ಹರಿಹರ, ಜು.26- ಕೊರೊನಾ ಹರಡುವಿಕೆ ಪ್ರಮಾಣ ತಡೆಗಟ್ಟಲು ಸರ್ಕಾರ ಘೋಷಿಸಿರುವ ಭಾನುವಾರದ ಲಾಕ್ ಡೌನ್‌ಗೆ ನಗರದ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ಥಗಿತಗೊಳಿಸಿ ಬಂದ್ ಗೆ ಬೆಂಬಲ ನೀಡಿದರು.
ತರಕಾರಿ, ದಿನಸಿ ಪದಾರ್ಥ, ಹಾರ್ಡ್‌ವೇರ್, ಹೂವು, ಹಣ್ಣು, ಬಟ್ಟೆ, ಎಲೆಕ್ಟ್ರಾನಿಕ್, ಎಲೆಕ್ಟ್ರಿಕ್, ಗೊಬ್ಬರ, ಹೋಟೆಲ್, ಬೇಕರಿ, ಬಾರ್ ಅಂಡ್ ರೆಸ್ಟೋರೆಂಟ್, ಫೋಟೋ ಸ್ಟುಡಿಯೋ, ಗ್ಯಾರೇಜ್, ಟೈರ್ ಆಂಡ್ ಟ್ಯೂಬ್, ಮೊಬೈಲ್, ಸೇರಿದಂತೆ ಹಲವಾರು ಅಂಗಡಿಗಳು ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದವು.
ಜನನಿಬಿಡ ಪ್ರದೇಶವಾದ ತರಕಾರಿ ಮಾರುಕಟ್ಟೆ, ಮುಖ್ಯರಸ್ತೆ, ರಾಣಿ ಚೆನ್ನಮ್ಮ ವೃತ್ತ, ದೇವಸ್ಥಾನ ರಸ್ತೆ, ಹೈಸ್ಕೂಲ್ ಬಡಾವಣೆ, ಹರಪನಹಳ್ಳಿ ರಸ್ತೆ, ಹಳೆ ಪಿ.ಬಿ. ರಸ್ತೆ, ಶೋಭಾ ಟಾಕೀಸ್ ರಸ್ತೆ ಸೇರಿದಂತೆ ಹಲವಾರು ರಸ್ತೆಯಲ್ಲಿ ಸಾರ್ವಜನಿಕರ ಓಡಾಟವಿಲ್ಲದೆ ಬಿಕೋ ಎನ್ನುತ್ತಿದ್ದವು. ಅಗತ್ಯ ವಸ್ತುಗಳಾದ ಹಾಲು, ಔಷಧಿ, ಆಸ್ಪತ್ರೆ ಮಾತ್ರ ತೆರೆಯಲ್ಪಟ್ಟಿದ್ದವು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ, ಪೌರಾಯುಕ್ತರಾದ ಶ್ರೀಮತಿ ಎಸ್. ಲಕ್ಷ್ಮಿ, ಸಿಪಿಐ ಎಸ್. ಶಿವಪ್ರಸಾದ್, ಪಿಎಸ್ಐ ಡಿ. ರವಿಕುಮಾರ್, ಎಸ್. ಶೈಲಾಶ್ರೀ ಸೇರಿದಂತೆ ತಾಲ್ಲೂಕು ಆಡಳಿತ ಮತ್ತು ನಗರಸಭೆ ಸಿಬ್ಬಂದಿಗಳು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು.