ಜಗಳೂರು, ಆ.2- 660 ಕೋಟಿ ರೂ.ಗಳ ಮಹತ್ವದ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ಕಳಪೆ ಕಾಮಗಾರಿಯಾಗದಂತೆ ತಡೆಯಲು ತಾಲ್ಲೂಕಿನ ಪೈಪ್ ಲೈನ್ ಕಾಮಗಾರಿ ನಡೆಯುವ ಸುತ್ತಮುತ್ತಲಿನ ಗ್ರಾಮಗಳ ಭಾಗದಲ್ಲಿ 18 ರಿಂದ 40 ವರ್ಷದ ಯುವಕರು, ರೈತರು, ಜನಪರ ಸಂಘಟನೆಗಳು ಅದರಲ್ಲೂ ಯುವಕರು ಹೆಚ್ಚಿನದಾಗಿ ಪಾಲ್ಗೊಳ್ಳಬೇಕು ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಕೆ.ಬಿ. ಕಲ್ಲೇರುದ್ರೇಶ್ ತಿಳಿಸಿದ್ದಾರೆ.
ಪಟ್ಟಣದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದಿನಾಂಕ 1.02.2019 ರಲ್ಲಿ ನೀರಾವರಿ ಮಂಡಳಿಯ ಅಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ನೀರಾವರಿ ಸಭೆಯಲ್ಲಿ ಕೆರೆ ತುಂಬಿಸುವ ಯೋಜನೆಗೆ 650 ಕೋಟಿ ರೂ. ಅನುಮೋದನೆ ನೀಡಿದ್ದರು.
ತುಂಗಭದ್ರಾ ನದಿಯಿಂದ ತಾಲ್ಲೂಕಿನ 57 ಕೆರೆಗಳಿಗೆ ದಿಟೂರು ಏತ ನೀರಾವರಿಯಿಂದ 1.37 ಟಿಎಂಸಿ ನೀರನ್ನು ದಿನಾಂಕ 6 ಡಿಸೆಂಬರ್ 2018 ರಲ್ಲಿ ಮಂಡಿಸಿ, ಸಮಿತಿಯನ್ವಯ ಅನುಮೋದನೆಗೆ ಶಿಫಾರಸ್ಸು ಮಾಡಲಾಗಿದೆ ಎಂದು ಕೆ.ಬಿ. ಕಲ್ಲೇರುದ್ರೇಶ್ ದಾಖಲೆ ಸಮೇತ ಸ್ಪಷ್ಠೀಕರಣ ನೀಡಿದರು.
ತದನಂತರ 30-08-2019 ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಅವಧಿಯಲ್ಲಿ ಕ್ಯಾಬಿನೆಟ್ ಸಭೆಯೊಳಗೆ ಆರ್ಥಿಕ ಇಲಾಖೆಯು 250 ಕೋಟಿ ಇಳಿಕೆ ಮಾಡಲಾಗಿತ್ತು. ನಂತರ ಸಿರಿಗೆರೆ ಶ್ರೀಗಳ ಹಾಗೂ ಜನಪ್ರತಿನಿಧಿಗಳ ಒತ್ತಡದಿಂದ ದಿನಾಂಕ 07-09-2019 ರಂದು ಹಿಂಪಡೆದು, ನಂತರ 660 ಕೋಟಿ ಆಡಳಿತ್ಮಾತಕ ಅನುಮೋದನೆಯಾಗಿ ಮೊದಲ ಹಂತದಲ್ಲಿ 340 ಕೋಟಿ ರೂ. ಬಿಡುಗಡೆ ಮಾಡಿ, 2ನೇ ಹಂತದಲ್ಲಿ ಬಾಕಿ ಹಣವನ್ನು ಬಿಡುಗಡೆ ಮಾಡಲಾಯಿತು. ಈಗ ಕಾಮಗಾರಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸುರೇಶ್ ಗೌಡ್ರು, ಪ್ರಭು ಉಪಸ್ಥಿತರಿದ್ದರು.