ರೈತರ ಆತ್ಮಹತ್ಯೆ : ರಾಣೇಬೆನ್ನೂರಿನಲ್ಲಿ ರೈತರಿಂದ ಪ್ರತಿಭಟನೆ
ರಾಣೇಬೆನ್ನೂರು, ನ.5- ಸಾಲ-ಬಾಧೆಯಿಂದ ತಾಲ್ಲೂಕಿನ ನಿಟ್ಟೂರು ಗ್ರಾಮದ ರೈತರಿಬ್ಬರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡುವಂತೆ ಆಗ್ರಹಿಸಿ, ಕರ್ನಾಟಕ ರೈತ ಸಂಘದ ಕಾರ್ಯಕರ್ತರು ನಗರದ ಸರಕಾರಿ ಆಸ್ಪತ್ರೆ ಶವಾಗಾರದ ಎದುರು ಪ್ರತಿಭಟಿಸಿ ಉಪ ತಹಶೀಲ್ದಾರ್ ಎಂ.ಎನ್. ಹಾದಿಮನಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಮಂಜಪ್ಪ ಕರಿಯಪ್ಪನವರ ಮತ್ತು ಮಹೇಶ ಪರಸಳ್ಳಿ ಆತ್ಮಹತ್ಯೆಗೆ ಶರಣಾಗಿದ್ದರಿಂದ, ಅವರ ಕುಟುಂಬ ಸದಸ್ಯರು ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ. ಕೃಷಿಗಾಗಿ ಸಾಕಷ್ಟು ಸಾಲ ಮಾಡಿದ್ದ ರೈತರಿಗೆ ಇತ್ತೀಚಿಗೆ ಸುರಿದ ಮಳೆಯಿಂದಾಗಿ ಕೈಗೆ ಬಂದಿದ್ದ ಫಸಲು ನಾಶವಾಗಿದೆ. ಬೇರೆ ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊರೊನಾ ನೆಪದಿಂದ ರಾಜ್ಯ ಸರಕಾರ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಮಾಡಿದ ಸಾಲ ಮನ್ನಾದ 2 ಲಕ್ಷ ಹಣವನ್ನು ಹಿಂದಕ್ಕೆ ಪಡೆದಿರು ವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕಳೆದ 2-3 ವರ್ಷಗಳ ಅವಧಿಯಲ್ಲಿ ಆತ್ಮಹತ್ಯೆ ಮಾಡಿ ಕೊಂಡ ರೈತರ ಕುಟುಂಬಗಳಿಗೆ ಇದುವರೆಗೂ ಪರಿಹಾರ ದೊರಕಿರುವುದಿಲ್ಲ ಎಂದು ಹೇಳಿದರು.
ರವೀಂದ್ರಗೌಡ ಪಾಟೀಲ, ದಿಳ್ಳೆಪ್ಪ ಸತ್ಯಪ್ಪನವರ, ಸಿದ್ದಪ್ಪ ಕುಪ್ಪೇಲೂರ, ಸುರೇಶ, ಶಿವಪ್ಪ ನಂದಿಹಳ್ಳಿ, ಚಂದ್ರಣ್ಣ ಬೇಡರ, ರಾಮಪ್ಪ ಕಿರಗೇರಿ, ರೇವಣೆಪ್ಪ, ರಮೇಶ ಮಲ್ಲಾಡದ ಮತ್ತಿತರರು ಪ್ರತಿಭಟನೆಯಲ್ಲಿದ್ದರು.