುತ್ತವೆ.
2. 2500 ವರ್ಷಗಳ ಇತಿಹಾಸ :
ಅಲೆಗ್ಸಾಂಡರ್ ಕಾಲದಲ್ಲಿ ಅಂದರೆ ಕ್ರಿಸ್ತಪೂರ್ವ ನಾಲ್ಕನೆಯ ಶತಮಾನದಲ್ಲಿ ಸಿಕ್ಕಿರುವ ತಾಳೆಗರಿಯೊಂದರಲ್ಲಿ ಕನ್ನಡದ `ಊರಲ್ಲಿ’ ಎಂಬ ಶಬ್ಧ ಪತ್ತೆಯಾಗಿ ಅಚ್ಚರಿ ಮೂಡಿಸಿತ್ತು. ಆದ್ರೂ ಅವುಗಳ ಲಭ್ಯತೆ ಇಲ್ಲದಿರುವುದರಿಂದ 2500 ವರ್ಷಗಳ ಹಿಂದೆ ಕನ್ನಡ ಭಾಷೆಯೂ ಅಸ್ತಿತ್ವದಲ್ಲಿತ್ತು ಎಂಬ ಇತಿಹಾಸವಿದೆ .
3. ಕಿಟೆಲ್ ಶಬ್ದಕೋಶ :
ಫರ್ಡಿನಂಡ್ ಕಿಟೆಲ್ ಕನ್ನಡ ಶಬ್ದಕೋಶ ರಚಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಏಕೆಂದರೆ ವಿದೇಶಿ ವಿದ್ವಾಂಸರೊಬ್ಬರು ನಮ್ಮ ದೇಶದ ಪ್ರಾದೇಶಿಕ ಭಾಷೆಯ ಶಬ್ದ ರಚಿಸಿರುವುದು ಕನ್ನಡ ಭಾಷೆಯದ್ದು ಮಾತ್ರ .
4. ಹಿಂದಿಗಿಂತ ಮೊದಲು ಕನ್ನಡ ಭಾಷೆ:
ಹಿಂದಿ ಭಾಷೆ ಹುಟ್ಟುವ ಮೊದಲು ಕನ್ನಡದ ಅಮೋಘವರ್ಷನ `ಕವಿರಾಜ ಮಾರ್ಗ’ ರಚನೆಯಾಗಿತ್ತು. ಅಂದರೆ ಹಿಂದಿ ಭಾಷೆಗಿಂತ ಮೊದಲು ಕನ್ನಡ ಭಾಷೆ ಎಂಬುದು ಹೆಮ್ಮೆ .
5. ಪರಿಪೂರ್ಣ ಭಾಷೆ :
ಕನ್ನಡ ಭಾಷೆ ಶೇ. 99 ರಷ್ಟು ತಾರ್ಕಿಕ ವಾಗಿದ್ದು ವೈಜ್ಞಾನಿಕವಾಗಿಯೂ ಪರಿಪೂರ್ಣತೆ ಹೊಂದಿದೆ ಎಂಬುದನ್ನು ಸಾಬೀತುಪಡಿಸಿದೆ.
6. ಲಿಪಿಗಳ ರಾಣಿ ನಮ್ಮ ಕನ್ನಡ ಭಾಷೆ :
ವಿನೋಬಾಭಾವೆಯವರು ಕನ್ನಡ ಭಾಷೆಯನ್ನು ಲಿಪಿಗಳ ರಾಣಿ ಎಂದು ಹೇಳಿರುವುದು ನಮ್ಮ ಭಾಷೆಯ ಹೆಗ್ಗಳಿಕೆಯನ್ನು ತೋರಿಸುತ್ತದೆ .
7. ಹೆಚ್ಚು ಕನ್ನಡ ಪ್ರಶಸ್ತಿ :
ಕುವೆಂಪುರವರು ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಪ್ರಶಸ್ತಿ ಪಡೆದವರು. ಹಾಗಾಗಿ ಅವರು ಜಗದ ಕವಿ, ಯುಗದ ಕವಿಯಾಗಿ ಮತ್ತು ರಾಷ್ಟ್ರಕವಿಯಾಗಿ ಹೆಸರಾದರು .
8. ಹೆಚ್ಚು ಜ್ಞಾನಪೀಠ :
ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ವಿ ಕೃ ಗೋಕಾಕ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಹೀಗೆ ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಕೃಷಿ ಮಾಡಿ ರಾಷ್ಟ್ರದ ಉನ್ನತ ಪ್ರಶಸ್ತಿಯಾದ ಜ್ಞಾನಪೀಠವನ್ನು 8 ಜನ ಕವಿಗಳು ಪಡೆದಿರುವುದು ಕನ್ನಡ ಭಾಷೆಯ ಶ್ರೇಷ್ಠತೆ.
9. ವಿಕಿಪೀಡಿಯ ಲೋಗೋದಲ್ಲೂ ಕನ್ನಡ :
ದಿನನಿತ್ಯದ ಸರ್ವಜ್ಞ ಎಂದು ಈ ಆಧುನಿಕ ಯುಗದಲ್ಲಿ ಕರೆಯಲ್ಪಡುತ್ತಿರುವ ವಿಕಿಪೀಡಿ ಯಾವನ್ನು ಒಂದೊಮ್ಮೆ ಸರಿಯಾಗಿ ನೋಡಿದರೆ ಕನ್ನಡದ `ವಿ’ ಅಕ್ಷರ ಅದರಲ್ಲಿರುವುದು ಕಂಡು ಬರುತ್ತದ್ದೆ. ಇದು ಕನ್ನಡದ ಹೆಮ್ಮೆ ವಿಷಯ.
ಇಂತಹ ಅದ್ಭುತ ಭಾಷೆಯನ್ನು ಆಡುವ, ಕನ್ನಡಿಗರಾಗಿ ಜೀವಿಸುತ್ತಿರುವ ನಾವು ಧನ್ಯರು.
ಪ್ರತಿಯೊಬ್ಬ ಕನ್ನಡಿಗನು ಪ್ರತಿದಿನ ಕನ್ನಡವನ್ನು ಬಳಸಿದರೆ, ಬರೆದರೆ, ಓದಿದರೆ, ವ್ಯವಹಾರಿಕವಾಗಿ ಬಳಸಿದರೆ ಕನ್ನಡ ಭಾಷೆಯ ಶ್ರೇಷ್ಠತೆ ಮತ್ತಷ್ಟು ಉತ್ತುಂಗಕ್ಕೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಜೈ ಕನ್ನಡ !! ಜೈ ಕರ್ನಾಟಕ !!
ವೆಂಕಟೇಶ್ ಬಾಬು ಎಸ್
ಸಹಾಯಕ ಪ್ರಾಧ್ಯಾಪಕರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ದಾವಣಗೆರೆ.
[email protected]