ಎನ್ಹೆಚ್ಎಂ ಗುತ್ತಿಗೆ ನೌಕರರ ಮುಷ್ಕರ ಆರಂಭ
ದಾವಣಗೆರೆ, ಜು.28- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ, ಶುಶ್ರೂಷಕಿಯರ, ಪ್ರಯೋಗ ಶಾಲ ತಂತ್ರಜ್ಞರ, ನೇತ್ರ ಅಧಿಕಾರಿಗಳು ಮತ್ತು ಫಾರ್ಮಾಸಿಸ್ಟ್ಗಳು ನಗರದಲ್ಲಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ್ದಾರೆ.
ಸಿಐಟಿಯು ಸಂಘಟನೆಯ ಎನ್ಹೆಚ್ಎಂ ಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಎದುರು ಬೆಳಗ್ಗೆಯಿಂದ ಮುಷ್ಕರ ಹೂಡಿರುವ ಪ್ರತಿಭಟನಾಕಾರರು ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಸುವಂತೆ ಸಂಬಂಧಪಟ್ಟವರಿಗೆ ಹಲ ವಾರು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ನೌಕರರ ನೇಮಕಾತಿ ನಡೆಯುತ್ತಿದ್ದು, ಹೊಸದಾಗಿ ನೇಮಕವಾಗುತ್ತಿರುವ ಶುಶ್ರೂಷಕಿಯರಿಗೆ 25 ಸಾವಿರ, ಪ್ರಯೋಗಶಾಲೆ ತಂತ್ರಜ್ಞರಿಗೆ 20 ಸಾವಿರ, ಫಾರ್ಮಾಸಿಸ್ಟ್ಗಳಿಗೆ 20 ಸಾವಿರ ವೇತನ ನೀಡಲಾಗುತ್ತಿದೆ. 16 ವರ್ಷಗಳಿಂದ ಕೆಲಸ ಮಾಡುತ್ತಿರುವವರಿಗೆ ಕೇವಲ 12 ಸಾವಿರ ಮಾತ್ರ ನೀಡುತ್ತಿದ್ದಾರೆ. ಕಿರಿಯ ಮಹಿಳಾ ಆರೋಗ್ಯ ಸಹಾಯಕರಿಗೆ ಕೇವಲ 8,800 ಮಾತ್ರ ಹಾಗೂ ಇವರಿಗೆ ಯಾರಿಗೂ ಆರೋಗ್ಯ ವಿಮಾ ಸೌಲಭ್ಯ ಇಲ್ಲವಾಗಿದೆ ಎಂದು ಅಳಲಿಟ್ಟರು.
ಈ ನೌಕರರ ಕೆಲಸ ಖಾಯಂ ಮಾಡಬೇಕು. ಕೆಲಸ ಖಾಯಂ ಮಾಡುವವರೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು. ಎಲ್ಲಾ ನೌಕರರಿಗೆ ಮತ್ತು ಅವರ ಕುಟುಂಬದವರಿಗೆ ಆರೋಗ್ಯ ವಿಮೆ ಕೊಡಬೇಕು. ಎಲ್ಲಾ ಹುದ್ದೆಗಳಿಗೆ ಸ್ಥಾಯಿ ಆದೇಶ ಕೊಡಬೇಕು. ಅಂದರೆ, ಕೆಲಸದ ನಿಯಮಾವಳಿಗಳನ್ನ ನಿರ್ದೇಶಿಸುವ ಮೂಲಕ ನೌಕರರಿಗೆ ಕೆಲಸದ ಒತ್ತಡ ನಿವಾರಿಸುವುದು. ಕೋವಿಡ್ ವಿಶೇಷ ಭತ್ಯೆ ಪ್ರತಿ ತಿಂಗಳಿಗೆ 25 ಸಾವಿರ ನೀಡಬೇಕು. ಕೆಲಸ ಮಾಡುವಾಗ ಮೃತಪಟ್ಟರೆ (ಕೊವೀಡ್ ಅಲ್ಲದೇ) ಅವರ ಕುಟುಂಬಕ್ಕೆ 30 ಲಕ್ಷ ಪರಿಹಾರ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಮುಷ್ಕರದಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಕೆ.ಹೆಚ್. ಆನಂದರಾಜು, ಮುಖಂಡರಾದ ಹುಲಿಗಮ್ಮ, ಶ್ವೇತಾ, ಸುಶೀಲ, ಖಾಜಾಮೈನುದ್ದೀನ್, ಎಂ.ಎನ್. ಪ್ರಶಾಂತ್ ಕುಮಾರ್, ವೈ. ತಿಪ್ಪೇಸ್ವಾಮಿ, ಶಾಹಾನಾಜ್, ಉಮಾಭಾಯಿ, ಲೀಲಾವತಿ, ವಿ. ಶೋಭ, ಟಿ. ಪದ್ಮ, ಸಿ. ಗಣೇಶ್, ಟಿ. ಬಸವರಾಜಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.