ಹರಪನಹಳ್ಳಿ, ಜು.26- ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಐ.ಬಿ. ವೃತ್ತದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಎಐಟಿಯುಸಿ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಕೊರೊನಾ ಸಂಕಷ್ಟದಲ್ಲಿ ಜೀವ ಪಣಕ್ಕಿಟ್ಟು ಸೇವೆ ಮಾಡುತ್ತಿ ರುವ ಆಶಾ ಕಾರ್ಯಕರ್ತೆಯರನ್ನು ಸರ್ಕಾರ ನಿರ್ಲಕ್ಷ್ಯ ಮಾಡಿರುವುದು ನೋವಿನ ಸಂಗತಿಯಾ ಗಿದೆ. ವೇತನ ಹೆಚ್ಚಳ, ಬಾಕಿ ಪಾವತಿ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು. ಇಲ್ಲವಾದಲ್ಲಿ ಇದೇ ದಿನಾಂಕ 29 ರಂದು ಜಿಲ್ಲಾ ಕೇಂದ್ರದ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಶ್ರೀ ಎಂ.ಪಿ.ಪ್ರಕಾಶ್ ಸಮಾಜ ಮುಖಿ ಟ್ರಸ್ಟ್ ಅಧ್ಯಕ್ಷರಾದ ಎಂ.ಪಿ.ವೀಣಾ ಮಹಾಂತೇಶ್ ಅವರ ಸೂಚನೆ ಮೇರೆಗೆ ಮುಖಂಡರಾದ ಗುರುಪ್ರಸಾದ್ ಮಾತನಾಡಿ, ಆಶಾ ಕಾರ್ಯಕರ್ತೆಯರು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತೆಯರ ಪರವಾಗಿ ಶ್ರೀ ಎಂ.ಪಿ.ಪ್ರಕಾಶ್ ಸಮಾಜ ಮುಖಿ ಟ್ರಸ್ಟ್ನ ಸಿದ್ದನಗೌಡ್ರು, ದಾದಾಪೀರ್, ಸಚ್ಚಿನ್, ಮನೋಜ್, ಆಶಾ ಕಾರ್ಯಕರ್ತೆಯರಾದ ಗೀತಾ, ಈ.ದುರುಗಮ್ಮ, ಲಲಿತಮ್ಮ, ಎನ್.ಗಾಯತ್ರಿ, ಟಿ.ರೇಣುಕಾ, ಹೆಚ್.ಮಂಜುಳಾ, ಸಂಪಿಬಾಯಿ ಸೇರಿದಂತೆ ಇತರರು ಇದ್ದರು.