ದಾವಣಗೆರೆ, ಜು. 27- ಜೀವ ಚೈತನ್ಯ ದೇಹವೆಂಬ ರಥದ ಆಯಸ್ಸು ಹೆಚ್ಚಿಸಲು, ಸಾಂಪ್ರದಾಯಿಕ ರಥೋತ್ಸವ ವನ್ನು ರದ್ದುಗೊಳಿಸಿದೆ. ಪ್ರಸಾದ ಕಾಯವ ಕೆಡಿಸಲಾಗದು ಎಂಬ ಶರಣ ವಾಣಿಯಂತೆ ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ಎಚ್ಚರಿಕೆಯ ನಡೆಯನ್ನು ಪಾಲಿಸಿ ಮುಂದಿನ ನೂರಾರು ರಥೋತ್ಸವ ಕಣ್ತುಂಬಿ ಕೊಳ್ಳಲು ಸಾಂಕೇತಿಕವಾಗಿ ಕಿರು ರಥೋತ್ಸವ ಆಚರಿಸಲಾಗಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ವತಿಯಿಂದ ಇಂದು ಜರುಗಿದ ಸಿದ್ಧರಾಮೇಶ್ವರ ಕಿರು ರಥೋತ್ಸವದ ನೇತೃತ್ವ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಬದುಕಿನ ಪರಿವರ್ತನೆಗೆ ಸಿದ್ದರಾಮರ ಜೀವನ ದರ್ಪಣವಿದ್ದಂತೆ. ಮೌಢ್ಯ ಸಂಪ್ರದಾಯಗಳಿಂದ ಮೌಲ್ಯ ಸಂಪ್ರದಾಯಗಳಿಗೆ ನಾಂದಿ ಹಾಡಿದವರು. ಜಲಕ್ರಾಂತಿ ಮೂಲಕ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದವರು ಸಿದ್ಧರಾಮೇಶ್ವರರು ಎಂದು ವಿಶ್ಲೇಷಿಸಿದರು.
ಸಿದ್ದರಾಮರ ವಚನಗಳಲ್ಲಿ ಸಮಾಜ ವ್ಯವಸ್ಥೆಯ ಗೊಡ್ಡುತನವನ್ನು, ಹುಸಿ ನಂಬಿಕೆಗಳನ್ನು, ಹೇಯ ಆಚರಣೆಗಳನ್ನು, ಶತಮಾನಗಳ ಭಯ-ಭ್ರಮೆಗಳನ್ನು ಬಯಲು ಮಾಡಿವೆ. ಸಮಾಜದ ವಿಮರ್ಶೆಗೆ ಸಂಬಂಧಿಸಿದ ವಚನಗಳಲ್ಲಿ ಎರಡು ರೀತಿಯ ವೈಶಿಷ್ಟ್ಯತೆ ಇದೆ. ಒಂದು ಮೌಢ್ಯ ಸಂಪ್ರದಾಯಗಳನ್ನು ತಿರಸ್ಕರಿಸಿದರೆ, ಮತ್ತೊಂದು ಬದುಕಿನ ಸತ್ಯದರ್ಶನ ಮಾಡಿಕೊಡುತ್ತದೆ. ಹಳೆಯದನ್ನೂ, ದುರಾಚರಣೆಯನ್ನೂ ತಿರಸ್ಕರಿಸುತ್ತಲೇ, ಹೊಸದಕ್ಕೆ-ವಾಸ್ತವ ಬದುಕಿಗೆ ಬೆಲೆ ಕಟ್ಟಿಕೊಡುವುದರಿಂದ ವಚನಗಳು ಇಂದಿಗೂ ಪ್ರಸ್ತುತವಾಗುತ್ತವೆ.
ಸಮಾಜ ವ್ಯವಸ್ಥೆಯಲ್ಲಿ ಬೇರೂ ರಿದ ಮೌಢ್ಯತೆ ಅಂಧಾನುಕರಣೆ ಗಳೆಲ್ಲವನ್ನೂ ಸ್ವಾರ್ಥಕ್ಕಾಗಿ ಉಪಯೋ ಗಿಸಿಕೊಂಡ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಸೋಗನ್ನೂ ವಚನಗಳು ಬಯಲು ಮಾಡುತ್ತಾ ವಾಸ್ತವ ಬದುಕಿನ ಸತ್ಯದರ್ಶನವನ್ನೂ ತೋರಿಸಿ ರುವುದರಿಂದ ವಚನ ಸಾಹಿತ್ಯದ ಅನಿವಾರ್ಯತೆಯ ಅರಿವೂ ಮೂಡುತ್ತದೆ.
ಸಿದ್ಧರಾಮ ವಿಡಂಬಿಸುವ ಜಾತಿ ವ್ಯವಸ್ಥೆ, ಕೈಲಾಸದ ಕಲ್ಪನೆ, ಧರ್ಮ ದೇವರುಗಳ ಹೆಸರಿನಲ್ಲಿ ನಡೆಯುವ ಅನೇಕ ಹೇಯಾಚರಣೆಗಳು ಇಂದಿಗೂ ನಡೆಯುತ್ತಲೇ ಇವೆ. ಹೀಗಾಗಿ ಈ ವಚನಗಳು ಹನ್ನೆರಡನೇ ಶತಮಾನದಲ್ಲಿ ರಚಿತವಾದರೂ ಕೂಡ ಇಂದಿನ ಸಮಾಜ ವ್ಯವಸ್ಥೆಯ ಬದುಕಿಗೂ ಪ್ರಸ್ತುತವಾಗಿವೆ. ಅಂತೆಯೇ ಸಿದ್ಧರಾಮ, ಇತರೆ ವಚನಕಾರರೆಲ್ಲಾ ಇಂದಿಗೂ ಅನುಕರಣೆಗೆ ಯೋಗ್ಯರಾಗುತ್ತಾರೆ ಎಂದು ತಿಳಿಸಿದರು.
ವಿರಕ್ತ ಮಠದ ಶ್ರೀ ಬಸವ ಪ್ರಭು ಶ್ರೀಗಳು ಮಾತನಾಡಿ, ನಾಡಿನಲ್ಲಿಯೇ ಶಿವಯೋಗಿ ಸಿದ್ದರಾಮೇಶ್ವರರ ಹೆಸರಿನಲ್ಲಿ ಏಕೈಕ ರಥೋತ್ಸವ ನಡೆಯುವ ಸ್ಥಳ ದಾವಣಗೆರೆ ಎಂದು ಪ್ರಸಿದ್ಧಿಯನ್ನು ಪಡೆದು ಕಳೆದ 58 ವರ್ಷಗಳಿಂದಲೂ ಆಚರಿಸಲಾಗುತ್ತದೆ. ಆದರೆ, ಈಗ ಕೊರೊನಾ ಸಮಯದಲ್ಲಿ ನಾಡಿನ ಜನರ ಆರೋಗ್ಯ ಮುಖ್ಯವೆಂದು ಅರಿತು ಮಹಾರಥೋತ್ಸವವನ್ನು ರದ್ದು ಮಾಡಿ ರಥೋತ್ಸವವನ್ನು ಅತ್ಯಂತ ಸರಳವಾಗಿ ಸಂಕ್ಷಿಪ್ತವಾಗಿ ಆಚರಿಸುವ ಮೂಲಕ ಶ್ರೀ ಜಗದ್ಗುರು ಇಮ್ಮಡಿ ಸಿದ್ದರಾಮ ಮಹಾಸ್ವಾಮಿಗಳು ಜನಮುಖಿ ಗುರುಗಳಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊರೊನಾ ಸಂದರ್ಭದಲ್ಲಿ ಶ್ರೀಗಳು ಒಂದು ತಿಂಗಳ ಕಾಲ ನಿತ್ಯವೂ ಸರ್ವ ಜನಾಂಗದ ಸಾವಿರಾರು ಜನರಿಗೆ ದಿನಸಿ ಕಿಟ್ ಗಳನ್ನು ಹಂಚಿ ಜನರ ಕಷ್ಟಕ್ಕೆ ಸ್ಪಂದಿಸಿ ದೊಡ್ಡಗುಣದ ಸ್ವಾಮೀಜಿಯಾಗಿದ್ದಾರೆ. ಶಿವಯೋಗಿ ಸಿದ್ದರಾಮೇಶ್ವರರು ನೀಡಿದ ತತ್ವಗಳು ಒಂದು ಜನಾಂಗಕ್ಕೆ ಸೀಮಿತವಲ್ಲ, ಇಡೀ ಮಾನವಕುಲಕ್ಕೆ ಬೇಕಾಗಿವೆ. ಸಿದ್ದರಾಮೇಶ್ವರರು ಒಬ್ಬ ಮಹಾನ್ ಶಿವಯೋಗಿಗಳು. ಸೊಲ್ಲಾಪುರದಲ್ಲಿ ಜನರಿಗೆ ಬೃಹತ್ ಕೆರೆಗಳನ್ನು ಕಟ್ಟಿಸಿ ಜನಸೇವೆ ಮಾಡಿದ್ದಾರೆ. ಹಸಿದು ಬಂದ ಜನರಿಗೆ ಅನ್ನ ದಾಸೋಹ ಮಾಡಿದ್ದಾರೆ. ಅವರನ್ನು ನಿತ್ಯವೂ ಸ್ಮರಿಸಿದರೆ ಬದುಕು ಪಾವನವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಕಾಂಗ್ರೆಸ್ ಮುಖಂಡ ದಿನೇಶ್ ಶೆಟ್ಟಿ, ಭೋವಿ ಸಮಾಜದ ಕಾರ್ಯಾಧ್ಯಕ್ಷ ಹೆಚ್. ಜಯಣ್ಣ, ಮುಖಂಡರುಗಳಾದ ವಿ. ಗೋಪಾಲ, ಮೂರ್ತಿ, ಮೇಸ್ತ್ರಿ ನಾರಾಯಣ, ಶ್ರೀನಿವಾಸ, ಅಭಿಯಂತರ ವೆಂಕಟೇಶ್, ಹೆಚ್ ಚಂದ್ರಪ್ಪ, ಹೆಚ್. ಚಾಮರಾಜ್, ಬಿ.ಟಿ.ರಾಜು, ಶಶಿ ಇನ್ನಿತರರು ಉಪಸ್ಥಿತರಿದ್ದರು.