ಹರಪನಹಳ್ಳಿ, ನ.5- ಕೃಷಿ ಪ್ರಧಾನ ಬಹುಸಂಖ್ಯಾತ ರೈತರಿಗೆ ಮಾರಕವಾದ ಭೂಸುಧಾರಣೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ, ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿಗಳು ಸೇರಿದಂತೆ, ವಿವಿಧ ಜನ ವಿರೋಧಿ ಕಾನೂನು ತಿದ್ದುಪಡಿ ಮಸೂದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತರಲು ಹೊರಟಿರುವ ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ, ಎ.ಐ.ಕೆ.ಎಸ್.ಸಿ.ಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ರವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಎ.ಐ.ಕೆ.ಎಸ್. ತಾಲ್ಲೂಕು ಅಧ್ಯಕ್ಷ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಕೇಂದ್ರ ಸರ್ಕಾರ ಜನತೆಯ ವಿರೋಧವನ್ನು ಲೆಕ್ಕಿಸಿದೇ ಕೃಷಿ ಕ್ಷೇತ್ರವನ್ನು ಖಾಸಗಿ ಕಾರ್ಪೊರೇಟ್ ಕಂಪನಿಗಳು ಪರಭಾರೆ ಮಾಡಲು ಹೊರಟಿರುವುದು ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿದಂತಾಗಿದೆ. ಇದರಿಂದ ಕೃಷಿ ಪ್ರಧಾನ ದೇಶದ ಬಹುಸಂಖ್ಯಾತ ರೈತರಿಗೆ ಮಾರಕ ಮರಣ ಶಾಸನಗಳು ಎದುರು ಆಗಿವೆ. ಕೂಡಲೇ ಜನವಿರೋಧಿ ತಿದ್ದುಪಡಿ ಮಸೂದೆಗಳನ್ನು ಹಿಂಪಡೆಯ ಬೇಕು ಎಂದು ಆಗ್ರಹಿಸಿದರು.
ಅತಿ ಹೆಚ್ಚು ಬೆಳೆ ಬೆಳೆದಿರುವ ಮೆಕ್ಕೆಜೋಳಕ್ಕೆ ಕ್ವಿಂಟಾಲ್ಗೆ ಕನಿಷ್ಠ ರೂ: 2,000 ಬೆಂಬಲ ಬೆಲೆ ಘೋಷಿಸಬೇಕು. ಕೋವಿಡ್-19 ಸಂಕಷ್ಟದಲ್ಲಿ ಸಿಲುಕಿ ಕೃಷಿ ಬಿಕ್ಕಟ್ಟಿನಿಂದ ಅಪಾರ ನಷ್ಟ ಎದುರು ಆಗಿದೆ. ಕೂಡಲೇ ನಷ್ಟ ಪ್ಯಾಕೇಜ್ ಘೋಷಿಸ ಬೇಕು. ಫಸಲ್ ಬಿಮಾ ಬೆಳೆ ವಿಮೆ ರೈತರಿಗೆ ನೀಡದೆ ಮೋಸ ವಂಚನೆ ಮಾಡಿರುವ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ದೇಶದಲ್ಲಿ ಸಮರ್ಪಕವಾಗಿ ಅತಿವೃಷ್ಟಿ, ಅನಾವೃಷ್ಟಿಗಳಿಂದ ರೈತರನ್ನು ರಕ್ಷಿಸಬೇಕು, ಡಾ|| ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಕರಡಿದುರ್ಗ ಚೌಡಪ್ಪ ಮಾತನಾಡಿ, ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ವರ್ಷದಲ್ಲಿ ಕನಿಷ್ಠ 200 ದಿನಗಳವರೆಗೆ ಕೆಲಸ ನೀಡಿ ರೂ. 600 ಕನಿಷ್ಠ ವೇತನ ಜಾರಿಗೊಳಿಸಬೇಕು. ತಾಲ್ಲೂಕಿನಲ್ಲಿ ಮಹತ್ತರ ನೀರಾವರಿ ಯೋಜನೆಯಾದ ಗರ್ಭಗುಡಿ ಬ್ರಿಡ್ಜ್ ಕಮ್ ಬ್ಯಾರೇಜ್ ಕಾಮಗಾರಿಯನ್ನು ಗುಣಮಟ್ಟ ಹಾಗೂ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಅಲ್ಲದೆ ರಸ್ತೆ ದುರಸ್ತೀಕರಣ ಹಾಗೂ ಗುಣಮಟ್ಟ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರುಗಳಾದ ಕೆ.ಕಲ್ಲಹಳ್ಳಿ ಗೋಣೆಪ್ಪ, ಗೌರಿಹಳ್ಳಿ ಹನುಮಂತಪ್ಪ, ಸತ್ತೂರು ಮಹಾದೇವಪ್ಪ, ಡಿ.ಎಸ್.ಎಸ್ ಮುಖಂಡರಾದ ಕಬ್ಬಳ್ಳಿ ಮೈಲಪ್ಪ, ಪುಣಬಘಟ್ಟೆ ಮಂಜಪ್ಪ, ಸಿ.ಪಿ.ಐ.ಎಂ.ಎಲ್.ನ ಸಂದೇರ ಪರಶುರಾಮ, ಎ.ಐ.ವೈ.ಎಫ್ ರಾಜ್ಯ ಕಾರ್ಯದರ್ಶಿ ಹೆಚ್.ಎಂ.ಸಂತೋಷ, ಎ.ಐ.ಎಸ್.ಎಫ್ ರಾಜ್ಯ ಕಾರ್ಯದರ್ಶಿ ರಮೇಶ್ನಾಯ್ಕ, ಸಹ ಕಾರ್ಯದರ್ಶಿಗಳಾದ ಮಾದಿಹಳ್ಳಿ ಮಂಜಪ್ಪ, ಕೊಟ್ರೇಶ್ ಬಳಿಗನೂರು, ಉಪಾಧ್ಯಕ್ಷ ಚಂದ್ರನಾಯ್ಕ, ಎ.ಐ.ವೈ.ಎಫ್. ತಾಲ್ಲೂಕು ಉಪಾಧ್ಯಕ್ಷ ಮುಜೀಬ್ ರಹಿಮಾನ್, ತೌಡೂರು ಕೊಟ್ರಯ್ಯ ಹಾಗು ಇತರರು ಭಾಗವಹಿಸಿದ್ದರು.