15ನೇ ದಿನಕ್ಕೆ `ಆಶಾ’ ಅನಿರ್ದಿಷ್ಟ ಮುಷ್ಕರ

29ರಂದು ಜಿಲ್ಲಾ ಮಟ್ಟದಲ್ಲಿ ಬೃಹತ್ ಹೋರಾಟ

ದಾವಣಗೆರೆ, ಜು.24- ತಮಗೆ ಮಾಸಿಕ 12 ಸಾವಿರ ರೂ. ಗೌರವ ಧನ ಖಾತರಿಪಡಿಸುವುದೂ ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಮುಂದಿ ಟ್ಟುಕೊಂಡು ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆ ಸ್ಥಗಿತಗೊಳಿಸಿ, ಕೈಗೊಂಡಿರುವ ಅನಿರ್ದಿಷ್ಟ ಹೋರಾಟವು ಇಂದಿಗೆ 15  ದಿನಗಳನ್ನು ಪೂರೈಸಿದೆ.

ಹೋರಾಟದ ತೀವ್ರ ಸ್ವರೂಪವಾಗಿ ನಗರದಲ್ಲಿ ಇಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ತಹಶೀಲ್ದಾರ್ ಕಛೇರಿಯ ಮುಂಭಾಗ ಜಮಾಯಿಸಿದ್ದ ಆಶಾ ಕಾರ್ಯಕರ್ತೆಯರು ಪ್ರತಿಭಟಿಸಿ, ನಂತರ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬೇಡಿಕೆಗಳುಳ್ಳ ಮನವಿ ಸಲ್ಲಿಸಿದರು. 

ರಾಜ್ಯ ವ್ಯಾಪಿಯಾಗಿ ಜೂನ್ 30 ರಂದು ಮತ್ತು ಕಳೆದ 15 ದಿನಗಳಿಂದ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಿ, ಜಿಲ್ಲಾಧಿಕಾರಿ ಗಳು ಮತ್ತು ತಹಶೀಲ್ದಾರ್‌ಗಳಿಗೆ ಮತ್ತು ರಾಜ್ಯದ ಹಲವಾರು ಸಚಿವರಿಗೆ ಮತ್ತು ಶಾಸಕರಿಗೆ ಖುದ್ದಾಗಿ ಕ್ಷೇತ್ರಗಳಲ್ಲಿ ಮನವಿ ಸಲ್ಲಿಸಿ, ಸರ್ಕಾರಕ್ಕೆ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಗಿತ್ತು. ಹಾಗೆಯೇ ಕಳೆದ ಜನವರಿ ತಿಂಗಳಿನಿಂದ ಸರ್ಕಾರಕ್ಕೆ ಸಂಘದಿಂದ 10 ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ಬೇಡಿಕೆಗಳ ಕುರಿತು ಕಳೆದ 4 ದಿನಗಳ ಹಿಂದೆ ವೈದ್ಯಕೀಯ ಸಚಿವ ಡಾ. ಸುಧಾಕರ್‍ ಅವರು ಸರ್ಕಾರದಲ್ಲಿ ಚರ್ಚೆ ನಡೆಯುತ್ತಿದ್ದು, 2-3 ದಿನಗಳಲ್ಲಿ ಸರ್ಕಾರದ ಕ್ರಮದ ಬಗ್ಗೆ ತಿಳಿಸುವುದಾಗಿ ಮಾಧ್ಯಮದಲ್ಲಿ ತಿಳಿಸಿದ್ದು, ನಂತರ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಪ್ರತಿಭಟ ನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ದಿನಾಂಕ 29 ರಂದು ರಾಜ್ಯ ವ್ಯಾಪಿ ಕರೆಯ ಮೇರೆಗೆ ಜಿಲ್ಲಾ ಮಟ್ಟದ ಬೃಹತ್ ಹೋರಾಟದ ಮೂಲಕ ಮುಷ್ಕರ ತೀವ್ರಗೊಳಿಸುವುದಾಗಿ ಸಂಘಟನೆಯ ತಾಲ್ಲೂಕು ಅಧ್ಯಕ್ಷೆ ಭಾರತಿ ತಿಳಿಸಿದ್ದಾರೆ.

ಮಂಜುನಾಥ್ ಕೈದಾಳೆ, ಮಂಜುನಾಥ್ ಕುಕ್ಕುವಾಡ, ಕರಿಯಮ್ಮ, ಲಲಿತಮ್ಮ, ಫರ್ವೀನ್ ಬಾನು, ರುಕ್ಕಮ್ಮ, ನಾಗರತ್ನ, ಶೀಲಾ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!