ಹ್ಯಾಟ್ರಿಕ್ ಶಾಸಕ ರೇಣುಕಾಚಾರ್ಯಗೆ ಸಚಿವ ಸ್ಥಾನ: ತಾಲ್ಲೂಕಿನ ಜನರ ಕೂಗು

ಹೊನ್ನಾಳಿ, ಜು.31- ರಾಜ್ಯದಲ್ಲಿ ವಿಧಾನ ಪರಿಷತ್ ಸದಸ್ಯರ ಆಯ್ಕೆಯಾಗುತ್ತಿದ್ದಂತೆ, ಸಚಿವ ಸ್ಥಾನದ ಆಕಾಂಕ್ಷಿಗಳ ಕನಸು ಗರಿಗೆದರಿದೆ.

ಸಾಕಷ್ಟು ಜನ ಶಾಸಕರು ತಮ್ಮ ಸಚಿವ ಸ್ಥಾನದ ಆಸೆಯನ್ನು ಬದಿಗೊತ್ತಿ, ಸರ್ಕಾರ ರಚನೆಗೆ ಸಹಕಾರ ನೀಡಿದವರಿಗೆ ತಮ್ಮ ಸಚಿವ ಸ್ಥಾನವನ್ನು ಬಿಟ್ಟು ಕೊಡುವ ಮೂಲಕ ಯಡ್ಯೂರಪ್ಪನವರ ಬೆನ್ನಿಗೆ ನಿಂತಿದ್ದರು.

ಆದರೇ ಇದೀಗ ಯಡ್ಯೂರಪ್ಪನವರ ಸರ್ಕಾರ ಒಂದು ವರ್ಷ ಪೂರೈಸುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರಲ್ಲಿ ಆಸೆ ಚಿಗುರೊಡೆಯಲು ಆರಂಭಿಸಿದೆ. ಅದರಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಯಡ್ಯೂರಪ್ಪನವರ ಮಾನಸ ಪುತ್ರ ಎಂದು ಕರೆಸಿಕೊಳ್ಳುವ ಎಂ.ಪಿ.ರೇಣುಕಾಚಾರ್ಯ ಮೂರು ಬಾರಿ ಶಾಸಕರಾಗಿದ್ದು, ಈ ಬಾರಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಕೂಗು ಅವಳಿ ತಾಲ್ಲೂಕಿನಲ್ಲಿ ಕೇಳಿ ಬರುತ್ತಿದೆ.

ನನಗೆ ಸಚಿವ ಸ್ಥಾನ ಮುಖ್ಯವಲ್ಲ ಜಿಲ್ಲೆಯ ಅಭಿವೃದ್ದಿ ಮುಖ್ಯವೆಂದಿರುವ ರೇಣುಕಾಚಾರ್ಯ ಅವಳಿ ತಾಲೂಕಿನಾದ್ಯಂತ ಕಾಲಿಗೆ ಚಕ್ರಕಟ್ಟಿಕೊಂಡಂತೆ ಕೊರೊನಾ ಜಾಗೃತಿ ಮೂಡಿಸುವುದು, ಮಾಸ್ಕ್ ವಿತರಣೆ, ಹಸಿದವರಿಗೆ ಊಟಕ್ಕೆ ನೀಡುತ್ತಾ, ಅಸಹಾಯಕ ಸ್ಥಿತಿಯಲ್ಲಿರುವವರಿಗೆ ಫುಡ್ ಕಿಟ್ ನೀಡುವುದರ ಜೊತೆ ಜೊತೆಗೆ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಕೋಟಿ ಕೋಟಿ ಹಣ ತಂದು ಅಭಿವೃದ್ದಿ ಪಡಿಸುತ್ತಿದ್ದಾರೆ.

ಈಗಾಗಲೇ ಅವಳಿ ತಾಲೂಕಿನಾದ್ಯಂತ ಕೋಟ್ಯಾಂತರ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಉದ್ಘಾಟಿಸುವುದರ ಜೊತೆಗೆ ಹೊಸ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡುವುದರ ಮೂಲಕ ಅಭಿವೃದ್ಧಿಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಇದೀಗ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸುತ್ತಿದ್ದಂತೆ ಅವಳಿ ತಾಲ್ಲೂಕುಗಳಾದ ನ್ಯಾಮತಿ ಹಾಗೂ ಹೊನ್ನಾಳಿಯಲ್ಲಿ ರೇಣುಕಾಚಾರ್ಯರಿಗೆ ಈ ಬಾರಿ ಸಚಿವ ಸ್ಥಾನ ನೀಡ ಬೇಕೆಂದು ಅವರ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.

ರಾಜ್ಯದಲ್ಲಿರುವ ಎಲ್ಲಾ ಶಾಸಕರಿಗೆ ಹೋಲಿಸಿದರೆ ಹ್ಯಾಟ್ರಿಕ್ ಶಾಸಕ ಎಂದು ಕರೆಸಿಕೊಂಡಿರುವ ರೇಣುಕಾಚಾರ್ಯ ಕೊರೊನಾವನ್ನೂ ಲೆಕ್ಕಿಸಿದೇ ತನಗಿಂತ, ತನ್ನ ಕುಟುಂಬಕ್ಕಿಂತ ಕ್ಷೇತ್ರದ ಜನರ ಆರೋಗ್ಯ ಮುಖ್ಯ ಎಂದು ಅವಳಿ ತಾಲೂಕಿನಲ್ಲಿ ಕೊರೊನಾ ಜಾಗೃತಿ ಮೂಡಿಸುವ ಮಹತ್ತರ ಕೆಲಸ ಮಾಡುತ್ತಿದ್ದು, ಅವರ ಕೆಲಸವನ್ನು ಗುರುತಿಸಿಯಾದರೂ ಯಡ್ಯೂರಪ್ಪನವರು ರೇಣುಕಾಚಾರ್ಯ ಅವರಿಗೆ ಸಚಿವ ಸ್ಥಾನ ನೀಡುತ್ತಾರಾ ಎಂಬುದನ್ನು ಕಾದು ನೋಡ ಬೇಕಿದೆ.

error: Content is protected !!