ಮಲೇರಿಯಾ ವಿರೋಧಿ ಮಾಸಾಚರಣೆ’ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ.ಎನ್.ಗಿರೀಶ್
ದಾವವಣಗೆರೆ ಜು.24- ಸ್ವಚ್ಛತೆ, ನಿಯಂತ್ರಣ ನಮ್ಮಿಂದಲೇ ಆರಂಭವಾಗಬೇಕು. ಆಗ ಮಾತ್ರ ಯಾವುದೇ ರೋಗ ನಿಯಂತ್ರಣಕ್ಕೆ ಬರಲು ಸಾಧ್ಯ ಎಂದು ತಹಶೀಲ್ದಾರ್ ಬಿ.ಎನ್.ಗಿರೀಶ್ ಹೇಳಿದರು.
ನಗರದ ತಹಶೀಲ್ದಾರ್ ಕಚೇರಿ ಸಭಾಂ ಗಣದಲ್ಲಿ ಶುಕ್ರವಾರ ‘ಶೂನ್ಯ ಮಲೇರಿಯಾ ನನ್ನಿಂದಲೇ ಪ್ರಾರಂಭ’ ಎಂಬ ಘೋಷ ವಾಕ್ಯದಡಿ ಹಮ್ಮಿಕೊಂಡಿದ್ದ ‘ಮಲೇರಿಯಾ ವಿರೋಧಿ ಮಾಸಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಸರ ಸ್ವಚ್ಛತೆ ಕಾಪಾಡಿಕೊಂಡು ಬರು ವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸ್ವಚ್ಛತೆ ಇಲ್ಲದೇ ಹೋದಲ್ಲಿ ಸೊಳ್ಳೆಗಳ ಉತ್ಪತ್ತಿ ಯಿಂದ ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂದರು.
ಕಚೇರಿಗೆ ಸುಮ್ಮನೆ ಬಂದು ಹೋದರೆ ಕೂಲಿಕಾರರಂತಾಗುತ್ತೇವೆ. ಅದರ ಬದಲಾಗಿ ಸಮಾಜಕ್ಕೆ ಒಳಿತು ಮಾಡುವ ಕೆಲಸ ಮಾಡಬೇಕು. ಆಗ ಮಾತ್ರ ಜನರು ನಮ್ಮನ್ನು ಗುರುತಿಸುತ್ತಾರೆ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಕೊರೊನಾ ಬಗ್ಗೆ ಯಾವುದೇ ಭಯ ಪಡಬೇಡಬೇಕಿಲ್ಲ. ಆದರೆ ಈ ಕುರಿತು ಪ್ರತಿಯೊಬ್ಬರೂ ಎಚ್ಚರಿಕೆ ವಹಿಸುವ ಅವಶ್ಯಕತೆ ಇದ್ದು, ಕೊರೊನಾ ನಿಯಂತ್ರಿಸಲು ಎಲ್ಲರೂ ಸಹಕರಿಸಬೇಕು ಎಂದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ದೇವರಾಜ್, ಮಲೇರಿಯಾ ನಿರ್ಮೂಲನೆಗೆ ಸಂಪೂರ್ಣವಾಗಿ ಎಲ್ಲರೂ ಸೇರಿ ಸಹಭಾಗಿತ್ವದ ಮೂಲಕ ಸಹಕರಿಸಿದಾಗ ಮಾತ್ರ ಸಾಧ್ಯ ಎಂದರು.
ಮಲೇರಿಯಾ ರೋಗಕ್ಕೆ ಕಾರಣವಾಗುವ ವೈರಸ್, ರೋಗ ಹರಡುವ ಸೊಳ್ಳೆ, ರೋಗದ ಲಕ್ಷಣ ಬಗ್ಗೆ ತಿಳಿದುಕೊಳ್ಳಬೇಕು. ನಿಂತ ನೀರಿನ ತಾಣಗಳು ಸೊಳ್ಳೆ ಉತ್ಪತ್ತಿಯ ಕೇಂದ್ರವಾಗಿ ರುತ್ತವೆ. ಆದ್ದರಿಂದ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕೀಟ ಶಾಸ್ತ್ರ ತಜ್ಞ ಸತೀಶ್ ಹೆಚ್. ಮಾಳಗಿ ಮಾತನಾಡಿ, ಮಲೇರಿಯಾ ಪ್ರಕರಣಗಳು ಮೊದಲು ಸಾಕಷ್ಟು ಪ್ರಮಾಣದಲ್ಲಿತ್ತು. ಇತ್ತೀಚಿನ ದಿನಗಳಲ್ಲಿ ಹಲವಾರು ನಿಯಂತ್ರಣ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಕಡಿಮೆಯಾಗಿದೆ ಎಂದರು.
ಮಲೇರಿಯಾ ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆಯಿಂದ ಕಂಡು ಬರುತ್ತದೆ. ಈ ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಈ ರೋಗವನ್ನು ಹರಡುತ್ತದೆ. ಜ್ವರ, ಚಳಿ, ತಲೆನೋವು, ವಾಂತಿ, ಮೈ-ಕೈ ನೋವು ರೋ ಗದ ಲಕ್ಷಣಗಳಾಗಿವೆ. ಯಾವುದೇ ಜ್ವರ ಕಂಡು ಬಂದಲ್ಲಿ ಸಾರ್ವಜನಿಕರು ಹತ್ತಿರದ ಆರೋಗ್ಯ ಸಂಸ್ಥೆಗೆ ಹೋಗಿ ಮಲೇರಿಯಾ ಪರೀಕ್ಷೆ ಮಾಡಿಸಿ, ತ್ವರಿತವಾಗಿ ಚಿಕಿತ್ಸೆ ಪಡೆದು ಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ದಾವಣಗೆರೆ ಜಿಲ್ಲೆ ಮಲೇರಿಯಾ ಮುಕ್ತಕ್ಕೆ ಬಹಳ ಹತ್ತಿರ ಇದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪ್ರಕರಣಗಳು ಸಂಭವಿಸದಂತೆ ಸಾಕಷ್ಟು ಕ್ರಮ ಕೈಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಉಮಾಪತಿ, ವೆಂಕಟಾಚಲ, ಮೀನುಗಾರಿಕೆ ಇಲಾಖೆಯ ಡಾ.ಉಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮಾಜ ಕಲ್ಯಾಣ ಅಧಿಕಾರಿಗಳು, ಮಹಾನಗರಪಾಲಿಕೆ ಆರೋಗ್ಯ ನಿರೀಕ್ಷಕರು, ಕೀಟ ಶಾಸ್ತ್ರಜ್ಞರು ಮತ್ತಿತರೆ ಇಲಾಖಾ ಅಧಿಕಾರಿಗಳು ಹಾಜರಿದ್ದರು.