ಟಾಸ್ಕ್‌ಫೋರ್ಸ್ ಸಮಿತಿಯಿಂದ ಸೋಂಕು ನಿಯಂತ್ರಣ ಸಾಧ್ಯ

ಮಲೇಬೆನ್ನೂರು : ಟಾಸ್ಕ್‌ಫೋರ್ಸ್ ಸಭೆಯಲ್ಲಿ ತಹಶೀಲ್ದಾರ್ ರಾಮಚಂದ್ರಪ್ಪ ಮನವಿ

ಮಲೇಬೆನ್ನೂರು, ಜು. 25 – ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರದ ನಿರ್ದೇಶನದಂತೆ ರಚಿಸಿರುವ ವಾರ್ಡ್ ಮತ್ತು ಬೂತ್ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿಗಳು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮನವಿ ಮಾಡಿದ್ದಾರೆ.

ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಹಾಗೂ ಕಂಟೈನ್‌ಮೆಂಟ್ ಜೋನ್‌ಗಳ ನಿರ್ವಹಣೆ ಕುರಿತು ಚರ್ಚಿಸಲು ಮೊನ್ನೆ ಕರೆದಿದ್ದ ವಿವಿಧ ಅಧಿಕಾರಿಗಳ ಮತ್ತು ಟಾಸ್ಕ್‌ಫೋರ್ಸ್ ಸಮಿತಿ ಅಧ್ಯಕ್ಷರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋವಿಡ್ ವಿಚಾರದಲ್ಲಿ ಆರೋಗ್ಯ ಸೇವೆಯಲ್ಲಿ ಸೌಲಭ್ಯಗಳು ಹೆಚ್ಚಾಗಿದ್ದು, ಇನ್ನು ಮುಂದೆ ಕೊರೊನಾ ಟೆಸ್ಟ್ ವರದಿ ಬೇಗ ಬರಲಿದ್ದು, 60 ವರ್ಷ ಮೇಲ್ಪಟ್ಟವರನ್ನು ಕಡ್ಡಾಯವಾಗಿ ಟೆಸ್ಟ್‌ ಮಾಡಿಸಿ ಎಂದು ರಾಮಚಂದ್ರಪ್ಪ ಅವರು ಟಾಸ್ಕ್‌ಫೋರ್ಸ್ ಸಮಿತಿಗೆ ಹೇಳಿದರು.

ಜಿಲ್ಲಾ ಮಲೇರಿಯಾ ಅಧಿಕಾರಿಗಳೂ ಆದ ಹರಿಹರ ತಾಲ್ಲೂಕು ಕೋವಿಡ್ ನೋಡಲ್ ಅಧಿಕಾರಿ ನಟರಾಜ್ ಮಾತನಾಡಿ, ಕೊರೊನಾ ಟೆಸ್ಟ್ ಮಾಡಿಸಿದ 10 ದಿನಗಳ ನಂತರ ಅವರಿಗೆ ಯಾವುದೇ ರೋಗ ಲಕ್ಷಣ ಕಂಡು ಬರದಿದ್ದರೆ ಅವರಿಗೆ ಮನೆಯಲ್ಲಿ ಪ್ರತ್ಯೇಕವಾಗಿರಲು ವ್ಯವಸ್ಥೆಯಿ ದ್ದರೆ ಅಂತಹವರನ್ನು ಮನೆಯಲ್ಲಿಟ್ಟು ಔಷಧೋಪಚಾರ ಮಾಡಲಾಗುವುದು.

ಮುಂದಿನ ದಿನಗಳಲ್ಲಿ ನಾವೆಲ್ಲರೂ ಈ ಸೋಂಕಿನ ಜೊತೆ ಜೀವನ ಮಾಡುವುದು ಅನಿವಾರ್ಯವಾಗಿದ್ದು, ಕೊರೊನಾ ವಿರುದ್ಧ ಹೋರಾಡಲು ನಾವು ಇನ್ನಷ್ಟು ಸಿದ್ಧರಾಗ ಬೇಕೆಂದು ಜಗದೀಶ್ ಕರೆ ನೀಡಿದರು.

ಟಿಹೆಚ್ಓ ಡಾ. ಚಂದ್ರಮೋಹನ್ ಮಾತ ನಾಡಿ, ಕಣ್ಣು, ಮೂಗು, ಬಾಯಿ ಯಿಂದ ಸೋಂಕು ದೇಹ ಪ್ರವೇಶ ಮಾಡುವು ದರಿಂದ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡರೆ ಸೋಂಕಿತ ವ್ಯಕ್ತಿ ಜೊತೆ ಇದ್ದರೂ ಕೊರೊನಾ ಬರುವುದಿಲ್ಲ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ಸೋಂಕಿತ ವ್ಯಕ್ತಿಯ ಜೊತೆಯಿದ್ದರೆ ಅರ್ಧಗಂಟೆಯೊಳಗೆ ಸೋಂಕು ತಗಲುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್ ಮಾತನಾಡಿ, ಪಟ್ಟಣದಲ್ಲಿ ಕೊರೊನಾ ನಿಯಂತ್ರಣಕ್ಕೆ ಜನರ ಸಹಭಾ ಗಿತ್ವ ಬಹಳ ಮುಖ್ಯವಾಗಿದೆ ಎಂದರು. 

ಉಪ ತಹಶೀಲ್ದಾರ್ ಆರ್. ರವಿ ಮಾತ ನಾಡಿ, ಕಂಟೈನ್‌ಮೆಂಟ್ ಜೋನ್‌ಗಳ ಮೇಲೆ ಹೆಚ್ಚಿನ ನಿಗಾವಹಿಸಬೇಕಾಗಿದ್ದು, ವಾರ್ಡ್ ಸದಸ್ಯರ ಸಹಕಾರ ಅಗತ್ಯವಾಗಿದೆ ಎಂದರು.

ಪುರಸಭೆ ಸದಸ್ಯರಾದ ಎ. ಆರೀಫ್ ಅಲಿ, ಯೂಸೂಫ್, ಸುಬ್ಬಿ ರಾಜಪ್ಪ, ಬಿ. ಸುರೇಶ್, ದಾದಾವಲಿ, ಕೆ.ಜಿ. ಲೋಕೇಶ್, ಭೋವಿ ಕುಮಾರ್, ಆದಾಪುರ ವಿಜಯಕುಮಾರ್ ಮತ್ತಿತರರು ಮಾತನಾಡಿ, ಪಟ್ಟಣದಲ್ಲಿ ಸೊಳ್ಳೆ ಹೆಚ್ಚಾಗುತ್ತಿದ್ದು, ಡೆಂಗ್ಯೂ, ಮಲೇರಿಯಾ ಬರದಂತೆ ಮುನ್ನೆಚ್ಚರಿಕೆ ವಹಿಸುವಂತೆ ಆಗ್ರಹಿಸಿದರು.

ಕಂದಾಯ ನಿರೀಕ್ಷಕ ಸಮೀರ್, ಗ್ರಾಮಲೆಕ್ಕಾಧಿಕಾರಿ ಕೊಟ್ರೇಶ್, ಎಎಸ್ಐ ಬಸವರಾಜ್, ಪುರಸಭೆ ಅಧಿಕಾರಿಗಳಾದ ಉಮೇಶ್, ಗುರುಪ್ರಸಾದ್, ನವೀನ್, ಗಣೇಶ್ ಮತ್ತಿತರರು ಹಾಜರಿದ್ದರು.

error: Content is protected !!