ತುಂಗಾ ನಾಲೆ ಆಧುನೀಕರಣ ಕಾಮಗಾರಿ ವೀಕ್ಷಿಸಿದ ಶಾಸಕ ರೇಣುಕಾಚಾರ್ಯ

ಹೊನ್ನಾಳಿ, ಜು.30- ತುಂಗಾ ಎಡ ಹಾಗೂ ಬಲ ದಂಡೆ ನಾಲೆಗಳ ಆಧುನೀಕರಣ ಕಾಮಗಾರಿ ಭರದಿಂದ ಸಾಗಿದ್ದು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲನೆ ನಡೆಸಿದರು. 

ನಗರದ ಕೋರ್ಟ್‌ ಮುಂಭಾಗ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯ ಗುಣಮಟ್ಟ ವೀಕ್ಷಿಸಿದ ಶಾಸಕರು, ಕಾಮಗಾರಿ ಕಳಪೆ  ಆಗದಂತೆ ಸೂಚನೆ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದರು. 

309 ಕೋಟಿ ರೂ. ವೆಚ್ಚದಲ್ಲಿ ತುಂಗ ಎಡ ಹಾಗೂ ಬಲದಂಡೆ ನಾಲೆಗಳ ಆಧುನೀಕರಣ ಕಾಮಗಾರಿ ಮಾಡುತ್ತಿದ್ದು, ಇದರಿಂದ ಕೊನೆ ಭಾಗದ ರೈತರಿಗೆ ನೀರು ತಲುಪಲು ಅನುಕೂಲ ವಾಗಲಿದೆ ಎಂದರು. ಕಳೆದ 60 ವರ್ಷಗಳಿಂದ ತುಂಗಾ ಎಡ ಹಾಗೂ ಬಲದಂಡೆ ನಾಲೆಗಳಲ್ಲಿ ನೀರು ಹರಿದ ಪರಿಣಾಮ ಮಣ್ಣು ಸವಕಳಿಯಿಂದ ಕಾಲುವೆಗಳು ಅಗಲವಾಗಿ, ಹೂಳು ತುಂಬಿ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ತಲುಪುವುದು ಕಷ್ಟವಾಗಿತ್ತು. ಇದನ್ನು ಮನಗಂಡು, ಸರ್ಕಾರಕ್ಕೆ ತುಂಗಾ ಮೇಲ್ದಂಡೆ ಕಾಲುವೆಗಳ ಆಧುನೀಕರಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಸರ್ಕಾರ ಇದೀಗ  309 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲು ಅನುಮೋದನೆ ನೀಡಿದೆ ಎಂದರು.  ಮುಂದಿನ ದಿನಗಳಲ್ಲಿ ಕೊನೆ ಭಾಗಕ್ಕೂ ನೀರು ಸರಿಯಾಗಿ ತಲುಪಲಿದ್ದು, ಕೊನೆ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದವರು ಹೇಳಿದರು.

ಕಾಮಗಾರಿಯ ಸ್ವರೂಪ : ತುಂಗಾ ಅಣೆಕಟ್ಟು ಯೋಜನೆಯು ತುಂಗಾ ಎಡದಂಡೆ ಮತ್ತು ತುಂಗಾ ಬಲದಂಡೆ ನಾಲೆಗಳನ್ನು ಒಳಗೊಂಡಿದೆ. ತುಂಗಾ ಎಡದಂಡೆ ನಾಲೆ 101.06 ಕಿ.ಮೀ ಉದ್ದವಿದ್ದು, 62 ವಿತರಣಾ ನಾಲೆಗಳನ್ನು ಒಳಗೊಂಡಿದೆ. ಈ ನಾಲೆಗಳ ಮೂಲಕ ಶಿವಮೊಗ್ಗ ಹಾಗೂ ಹೊನ್ನಾಳಿ ತಾಲ್ಲೂಕಿನ 6678 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಗುತ್ತದೆ. ಇದರಲ್ಲಿ ಹೊನ್ನಾಳಿ ತಾಲ್ಲೂ ಕಿನ 3277 ಹೆಕ್ಟೇರ್, ಶಿವಮೊಗ್ಗ ತಾಲ್ಲೂಕಿನ 3401 ಹೆಕ್ಟೇರ್ ಪ್ರದೇಶಕ್ಕೆ ನೀರು ಪೂರೈಕೆಯಾಗ ಲಿದೆ. ತುಂಗಾ ಬಲದಂಡೆ ನಾಲೆಯು 53.80 ಕಿ.ಮೀ ಉದ್ದವಿದ್ದು, 38 ವಿತರಣಾ ನಾಲೆಗಳನ್ನು ಒಳಗೊಂಡಿದೆ. ಇದರಿಂದ ಶಿವಮೊಗ್ಗ ತಾಲ್ಲೂಕಿನ 2029 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸುತ್ತಿದ್ದು, ಸದರಿ ತುಂಗಾ ಅಣೆಕಟ್ಟು ಯೋಜನೆಯಿಂದ 8707 ಹೆಕ್ಟೇರ್ ಪ್ರದೇಶಕ್ಕೆ ನೀರು ಪೂರೈಕೆಯಾಗಲಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ದೀಪಾ ಜಗದೀಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಆರ್.ಮಹೇಶ್, ಸುರೇಂದ್ರನಾಯ್ಕ, ಅವಳಿ ತಾಲ್ಲೂಕುಗಳ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಲ್.ರಂಗನಾಥ್, ಎಸ್.ಪಿ. ರವಿಕುಮಾರ್ ಸೇರಿದಂತೆ ಪಟ್ಟಣ ಪಂಚಾಯಿತಿ ಸದಸ್ಯರು, ಬಿಜೆಪಿ ಮುಖಂಡರು, ನೀರಾವರಿ ಇಲಾಖೆ ಅಧಿಕಾರಿಗಳಿದ್ದರು.

error: Content is protected !!