ಸರ್ಕಾರಿ ನೌಕರರ ಹಿತ ಕಾಪಾಡಲು ಸರ್ಕಾರಿ ನೌಕರರ ಸಂಘ ಬದ್ಧ

ಹರಪನಹಳ್ಳಿ : ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಷಡಾಕ್ಷರಿ

ಹರಪನಹಳ್ಳಿ,ನ.3 – ಸರ್ಕಾರಿ ನೌಕರರ ಹಿತ ಕಾಪಾಡಲು ರಾಜ್ಯ ಸರ್ಕಾರಿ ನೌಕರರ ಸಂಘ ಬದ್ದವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಷಡಾಕ್ಷರಿ  ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಿನ್ನೆ ಜರುಗಿದ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯ ಸರ್ಕಾರಿ ನೌಕರರಿಗೆ ನಗದು ರಹಿತ ಚಿಕಿತ್ಸೆ ನೀಡುವ ನೂತನ ಆರೋಗ್ಯ ಯೋಜನೆ ಶೀಘ್ರ ಅನುಷ್ಠಾನಗೊಳ್ಳುವುದು ಎಂದ ಅವರು ನಗದು ರಹಿತ ಚಿಕಿತ್ಸೆಯ ಹೊಸ ಆರೋಗ್ಯ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದ್ದು, ಸರ್ಕಾರ ಶೀಘ್ರ ಅನುಷ್ಠಾನ ಗೊಳಿಸುವ ಭರವಸೆಯನ್ನು ನೀಡಿದೆ ಎಂದರು.

ಇದರಿಂದ 6 ಲಕ್ಷ ನೌಕರರು ಹಾಗೂ ಅವರ ಕುಟುಂಬ ಸೇರಿ ಒಟ್ಟು 22 ಲಕ್ಷ ಜನರಿಗೆ ಅನುಕೂಲವಾಗುತ್ತದೆ, ಇದರಿಂದ ಎಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ಹಾಗೂ ಪ್ರತಿ ತಿಂಗಳು 1 ಸಾವಿರ ರೂ ಬೆಲೆ ಬಾಳುವ ಔಷಧಿಯನ್ನು ಸರ್ಕಾರಿ ನೌಕರರು ಪಡೆಯಬಹುದು ಎಂದ ಅವರು, ನೌಕರರು ತಮ್ಮ ವಿವಿಧ 38 ವಿಷಯಗಳಿಗೆ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಎಲ್ಲಾ ಮೊಬೈಲ್‍ನಲ್ಲಿಯೇ ಅರ್ಜಿ ಹಾಕಿ ಕೆಲಸ ಮಾಡಿಕೊಳ್ಳಬಹುದು ಇದು ಸಹ 8-9 ತಿಂಗಳಲ್ಲಿ ಜಾರಿಗೆ ಬರುತ್ತದೆ ಎಂದು ಅವರು ತಿಳಿಸಿದರು.

ಕೆಜಿಐಡಿ ಸ್ಕೀಂ ಸಹ ಅತ್ಯಾಧುನಿಕವಾಗಿ ಗಣಕೀಕರಣವಾಗಿದೆ, ಶೀಘ್ರ ಲೋಕಾರ್ಪಣೆಗೊಳ್ಳಲಿದೆ, ವೃಂದ ನೇಮಕಾತಿಗೆ ತಿದ್ದುಪಡಿ ಮಾಡಲಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರಿ ನೌಕರರಿಗೆ ಸರಿ ಸಮನಾಗಿ ವೇತನವನ್ನು ರಾಜ್ಯ ಸರ್ಕಾರಿ ನೌಕರರಿಗೂ ನೀಡಬೇಕು ಎಂಬ ಒತ್ತಾಯವಿದೆ, ಬೀದಿಗಿಳಿದು ಹೋರಾಟ ಮಾಡುವ ಪ್ರಸಂಗ ಬರುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು.

ಎನ್‍ಪಿಎಸ್ ಸ್ಕೀಂ ರದ್ದು ಮಾಡುವ ಕುರಿತು ನೇಮಿಸಿರುವ ಕಮಿಟಿ ವರದಿ ಸಿದ್ದ ಮಾಡಿದೆ. ಸರ್ಕಾರಕ್ಕೆ ವರದಿ ನೀಡಿದ ನಂತರ ನಮ್ಮ ಹೋರಾಟ ಇದೆ, ಹರಪನಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಿಸಲು ಸ್ಥಳೀಯ  ಶಾಸಕರ ಜೊತೆ ಚರ್ಚಿಸುತ್ತೇನೆ ಎಂದರು.

ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ತ್ ಸದಸ್ಯ ಬಸವರಾಜ ಸಂಗಪ್ಪನವರ್, ಬಳ್ಳಾರಿ ಜಿಲ್ಲಾ ನೌಕರರ ಸಂಘದ
ಅಧ್ಯಕ್ಷ ಶಿವಾಜಿರಾವ್, ದಾವಣಗೆರೆ ಜಿಲ್ಲಾಧ್ಯಕ್ಷ ಪಾಲಾಕ್ಷಪ್ಪ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಮಂಜುನಾಥ, ಹರಪನಹಳ್ಳಿ ತಾಲ್ಲೂಕು ಅಧ್ಯಕ್ಷ ಸಿದ್ದಲಿಂಗನಗೌಡ, ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಅಂಜಿನಪ್ಪ, ಹಡಗಲಿ, ಕೊಟ್ಟೂರು ತಾಲ್ಲೂಕುಗಳ ಅಧ್ಯಕ್ಷರು, ಸ್ಥಳೀಯ ಪದಾಧಿಕಾರಿಗಳಾದ ಕುಬೇಂದ್ರನಾಯ್ಕ, ಬಿ.ಎಚ್.ಚಂದ್ರಪ್ಪ, ರಾಮಪ್ಪ, ವೆಂಕಟೇಶ್ ಬಾಗಲಾರ, ಬಿ.ರಾಜಶೇಖರ್, ಷಣ್ಮುಖಪ್ಪ, ಪದ್ಮರಾಜ್ ಜೈನ್ ಉಪಸ್ಥಿತರಿದ್ದರು.

error: Content is protected !!