ಹರಪನಹಳ್ಳಿ, ಆ.2- ಜಗತ್ತಿನಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಮಕ್ಕಳ ಕಲಿಕೆ ಕುಂಠಿತವಾಗಬಾರದೆಂದು ಖಾಸಗಿ ಶಾಲಾ-ಕಾಲೇಜು ಗಳು ತಂತ್ರಜ್ಞಾನ ಬಳಸಿ ಮಕ್ಕಳಿಗೆ ಆನ್ಲೈನ್ ಮೂಲಕ ಶಿಕ್ಷಣ ನೀಡುತ್ತಿದ್ದು ಇದಕ್ಕೆ ಪರ್ಯಾಯವಾಗಿ ತಾಲ್ಲೂಕಿನ ಮುತ್ತಿಗಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕರ ಆಸಕ್ತಿಯ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ವಠಾರ ಶಾಲೆಯ ಮೂಲಕ ಮಕ್ಕಳಿಗೆ ಪೂರಕ ಶಿಕ್ಷಣ ನೀಡಲಾಗುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಯ ಬಡ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಸಲುವಾಗಿ ಶಿಕ್ಷಣ ಇಲಾಖೆ ಈ ವಠಾರ ಶಾಲೆ ಎನ್ನುವಂತಹ ವಿನೂತನ ಪ್ರಯೋಗಾತ್ಮಕ ಕಾರ್ಯಕ್ಕೆ ಮುಂದಾಗಿದ್ದು, ಈ ವಠಾರ ಶಾಲೆಗೆ ಡಿಡಿಪಿಐ ಸಿ.ರಾಮಪ್ಪ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಶಿಕ್ಷಕರ ಈ ಕಾರ್ಯಕ್ಕೆಮೆಚ್ಚುಗೆ ವ್ಯಕ್ತಪಡಿಸಿ, ಅವರಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಮಕ್ಕಳ ಕಲಿಕೆಗೆ ಪೂರಕವಾದ ಕಥೆ, ಹಾಡು, ಕಲಿಕಾ ಪೂರಕ ಚಟುವಟಿಕೆಗಳ ಮೂಲಕ ಮಕ್ಕಳನ್ನು ನಿರಂತರ ಕಲಿಕಾ ಪ್ರಕ್ರಿಯೆ ತೊಡಗಿಸುವಂತೆ ಮಾಡುವ ಕಾರ್ಯವೇ ಈ ವಠಾರ ಶಾಲೆಯ ಮುಖ್ಯಉದ್ದೇಶವಾಗಿದ್ದು, ಗ್ರಾಮದ ಅಕ್ಕ ಪಕ್ಕದ ಮನೆಯ 1 ರಿಂದ 7ನೇ ತರಗತಿ ಓದುತ್ತಿರುವ ಕನಿಷ್ಟ 20 ರಿಂದ 25 ಮಕ್ಕಳನ್ನು ಅವರ ಮನೆಗಳ ಸಮೀಪದ ದೇವಸ್ಥಾನ, ಮರದ ನೆರಳು, ಶಾಲಾ ಆವರಣದ ವಿಶಾಲವಾದ ಪ್ರದೇಶದಲ್ಲಿ ಸಾಮಾಜಿಕ ಅಂತರ ಹಾಗೂ ಕೊರೊನಾ ಸೋಂಕು ತಡೆಗಟ್ಟಲು ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ.
ಶಾಲೆಯ ಬಡ್ತಿ ಮುಖ್ಯಶಿಕ್ಷಕ ವೈ.ಆರ್.ಹಾಲೇಶ್ನಾಯ್ಕ, ಸಹಶಿಕ್ಷಕರಾದ ಎಂ.ಯಾಹ್ಯ, ಗಂಗಮ್ಮ, ವಿರುಪಾಕ್ಷಪ್ಪ, ಚಂದ್ರಪ್ಪ ಹಾಗೂ ನಿಚ್ಚಾಪುರ ಶಾಲೆಯ ಮುಖ್ಯಶಿಕ್ಷಕ ಎಂ.ಷರೀಫ್ ಸೇರಿದಂತೆ ಬೆಣ್ಣಿಹಳ್ಳಿ ಕ್ಲಷ್ಟರ್ನ ಸಿಆರ್ಪಿಗಳಾದ ಯುವರಾಜ್, ಶ್ರೀಕಾಂತ್ ಇದ್ದರು.