ರಾಣೇಬೆನ್ನೂರು, ಜು.28- ಕೋವಿಡ್-19 ಸಾವು ತರುವ ರೋಗವಲ್ಲ ಎಂದು ಇಲ್ಲಿನ ತಹಶೀಲ್ದಾರ್ ಬಸವನಗೌಡ ಕೋಟೂರ ಹೇಳಿದರು.
ಅವರಿಗೆ ಕಳೆದ ವಾರದ ಗಂಟಲು ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು, ಒಂದು ವಾರ ಮನೆಯಲ್ಲಿದ್ದು, ಅವರು ಇಂದು ಕಛೇರಿಗೆ ಆಗಮಿಸಿ ಸುದ್ದಿಗೋಷ್ಠಿ ನಡೆಸಿದರು.
ಅರಿಶಿಣ ಹಾಕಿ ಕುದಿಸಿದ ಹಾಲು, ಬಿಸಿ ನೀರು, ಸಾಮಾಜಿಕ ಅಂತರ, ಮಾಸ್ಕ್ ಮುಂತಾದ ವೈದ್ಯರ ಸಲಹೆಗಳನ್ನು ಪಾಲಿಸಿದಲ್ಲಿ ಕೊರೊನಾ ನಿಮ್ಮ ಬಳಿ ಸುಳಿಯಲಾರದು. ನಿಮ್ಮ ಅಲಕ್ಷ್ಯತೆ ನಿಮ್ಮನ್ನು ರೋಗಿಗಳಾಗಿ ಸುತ್ತೆ. ಇದಕ್ಕೆ ಸೂಕ್ತ ಔಷಧಿ ಇಲ್ಲ. ವೈದ್ಯರ ಸಲಹೆಗಳ ಪಾಲನೆಯೇ ಔಷಧಿ ಎಂದು ತಹಶೀಲ್ದಾರ್ ವಿವರಿಸಿದರು.
ಕಳೆದ 4 ತಿಂಗಳುಗಳಿಂದ ಕೊರೊನಾ ವೈರಸ್ ಹರಡದಂತೆ ಹೋರಾಟ ನಡೆಸಿದ ಎಲ್ಲರ ಜೊತೆ ಸಂಪರ್ಕದಿಂದ ನನಗೆ ಸೋಂಕು ತಗುಲಿತು. ದಿನಾಂಕ 9 ರಂದು ದ್ರವ ಪರೀಕ್ಷೆ, 19 ರಂದು ಪಾಜಿಟಿವ್, 20 ರಂದು ಕಛೇರಿ ಸೀಲ್ ಡೌನ್, 23 ನೆಗೆಟಿವ್ ವರದಿ ಬಂದಿದೆ. ಸರ್ಕಾರದ ಆದೇಶದಂತೆ ನಡೆದುಕೊಂಡು ಮತ್ತೆ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈಗ ಆರೋಗ್ಯವಾಗಿದ್ದೇನೆ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಅದನ್ನು ಜಾಗರೂಕರಾಗಿ ಕಾಪಾಡಿಕೊಳ್ಳಿ ಎಂದು ತಹಶೀಲ್ದಾರ್ ಹೇಳಿದರು.
ಜನರು ಈ ವೈರಸ್ ಬಗ್ಗೆ ಚಿಂತಿಸದೆ ಅಧ್ಯಾತ್ಮಿಕ ಚಟುವಟಿಕೆ, ಯೋಗ, ಧ್ಯಾನ ಮುಂತಾದವುಗಳಿಂದ ಆರೋಗ್ಯ ಹೆಚ್ಚಿಸಿಕೊಳ್ಳುವತ್ತ ಚಿಂತನೆ ಮಾಡಿ, ಅಲಕ್ಷ್ಯತೆ ನಿಮ್ಮನ್ನು ಅನಾರೋಗ್ಯಕ್ಕೆ ತಳ್ಳುತ್ತದೆ ಎಂದು ಸಾರ್ವಜನಿಕರಿಗೆ ತಹಶೀಲ್ದಾರರು ಮನವಿ ಮಾಡಿದರು.