ಮುರುಘಾ ಶರಣರಿಂದ ಅಂತರರಾಷ್ಟ್ರೀಯ ವೆಬಿನಾರ್‌ಗೆ ಚಾಲನೆ

ಚಿತ್ರದುರ್ಗ, ಆ.2- ಸಿದ್ಧಮಂಗಳಾ ಸೇವಾಕೇಂದ್ರ ಬೆಂಗಳೂರು, ಎಸ್‌ಜೆಎಂ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಚಿತ್ರದುರ್ಗ ಹಾಗೂ ಬಸವ ಬಳಗ ಮಸ್ಕತ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ವಿಚಾರ ಸಂಕಿರಣ (ವೆಬಿನಾರ್) ವನ್ನು ಡಾ. ಶಿವಮೂರ್ತಿ ಮುರುಘಾ ಶರಣರು ಉದ್ಘಾಟಿಸಿದರು.

ನಂತರ ವಚನ ಸಾಹಿತ್ಯ ಬಯಲೊಳಗಣ ರೂಪು ವಿಷಯ ಕುರಿತು ಮಾತನಾಡಿ, ಎಲ್ಲ ವಿಚಾರಗಳ ಕುರಿತು ಶರಣರು ತಮ್ಮ ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ತತ್ವಗಳನ್ನು ನಾವು ಪ್ರಾಯೋಗಿಕವಾಗಿ ದೈನಂದಿನ ಜೀವನದಲ್ಲಿ ಆಚರಣೆಗೆ ತರಬೇಕು. ಆಧುನಿಕ ತಂತ್ರಜ್ಞಾನದಂತೆ ಶರಣ ತತ್ವ ಇದೆ. ನಮ್ಮದು, ನಿಮ್ಮದು ಶೂನ್ಯ ಸಂಪಾದನೆ. ಶೂನ್ಯ ಸಿದ್ಧಾಂತ. ಅದಕ್ಕೆ ಬಯಲು ಎನ್ನುತ್ತಾರೆ. ನಮ್ಮ ಶಿವ ಅಗೋಚರನಾಗಿರುವವನಾಗಿದ್ದಾನೆ ಎಂದರು.

ಶೂನ್ಯ ಸಿದ್ಧಾಂತವನ್ನು ಅಲ್ಲಗಳೆಯಲು ಬರುವುದಿಲ್ಲ. ಇಡೀ ಬ್ರಹ್ಮಾಂಡದಲ್ಲಿ 9 ಗ್ರಹಗಳನ್ನು ನೋಡುತ್ತೇವೆ. ಸಾವಿರಾರು ನಕ್ಷತ್ರಗಳಿವೆ. ಒಂದು ಗ್ರಹ ಮತ್ತೊಂದು ಗ್ರಹದ ನಡುವೆ ಶೂನ್ಯವಿದೆ. ಆ ಶೂನ್ಯ ಇರುವುದರಿಂದ ಗ್ರಹಗಳ ಮಧ್ಯೆ ಡಿಕ್ಕಿ ಆಗುವುದಿಲ್ಲ. ಗ್ರಹಗಳಿಗೆ ಆಧಾರವಾಗಿರುವುದು ಬಯಲು. ಅನ್ವರ್ಥಕವಾಗಿರುವ ಸಿದ್ಧಾಂತ ಬಯಲು ಸಿದ್ಧಾಂತ. ಉದಾತ್ತವಾಗಿರುವ ತತ್ವ ಸಿದ್ಧಾಂತವನ್ನು ಶರಣರು ನಮಗೆ ಕೊಟ್ಟುಹೋಗಿದ್ದಾರೆ ಎಂದರು.

ವಚನ ಸಾಹಿತ್ಯ ಚಿಂತಕ ರಂಜಾನ್‌ದರ್ಗಾ ಮಾತನಾಡಿ, ಎಲ್ಲವೂ ಬಯಲಿನಿಂದ ಬಂದಿದೆ ಮತ್ತು ಬಯಲಲ್ಲಿ ಲೀನವಾಗುವುದು ಎಂದು ವಿಜ್ಞಾನಿ ಐನ್‌ಸ್ಟೈನ್ 12ನೇ ಶತಮಾನದಲ್ಲಿ ಶರಣರು ಹೇಳಿದ್ದನ್ನೇ ಹೇಳಿದ್ದಾರೆ. ಇದು ಅತ್ಯಂತ ವೈಜ್ಞಾನಿಕ ವಿಷಯವಾಗಿದೆ. ಚಿಂತನೆ ಮಾಡಬೇಕಿದೆ. ಅಲ್ಲಮ ಪ್ರಭುಗಳು ಭರತಖಂಡವನ್ನೇ ಸುತ್ತಿ ಅನೇಕ ಚಿಂತನೆ ಮಾಡಿದ ಶರಣರು. ಬಸವಣ್ಣನವರ ಕಡೆ ಬರಲು ಕಾರಣ ಬಸವಣ್ಣ ಜಗತ್ತಿನ ಪರಮ ಸತ್ಯವನ್ನು ಅರಿತಿದ್ದಾರೆ ಎಂಬುದಾಗಿತ್ತು.

ನೀಲಕಂಠ ಹಂಗರಗಿ ಅಧ್ಯಕ್ಷೀಯ ಭಾಷಣ ಮಾಡಿದರು. ಡಾ. ಶೀಲಾದೇವಿ ಎಸ್. ಮಳೀಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಧಾ ಶಶಿಕಾಂತ್, ಎನ್.ಸಿ. ಶಿವಪ್ರಕಾಶ್, ಪ್ರೊ. ಜಯಶ್ರೀ ಎಂ. ಒಡೆಯರ್ ಭಾಗವಹಿಸಿದ್ದರು.

ಎಂ.ಆರ್. ಆಶಾ ಪ್ರಾರ್ಥಿಸಿದರು. ಎಸ್‌ಜೆಎಂ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪಿ. ಶಿವಲಿಂಗಪ್ಪ ಸ್ವಾಗತಿಸಿದರು. ಡಾ. ಆರ್. ಸುಮ ವಂದಿಸಿದರು. ಜಿ.ಬಿ. ಮಹೇಶ್ವರಿ ಮತ್ತು ಎಂ.ಪಿ. ಆಕಾಶ್ ತಾಂತ್ರಿಕ ನಿರ್ವಹಣೆ ಮಾಡಿದರು.

error: Content is protected !!