ಎ.ಪಿ.ಜೆ.ಅಬ್ದುಲ್ ಕಲಾಂ, ಧರ್ಮಸಿಂಗ್ ಸ್ಮರಣೆ
ದಾವಣಗೆರೆ, ಜು.27- ಕಾರ್ಗಿಲ್ ವಿಜಯ ದಿವಸದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಯಿತು.
ಇದೇ ವೇಳೆ ಕಳೆದ 5 ವರ್ಷಗಳ ಹಿಂದೆ ಅಗಲಿದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಮತ್ತು ಕಳೆದ 3 ವರ್ಷಗಳ ಹಿಂದೆ ಅಗಲಿದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರುಗಳು ದೇಶಕ್ಕೆ, ನಾಡಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಇಡೀ ದೇಶ ಇಂದು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸುತ್ತಿದೆ. ದೇಶಕ್ಕಾಗಿ ಹುತಾತ್ಮ ರಾದ ಎಲ್ಲಾ ಭಾರತೀಯ ಸೈನಿಕರಿಗೂ ಇಂದು ವಿಶೇಷ ವಾಗಿ ನಮ್ಮ ಗೌರವ ನಮನಗಳನ್ನು ಸಲ್ಲಿಸೋಣ. ಭಾರ ತೀಯ ಸೇನಾ ಪಡೆಗಳ ವೀರ ಯೋಧರಿಗೆ ಮತ್ತು ಅವರ ಕುಟುಂಬದವರಿಗೆ ಬೆಂಬಲ ಹಾಗೂ ಹೆಮ್ಮೆಯ ಅಭಿನಂದ ನೆಗಳನ್ನು ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಮಾತನಾಡಿ, ದೇಶದ ಎಲ್ಲಾ ವರ್ಗಗಳನ್ನು ರಕ್ಷಿಸುತ್ತಿರುವ ಸೈನಿಕರ ಪ್ರಾಣ ತ್ಯಾಗದಿಂದ ನಾವು ಇಂದು ಜೀವಿಸುತ್ತಿದ್ದೇವೆ. ಆದರೆ, ಕೆಲವರು ಸೈನಿಕರ ಪ್ರಾಣ ಬಲಿದಾನವನ್ನೇ ಬಂಡವಾಳವಾಗಿಸಿಕೊಂಡು ರಾಜಕೀಯ ಮಾಡುವ ಮೂಲಕ ಸೈನಿಕರ ತ್ಯಾಗವನ್ನು ಅಪಮಾನ ಮಾಡುತ್ತಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್ ಮಾತನಾಡಿ, ಈ ಕಾರ್ಗಿಲ್ ವಿಜಯ ದಿವಸದಂದು ದೇಶಕ್ಕಾಗಿ ಹುತಾತ್ಮರಾದ ಎಲ್ಲಾ ಭಾರತೀಯ ಸೈನಿಕರಿಗೂ ನಮ್ಮ ಗೌರವ ನಮನಗಳನ್ನು ಸಲ್ಲಿಸೋಣ. ಭಾರತದ ಏಕತೆ, ಸಾರ್ವಭೌಮತೆಗಳನ್ನು ಸಂಭ್ರಮಿಸುವ ಜೊತೆಗೆ ಭಾರತೀಯ ಸೇನಾಪಡೆಗಳ ವೀರ ಯೋಧರಿಗೆ ಮತ್ತು ಅವರ ಕುಟುಂಬದವರಿಗೆ ಬೆಂಬಲ ಹಾಗೂ ಹೆಮ್ಮೆಯ ಅಭಿನಂದನೆಗಳನ್ನು ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಅನಿತಾಬಾಯಿ ಮಾಲತೇಶ್ ಮಾತನಾಡಿ, ಹುತಾತ್ಮರಾದ ಎಲ್ಲಾ ವೀರ ಯೋಧರಿಗೆ ಸಲಾಂ ಹೇಳೋಣ. ಅವರ ತ್ಯಾಗ ಬಲಿದಾನಗಳನ್ನು ಸ್ಮರಿಸೋಣ. ನಮ್ಮ ವೀರ ಯೋಧರು ದಿಟ್ಟ ಹೋರಾಟದ ಮೂಲಕ ಅತಿಕ್ರಮಣ ಕಾರರ ಸದ್ದಡಗಿಸಿ, ದಿಗ್ವಿಜಯ ಸಾಧಿಸಿದ ದಿನವಿದು ಎಂದರು.
ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಶ್ರೀಮತಿ ಆಶಾರಾಣಿ ಮುರುಳಿ ಮಾತನಾಡಿ, ಕಾರ್ಗಿಲ್ ವಿಜಯ ದಿವಸ ಶಾಂತಿಯನ್ನು ಕದಡಲು ಪ್ರಯತ್ನಿಸಿದವರಿಗೆ ಆಪರೇಷನ್ ವಿಜಯ್ ಮೂಲಕ ದಿಟ್ಟ ಉತ್ತರ ನೀಡಿದ ನಮ್ಮ ವೀರ ಯೋಧರನ್ನು ನೆನಪಿಸಿಕೊಳ್ಳೋಣ ಎಂದರು.
ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿ ಭಾರತ ಮಾತೆಗೆ ವಿಜಯಮಾಲೆ ತೊಡಿಸಿದ ವೀರ ಯೋಧರಿಗೆ ಕೋಟಿ ಕೋಟಿ ನಮನಗಳು ಎಂದರು.
ಎನ್‌ಎಸ್‌ಯುಐನ ಮುಜಾಹಿದ್ ಮಾತನಾಡಿ, ಭಾರತೀಯ ವೀರ ಪುತ್ರರು ಕೆಚ್ಚೆದೆಯಿಂದ ಹೋರಾಡಿ, ಪಾಕಿಸ್ತಾನವನ್ನು ಬಗ್ಗು ಬಡೆದು ಕಾರ್ಗಿಲ್‌ನಲ್ಲಿ ವಿಜಯ ಪತಾಕೆಯನ್ನು ಹಾರಿಸಿದ ಅವಿಸ್ಮರಣೀಯ ದಿನ. ಭಾರತಾಂಬೆಯ ರಕ್ಷಣೆಗಾಗಿ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಶೌರ್ಯ, ಸಾಹಸ, ತ್ಯಾಗ, ಬಲಿದಾನ ಎಂದಿಗೂ ಅಜರಾಮರ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಶ್ರೀಮತಿ ಸುಷ್ಮಾ ಪಾಟೀಲ್, ಶ್ರೀಮತಿ ಗೀತಾ, ಅಲೆಕ್ಸಾಂಡರ್, ಭಾಸ್ಕರ್ ಬನಿಯನ್, ಹರೀಶ್, ಯುವರಾಜ್, ಮೇಘರಾಜ್ ಮತ್ತಿತರರಿದ್ದರು.