ಜಿಲ್ಲಾಸ್ಪತ್ರೆ ಹೊರ ಗುತ್ತಿಗೆ ಡಿ ಗ್ರೂಪ್ ನೌಕರರ ಬೇಡಿಕೆ ಈಡೇರಿಸದಿದ್ದರೆ ಧರಣಿ

ದಾವಣಗೆರೆ, ಜು. 22- ಜಿಲ್ಲಾ ಚಿಗಟೇರಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ  250 ಜನ ಡಿ ಗ್ರೂಪ್ ನೌಕರರನ್ನು ನೇರ ನೇಮಕಾತಿ ಮಾಡಿಕೊಳ್ಳುವಂತೆ ಜಿಲ್ಲಾಸ್ಪತ್ರೆಯ ದಿನಗೂಲಿ ನೌಕರರ ಡಿ ಗ್ರೂಪ್ ಸಂಘ ಒತ್ತಾಯಿಸಿದೆ.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಹನುಮಂತಪ್ಪ, ಮಹಾನಗರ ಪಾಲಿಕೆಯಲ್ಲಿ ಈಗಾಗಲೇ ನೌಕರರ ನೇರ ನೇಮಕಾತಿ ನಡೆಸಿದಂತೆ, ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾನ್ ಕ್ಲಿನಿಕಲ್ ಮತ್ತು ಡಿ ಗ್ರೂಪ್ ನೌಕರರನ್ನು ಖಾಯಂಗೊಳಿಸುವಂತೆ ಆಗ್ರಹಿಸಿದರು.

ಕೋವಿಡ್ 19 ರೋಗಿಗಳ ಐಸೋಲೇಷನ್ ವಾರ್ಡ್ ಗಳಲ್ಲಿ ಕಾರ್ಯ ನಿರ್ವಹಿಸಿದ ಖಾಯಂ ನೌಕರ ರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಿದಂತೆ, ಎಲ್ಲಾ  ಡಿ ಗ್ರೂಪ್ ನೌಕರರಿಗೂ ನೀಡಬೇಕು. ಖಾಯಂ ನೌಕರರಂತೆ ನಮಗೂ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿದರು. ಕೊರೊನಾ ರೋಗಿಗಳ ಜೊತೆ ಇದ್ದು, ಕಾರ್ಯ ನಿರ್ವಹಿಸಿದ ನಮಗೆ ಇಲ್ಲಿಯವರೆಗೆ ಆಹಾರದ ಕಿಟ್ ನೀಡಿಲ್ಲ ಎಂದು ಆರೋಪಿಸಿದರು.

ಬೇಡಿಕೆಗಳ ಈಡೇರಿಕೆಗಾಗಿ ಶಾಂತಿಯುತವಾಗಿ ಮುಷ್ಕರ ನಡೆಸಲು  ತಹಶೀಲ್ದಾರ್ ಅವರ ಅನುಮತಿ ಕೇಳಲಾಗಿತ್ತು. ಆದರೆ, ಅವರು ಅನುಮತಿ ನಿರಾಕರಿಸಿದ್ದಾರೆ. ಒಂದು ವಾರದಲ್ಲಿ ಬೇಡಿಕೆಗಳ ಈಡೇರಿಕೆಗೆ ಅಥವಾ ಪ್ರತಿಭಟನೆಗೆ ಅನುಮತಿ ನೀಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸುವುದಾಗಿಯೂ, ಜಿಲ್ಲೆಗೆ ಬರುವ ಜನಪ್ರತಿನಿಧಿಗಳು, ಸಚಿವರುಗಳಿಗೆ ಘೇರಾವ್ ಮಾಡುವುದಾಗಿ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಜಿ.ಹೆಚ್. ಮಾಲತೇಶ್, ಖಜಾಂಚಿ ಹೆಚ್.ತಿಪ್ಪೇಸ್ವಾಮಿ ಇದ್ದರು.

error: Content is protected !!