ಅಂಚೆ ಮೂಲಕ ರಾಖಿ ಕಳುಹಿಸುವ ವಿನೂತನ ಪರಿಕಲ್ಪನೆ

ಅಂಚೆ ಮೂಲಕ ರಾಖಿ ಕಳುಹಿಸುವ ವಿನೂತನ ಪರಿಕಲ್ಪನೆ - Janathavani
ದಾವಣಗೆರೆ, ಜು.29 – ಭಾರತೀಯ ಅಂಚೆ ಇಲಾಖೆಯಿಂದ ರಾಖಿ ಪ್ರಿಯರಿಗೊಂದು ಸಿಹಿ ಸುದ್ದಿ. ಕೋವಿಡ್ 19 ಎಲ್ಲೆಡೆ ಹರಡುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರಕ್ಷಾ ಬಂಧನ ಹಬ್ಬಕ್ಕೆ ರಾಖಿ ಖರೀದಿಗೆ ಅಂಗಡಿಗಳಿಗೆ ಅಲೆದಾಡುವ ಪರದಾಟವಿಲ್ಲದೇ ದೂರದ ಊರಿನಲ್ಲಿರುವ ಸಹೋದರನಿಗೆ ಮನೆಯಲ್ಲೇ ಕುಳಿತು ಮೊಬೈಲ್‍ನಿಂದ ಅಂತರ್ಜಾಲ ಮೂಲಕ ರಾಖಿಯನ್ನು ಕಳುಹಿಸುವ ವಿನೂತನ ಪರಿಕಲ್ಪನೆಯನ್ನು ಭಾರತೀಯ ಅಂಚೆ ಇಲಾಖೆ ಜಾರಿಗೆ ತಂದಿದೆ.

www.karnatakapost.gov.in.ಮುಖಾಂತ ರ ಮನೆಯಲ್ಲಿ ಕುಳಿತು ಕರ್ನಾಟಕ ರಾಜ್ಯದೊಳಗಿನ ಗ್ರಾಹಕರು ಭಾರತದ ಯಾವುದೇ ಪ್ರದೇಶಕ್ಕೂ ಕೂಡ ರಾಖಿಯನ್ನು ತ್ವರಿತ ಅಂಚೆ (ಸ್ಪೀಡ್ ಪೋಸ್ಟ್) ಮುಖಾಂತರ ಬಹು ಸುಲಭವಾಗಿ ಕೇವಲ ರೂ.100 ವೆಚ್ಚದಲ್ಲಿ ಕಳುಹಿಸಬಹುದು. 

ಈ ಸೇವಾ ಯೋಜನೆಯನ್ನು ಕರ್ನಾಟಕ ವೃತ್ತದ ಪೋಸ್ಟ್ ಮಾಸ್ಟರ್ ಜನರಲ್ ಶಿರ್ತಾಡಿ ರಾಜೇಂದ್ರ ಕುಮಾರ್‍ ಅವರೊಂದಿಗೆ ಬೆಂಗಳೂರಿನಲ್ಲಿ ಇತ್ತೀಚೆಗೆ ಲೋಕಾರ್ಪಣೆ ಮಾಡಿದ್ದು, ಕಳೆದ ಕೆಲವು ವರ್ಷಗಳಿಂದ ಭಾರತೀಯ ಅಂಚೆ ಇಲಾಖೆಯಲ್ಲಿ ದೊರೆಯುತ್ತಿದ್ದ ರಾಖಿ ಲಕೋಟೆಗಳಿಗೆ ಹೊಸ ಆಯಾಮ ದೊರೆದಂತಾಗಿದೆ. 

ಸಹೋದರರಿಗೆ ಮಾತ್ರವಲ್ಲದೇ ಲಡಾಕ್ ಗಡಿ ಪ್ರದೇಶದಲ್ಲಿರುವ ಸೇನಾ ಯೋಧರಿಗೂ ರಾಖಿ ತಲುಪಿಸುವ ಅವಕಾಶವಿದ್ದು, ಅವರಿಗೆಂದೇ ಮುದ್ರಿತ ಸಂದೇಶವನ್ನು ಆಯ್ಕೆ ಮಾಡಿ ರವಾನಿಸಬಹುದಾಗಿದೆ. ಬಲು ಸರಳವಾದ ಪ್ರಕ್ರಿಯೆಯನ್ನು ಹೊಂದಿರುವ ಈ ಸೇವಾ ಯೋಜನೆಯಲ್ಲಿ www.karnatakapost.gov.in/Rakhi_Post ಗೆ ಲಾಗಿನ್ ಆಗಿ ಕಳುಹಿಸುವವರ ಪೂರ್ಣ ವಿವರಗಳನ್ನು ನೀಡಿ ಮುಂದುವರೆದಾಗ ಸುಮಾರು ಹನ್ನೊಂದು ವಿವಿಧ ಆಕರ್ಷಕ ವಿನ್ಯಾಸವುಳ್ಳ ರಾಖಿಗಳು ವೀಕ್ಷಣೆ ಮಾಡಲು ಲಭ್ಯವಿರುತ್ತವೆ. ಪ್ರತಿಯೊಂದು ವಿನ್ಯಾಸದ ಎದುರು ವಿನ್ಯಾಸ ಅಂಕಿ ನಮೂದಿಸಿದ್ದು, ನಮಗೆ ಬೇಕಾದ ವಿನ್ಯಾಸವನ್ನು ಆರಿಸಿ ಮುಂದುವರೆದಾಗ ಸಂದೇಶ ಕಳುಹಿಸುವ ಆಯ್ಕೆ ಕಾಣ ಸಿಗುತ್ತದೆ. 

ರಾಖಿಗಳ ಸೀಮಿತ ದಾಸ್ತಾನು ಲಭ್ಯವಿದ್ದು, ಈ ಸೇವಾ ವಿಧಾನದ ಮೂಲಕ ರಾಖಿ ಕಳುಹಿಸಲು ಇದೇ ತಿಂಗಳ 31 ನೇ ತಾರೀಕು ಕೊನೆಯ ದಿನವಾಗಿರುತ್ತದೆ. ರಾಖಿ ಕಳುಹಿಸಲು 100 ರೂಪಾಯಿ ಶುಲ್ಕವಾಗಿದ್ದು ಅದನ್ನು ಅಂತರ್ಜಾಲ ಬ್ಯಾಂಕಿಂಗ್, ನಮ್ಮದೇ ಇಲಾಖೆಯ ಐಪಿಪಿಬಿ, ಗೂಗಲ್ ಪೇ, ಭೀಮ್ ಆಪ್, ಫೋನ್ ಪೇ ಮುಂತಾದ ನೆಟ್ ಪೇಮೆಂಟ್ ವಿಧಾನದಲ್ಲಿ ನೀಡಬಹುದಾಗಿದೆ. ಮನೆಯೊಳಗೇ ಕುಳಿತು ಭಾರತದ ಯಾವುದೇ ಮೂಲೆಗೂ ಕಳುಹಿಸಬಹುದಾದ ಈ ಸೇವೆ ಅಪಾರ ಜನಮನ್ನಣೆ ಪಡೆದಿದ್ದು, ಸಾಮಾನ್ಯ ಜನರಿಗೆ ಅನುಕೂಲಕರವಾಗಿದೆ.

error: Content is protected !!