ಜಗಳೂರು, ಜು.27- ತಾಲ್ಲೂಕಿನಾದ್ಯಂತ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಬೆಳೆದು ನಿಂತ ಬೆಳೆಗಳಿಗೆ ಯೂರಿಯಾ ಗೊಬ್ಬರ ಅವಶ್ಯಕವಾಗಿದೆ. ಆದರೆ, ತಾಲ್ಲೂಕಿನಲ್ಲಿ ಯೂರಿಯಾ ಗೊಬ್ಬರ ಸಿಗದೇ ಪರದಾಡುವಂತಾಗಿದೆ ಎಂದು ಆರೋಪಿಸಿ, ರಾಜ್ಯ ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ವತಿಯಿಂದ ರೈತರು ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಗೊಬ್ಬರದ ಅಂಗಡಿಗಳಲ್ಲಿ ಗೊಬ್ಬರ ದಾಸ್ತಾನು ಇದ್ದರೂ ಸಹ ಕೆಲವರು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ಆದರೂ ಸಹ ಕೃಷಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತ ಮುಖಂಡರು ದೂರಿದರು.
ಮೆಕ್ಕೆಜೋಳ, ಈರುಳ್ಳಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳಿಗೆ ಯೂರಿಯಾ ಗೊಬ್ಬರ ತಕ್ಷಣ ಅವಶ್ಯಕವಾಗಿದ್ದು, ರೈತರು ಯೂರಿಯಾ ಸಿಗದೇ ತೊಂದರೆಗೀಡಾಗಿದ್ದಾರೆ. ಕೆಲ ರೈತರು ಪಕ್ಕದ ತಾಲ್ಲೂಕುಗಳಿಗೆ ತೆರಳಿ ಗೊಬ್ಬರ ತರುವಂತವಾಗಿದೆ. ಇನ್ನೂ ಕೆಲ ರೈತರು ಸ್ಥಳೀಯವಾಗಿಯೇ ದುಪ್ಪಟ್ಟು ಬೆಲೆ ತೆತ್ತು ಗೊಬ್ಬರ ಖರೀದಿಸುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎಂದು ರೈತ ಮುಖಂಡರು ಆರೋಪಿಸಿದರು.
ಕೃಷಿ ಇಲಾಖೆ ಅಧಿಕಾರಿಗಳು ರೈತರು ಅಗತ್ಯಕ್ಕಿಂತ ಹೆಚ್ಚು ಗೊಬ್ಬರ ಬಳಸುತ್ತಿದ್ದಾರೆ ಎಂದು ಹೇಳುತ್ತಿರುವುದು ಖಂಡನೀಯ. ರೈತರಿಗೆ ಅಗತ್ಯವಾದ ಸ್ಟೇ ಗೊಬ್ಬರ ಸಿಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕ ಮಲ್ಲನಹೊಳೆ ಚಿರಂಜೀವಿ, ಜಿಲ್ಲಾ ಕಾರ್ಯದರ್ಶಿ ಸತೀಶ್, ಗೌರವ ಅಧ್ಯಕ್ಷರು ಗಂಗಾಧರಪ್ಪ, ತಾಲ್ಲೂಕು ಕಾರ್ಯದರ್ಶಿ ದೊಣ್ಣೆಹಳ್ಳಿ ಲೋಕೇಶ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಜು, ನಾಗರಾಜ್, ಕೆಂಚಪ್ಪ, ಶರಣಪ್ಪ ಮತ್ತು ರೈತ ಸಂಘದ ಪದಾಧಿಕಾರಿಗಳು, ರೈತ ಮುಖಂಡರು ಭಾಗವಹಿಸಿದ್ದರು.