ಬಾಗಳಿಯ ಹಿರಿಯ ಕಲಾವಿದ ಷಡಕ್ಷರಪ್ಪಗೆ ರಾಜ್ಯೋತ್ಸವ ಪ್ರಶಸ್ತಿ

ಹರಪನಹಳ್ಳಿ, ಅ.28- ಕಳೆದ 70 ವರ್ಷಗಳಿಂದ ರಂಗಭೂಮಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ತಾಲ್ಲೂಕಿನ ಬಾಗಳಿ ಗ್ರಾಮದ ಷಡಕ್ಷರಪ್ಪ ಹೊಸಮನಿ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. 

91 ವರ್ಷ ವಯಸ್ಸಿನ ಷಡಕ್ಷರಪ್ಪ ಅವರ ತಾತ ಪ್ರತಿಭಾವಂತ ಕಲಾವಿದರು. ಅವರ ತಂದೆ ನಾಗೇಂದ್ರಪ್ಪನವರೂ ಸಹ ಹಾರ್ಮೋನಿಯಂ ಮಾಸ್ಟರ್. ಹಾಗಾಗಿ ಷಡಕ್ಷರಪ್ಪನವರಿಗೆ ಕಲೆ ರಕ್ತಗತವಾಗಿ ಬಂದಿದೆ. 

ದಾನಸೂರ ಕರ್ಣ, ಸತ್ಯವಾನ್ ಸಾವಿತ್ರಿ, ಇಂದ್ರಜಿತ್ ಕಾಳಗ, ಸೌಭಾಗ್ಯ ಲಕ್ಷ್ಮಿ, ಜೀವನ ಯಾತ್ರೆ, ರಕ್ತ ರಾತ್ರಿ, ದಸರಾ ಬಂಗಾರ ಹೀಗೆ ಸಾಮಾಜಿಕ, ಪೌರಾಣಿಕ ನಾಟಕಗಳಲ್ಲಿ ವಿವಿಧ ಪಾತ್ರಗಳನ್ನು ಮಾಡುವಲ್ಲಿ ಷಡಕ್ಷರಪ್ಪ ಅವರು ಸಿದ್ಧ ಹಸ್ತರು. 

ಗೋಣಿಬಸವೇಶ್ವರ ನಾಟಕದಲ್ಲಿ ಗೋಣಿಬಸಪ್ಪನ ಪಾತ್ರದಲ್ಲಿ ಹೆಸರು ವಾಸಿ. ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ತೆರಳಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಇದೀಗ ಇವರ ಪುತ್ರ ನಾಗರಾಜ ಸಹ ತಂದೆಯ ಹಾದಿಯಲ್ಲಿ ಸಾಗಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ಷಡಕ್ಷರಪ್ಪನವರು ಬಾಗಳಿಯ ವಿಶ್ವ ಕಲಾ ರೈತ ನಾಟ್ಯ ಸಂಘ, ಕನಕೇಶ್ವರಿ ಕಲಾ ಸಂಘಗಳ ಮೂಲಕ ತಮ್ಮ ಸೇವೆಯನ್ನು ನೀಡಿದ್ದಾರೆ. ಇವರಿಗೆ ರಾಜ್ಯ ಸರ್ಕಾರದಿಂದ 2 ಸಾವಿರ ರೂ.ಗಳು ಮಾಸಾಶನ ಬರುತ್ತದೆ. 

ಕೇಂದ್ರ ಸರ್ಕಾರದಿಂದ ಕೊಡಮಾಡುತ್ತಿದ್ದ 4 ಸಾವಿರ ರೂಗಳ ಮಾಸಾಶನ ಕಳೆದ ಮೂರು ವರ್ಷಗಳಿಂದ ಸ್ಥಗಿತ ಗೊಂಡಿದೆ. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ಕೊಡುತ್ತಾ ಇಲ್ಲ ಎಂಬುದು ಇವರ ಅಳಲಾಗಿದೆ.

ಷಡಕ್ಷರಪ್ಪ ಅವರಿಗೆ ಈಗಾಗಲೇ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಸಂಘ- ಸಂಸ್ಥೆಗಳ ವಿವಿಧ ಪ್ರಶಸ್ತಿಗಳು ಬಂದಿವೆ. ಇದೀಗ ಇಳಿವಯಸ್ಸಿನಲ್ಲಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಈ ಭಾಗದ ರಂಗ ಕಲಾವಿದರಿಗೆ ಸಂತಸ ತಂದಿದೆ.

 ಈ ಕುರಿತು  ಪ್ರತಿಕ್ರಿಯೆ  ನೀಡಿದ  ಷಡಕ್ಷರಪ್ಪ  ಹೊಸಮನಿ ಅವರು ಮಾತನಾಡಿ, ಹೊಸದಾಗಿ ಬರುವ ಕಲಾವಿದರು ಶ್ರದ್ಧೆ ಹಾಗೂ ಭಕ್ತಿಯಿಂದ ಕಲೆಯನ್ನು ರೂಢಿಸಿಕೊಳ್ಳಬೇಕು. ರಂಗಭೂಮಿ ಉಳಿದು ಬೆಳೆಯಬೇಕಾದರೆ ಸಂಘ-ಸಂಸ್ಥೆಗಳು, ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

error: Content is protected !!