ಭೂ ಸುಧಾರಣಾ ಕಾಯ್ದೆ ತಿದ್ದುಪಡಿ : ಆಗ್ರಹ

ಹರಪನಹಳ್ಳಿ, ಜು.25- ರಾಜ್ಯ ಸರ್ಕಾರ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿರುವುದು ಆತಂಕಕಾರಿ ವಿಷಯವಾಗಿದ್ದು, ಇದು ರೈತ ಮತ್ತು ಜನ ವಿರೋಧಿ ನೀತಿಯಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯ ದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಆರೋಪಿಸಿದ್ದಾರೆ.

ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಹೆಸರಿನಲ್ಲಿ ಕಾಯ್ದೆಯ ಆತ್ಮವನ್ನೇ ಕೊಲ್ಲಲು ಹೊರಟಿರುವ ತೀರ್ಮಾನವನ್ನು ತಕ್ಷಣವೇ ಕೈ ಬಿಟ್ಟು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಹೊರಡಿಸಿರುವ ಸುಗ್ರೀವಾಜ್ಞೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಇಂತಹ ಮಹತ್ವದ ತೀರ್ಮಾನವನ್ನು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಯಾವುದೇ ಜನಾಭಿಪ್ರಾಯ ಪಡೆಯದೇ ಚುನಾಯಿತ ವಿಧಾನಸಭೆ ಯಲ್ಲಿ ಚರ್ಚಿಸದೆ, ತರಾತುರಿಯಲ್ಲಿ  ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ಮುಂದಾಗುತ್ತಿರುವುದು ಅಪ್ರಜಾತಾಂತ್ರಿಕ ಕ್ರಮವಾಗಿದೆ ಎಂದು ಖಂಡಿಸಿದ್ದಾರೆ.

ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ, ರೈತರಿಗೆ ವಿದ್ಯುತ್ ಸಬ್ಸಿಡಿ ಕಡಿತ ಮಾಡುವ ಕೇಂದ್ರದ  ವಿದ್ಯುಚ್ಛಕ್ತಿ ಕಾಯ್ದೆಯ ತಿದ್ದುಪಡಿ, ಬೀಜ ಕಾಯ್ದೆ, ಗುತ್ತಿಗೆ ಕೃಷಿ ಮುಂತಾದ ಕಾಯ್ದೆಗಳು ಕೃಷಿ ಕ್ಷೇತ್ರವನ್ನು ಬಡ ರೈತರಿಂದ ಕಸಿದುಕೊಂಡು ದೊಡ್ಡ ಕಾರ್ಪೊರೇಟ್ ಬಂಡವಾಳಶಾಹಿಗಳಿಗೆ ಹಸ್ತಾಂತರ ಮಾಡುವ ಹುನ್ನಾರ ಎಂಬುದು ಸ್ಪಷ್ಟವಾಗುತ್ತಿದೆ. ಇದು ದೇಶದ ರೈತರ ಮೇಲೆ ಮಾತ್ರವಲ್ಲದೆ ಆಹಾರ ಮತ್ತು ಕೃಷಿ ಉತ್ಪನ್ನಗಳನ್ನು ಬಳಸುವ ಎಲ್ಲರ ಮೇಲೂ ಗಂಭೀರ ಪರಿಣಾಮ ಬೀರಲಿದೆ. ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

error: Content is protected !!