ದಾವಣಗೆರೆ, ಅ.30- ಕೋವಿಡ್-19 ವೈರಸ್ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬುದಾಗಿ ನಿಯಮ ರೂಪಿಸಿದ್ದು, ದಾವಣಗೆರೆ ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಈವರೆಗೆ 30218 ಜನರಿಂದ 51.67 ಲಕ್ಷ ರೂ. ದಂಡ ಸಂಗ್ರಹಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು, ಇದೇ ದಿನಾಂಕ 23 ರಿಂದ 29 ರವರೆಗೆ ನಿಯಮ ಉಲ್ಲಂಘಿಸಿದ 741 ಜನರಿಂದ 1.10 ಲಕ್ಷ ರೂ. ದಂಡ ಸಂಗ್ರಹಿಸಿದೆ. ದಸರಾ ಹಬ್ಬದ ಅವಧಿಯಲ್ಲಿ ದಿನಾಂಕ 25 ಮತ್ತು 26 ರ ಎರಡು ದಿನಗಳಲ್ಲಿ ಒಟ್ಟು 181 ಜನರಿಂದ 29,350 ರೂ. ದಂಡ ಸಂಗ್ರಹಿಸಲಾಗಿದೆ ಎಂದು ವಿವರಿಸಿದ್ದಾರೆ.