ಡಾ|| ಶಿವಮೂರ್ತಿ ಮುರುಘಾ ಶರಣರಿಂದ ಫೇಸ್‌ಬುಕ್, ಯುಟ್ಯೂಬ್‌ನಲ್ಲಿ ನೇರ ಪ್ರಸಾರದಲ್ಲಿ ಶಿವಯೋಗದ ಪ್ರಾತ್ಯಕ್ಷಿಕೆ
ಚಿತ್ರದುರ್ಗ,ಜು.20- ನಾವು ಆಧ್ಯಾತ್ಮವನ್ನು ಪಾಲಿಸಿದರೆ, ಅದನ್ನು ನಮ್ಮನ್ನು ಪೋಷಿಸುತ್ತದೆ ಎಂದು ಶ್ರೀ ಡಾ. ಶಿವಮೂರ್ತಿ ಮುರುಘಾ ಶರಣರು ಪ್ರತಿಪಾದಿಸಿದರು.
ಕೊರೊನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೊನಾ ಅಸಮಾನತೆಯನ್ನು ಉಂಟು ಮಾಡುವುದಿಲ್ಲ. ಅದು ಯಾರನ್ನೂ ನೋಡುವುದಿಲ್ಲ. ಅದಕ್ಕೆ ಜಾತಿ, ವರ್ಗ, ವಯಸ್ಸಿನ ನಿರ್ಬಂಧವಿಲ್ಲ. ನಮ್ಮ ಆರೋಗ್ಯ ನಮ್ಮ ಕೈಲಿದೆ. ಜಾಗೃತವಾಗಿರಬೇಕು.
ಇಲ್ಲಿನ ಶ್ರೀ ಮುರುಘಾ ಮಠದಲ್ಲಿ ನಿನ್ನೆ ಏರ್ಪಾಡಾಗಿದ್ದ ಶಿವಯೋಗದ (ಇಷ್ಟಲಿಂಗ ಧ್ಯಾನ)ಪ್ರಾತ್ಯಕ್ಷಿಕೆಯನ್ನು ಫೇಸ್‌ಬುಕ್ ಮತ್ತು ಯುಟ್ಯೂಬ್‌ನಲ್ಲಿ ನೇರಪ್ರಸಾರದಲ್ಲಿ ನಡೆಸಿಕೊಡುತ್ತಾ ಶರಣರು ಆಶೀರ್ವಚನ ನೀಡಿದರು.
ನಾಗರಿಕತೆಯ ಇತಿಹಾಸ, ಶರಣರ ಇತಿಹಾಸ, ವಚನಕಾರರ ಇತಿಹಾಸ, ಇವರು ಕಲ್ಯಾಣದಲ್ಲಿ ಕೂಡಿಕೊಂಡು ಬಸವಣ್ಣನವರ ನೇತೃತ್ವ ಹಾಗೂ ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಚಿಂತನೆ ನಡೆಸಿದರು. ವಚನಕಾರರು ಅನ್ವೇಷಕರು. ಭೌತಿಕತೆಗೆ ಶಾಶ್ವತವಾದ ಭವಿಷ್ಯವಿಲ್ಲ. ತತ್ವ ಸಿದ್ಧಾಂತದಲ್ಲಿ ಆದರ್ಶ ಇರಬೇಕು. ಇದನ್ನು ಶರೀರದಲ್ಲಿ ಸಾಧನೆ ಮಾಡಬೇಕು. ಸಿದ್ಧಾಂತ ಒಬ್ಬ ವ್ಯಕ್ತಿಯ ಇತಿಹಾಸವನ್ನು ನಿರ್ಮಿಸುತ್ತದೆ. ಜನಸಾಮಾನ್ಯರು ಸಿದ್ಧಾಂತದ ಕೈಹಿಡಿಯುವುದಿಲ್ಲ. ಅಂದರೆ ನಮ್ಮ ಮುಂದೆ ಆಕರ್ಷಣೆ, ವೈಯ್ಯಾರದ ಬದುಕು ಹಾಗು ಸೆಳೆತಗಳು ಇವೆ. ಇವು ಮಾನವ ಸಹಜವಾದ ಸೆಳೆತಗಳು. ಇವರು ಭೌತಿಕದ ಬೆನ್ನತ್ತಿ ಹೋಗುತ್ತಾರೆ. ತಿಳುವಳಿಕೆ ನಿಧಾನವಾಗಿ ನಡೆಯುವ ಪ್ರಕ್ರಿಯೆ. ಸಿದ್ಧಾಂತ ನಮ್ಮ ಕೈಹಿಡಿಯುತ್ತದೆ. ಭೌತಿಕವಾದ ಬೆಳವಣಿಗೆ ನಿಜವಾದ ಬೆಳವಣಿಗೆ ಅಲ್ಲ. ಭಾರತದ ಇತಿಹಾಸಕ್ಕೆ ಶರಣರು ಗಟ್ಟಿಯಾದ ಇತಿಹಾಸ ಕೊಡುವ ಪ್ರಯತ್ನ ಮಾಡಿದರು. ಮಡಿ ಮೈಲಿಗೆ ಪ್ರಚಾರದ ಭರಾಟೆ ಇರುವಾಗ ಶರಣರು ಸಮಾಜಮುಖಿ ಕಾರ್ಯಗಳನ್ನು ಮಾಡಿದರು.
ಸಿಂಧೂ ಬಯಲಿನ ನಾಗರಿಕತೆ ನಾಗರಿಕತೆಯನ್ನು ಮೂಡಿಸಿದರೆ, ಶರಣ ಸಂಸ್ಕೃತಿ ಕಲಿಸುವ ಪ್ರಯತ್ನ ಮಾಡಿತು. ನಾಗರಿಕತೆಯನ್ನು ಉಡಿಗೆ ತೊಡಿಗೆ, ವೈಭವದ ಮೂಲಕ ನೋಡಬಹುದು. ಆದರೆ ಸಂಸ್ಕೃತಿ ವಿಭಿನ್ನವಾದುದು. ನಾಗರಿಕತೆಗಿಂತ ಸಂಸ್ಕೃತಿ ಮುಖ್ಯವಾದುದು. ವಚನಕಾರರು ಹುಟ್ಟು ಹಾಕಿದ್ದು, ಸಂಸ್ಕೃತಿ. ನಮಗೆ ಸಾಂಸ್ಕೃತಿಕ ಶ್ರೀಮಂತಿಕೆ ಕೊಟ್ಟರು. ನಾವು ಹೆಮ್ಮೆ ಮತ್ತು ಅಭಿಮಾನದಿಂದ ಹೇಳಿಕೊಳ್ಳಬಹುದು.
ಯುಗ ಯುಗಗಳ ಆಚೆಗೆ ಸಂಸ್ಕೃತಿ ಉಳಿದು ಬರುತ್ತದೆ. ಸಾಂಸ್ಕೃತಿಕ ಶ್ರೀಮಂತಿಕೆಯ ವೈವಿಧ್ಯತೆ ಹೃದಯ ಜನ್ಯವಾದುದು. ವಚನಗಳು, ಹೃದಯ ಗೀತೆಗಳು, ಸಂಸ್ಕೃತಿಯ ಮೂಲ ಹೃದಯವಂತಿಕೆ. ನಿಜವಾದ ಶ್ರೀಮಂತರು ಹೃದಯ ಶ್ರೀಮಂತರು. ಇದರ ಶ್ರೀಮಂತಿಕೆ ಯಾವಾಗಲು ಇರುತ್ತದೆ.
ಶರಣ ಸಂಸ್ಕೃತಿ ಹೃದಯ ಪ್ರಧಾನವಾದ ಸಂಸ್ಕೃತಿ. ಬುದ್ಧಿ ಪ್ರಧಾನಕ್ಕಿಂತ ಹೃದಯ ಪ್ರಧಾನ. ಅದು ಜೀವಕಾರುಣ್ಯವಾದುದು. ಶರಣರು ಕಾರುಣ್ಯಮೂರ್ತಿಗಳಾಗಿದ್ದರು. ಬಸವಣ್ಣನವರು ಸಾವಿರಾರು ಶರಣರ ಜೊತೆ ಸಂಸ್ಕಾರ ಬಿತ್ತುತ್ತಾ ಸಾಗುತ್ತಿದ್ದರು. ಬಿಜ್ಜಳನ ಹತ್ತಿರ ಇದ್ದರೂ ಸಹ ಧಾರ್ಮಿಕ, ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಶ್ರಮಿಸಿದರು. ಅಸಹಾಯ ಕರಿಗೆ, ಬಡವರಿಗೆ ಸಹಾಯ ಹಸ್ತ ನೀಡುತ್ತಿ ದ್ದರು. ಆಧುನಿಕ ಪ್ರಪಂಚದಲ್ಲಿ ತೆಗೆದುಕೊಳ್ಳು ವವರ ಸಂಖ್ಯೆ ಹೆಚ್ಚಿದೆ. ಆದರೆ, ಕೊಡುವವರ ಸಂಖ್ಯೆ ಕಡಿಮೆ ಇದೆ. `ಹಾಸಿ ದುಡಿದಡೆ ತನಗುಂಟು, ತನ್ನ ಪುರಾತನರಿಗುಂಟು’ ಹಾಗಾಗಿ ಕಾಯಕ ಮಾಡುವುದು, ದಾಸೋಹವನ್ನು ನೀಡುವುದು. ಉತ್ಪನ್ನ, ವಿತರಣೆ ಸಮನಾಗಿರಬೇಕು ಎಂದು ಶರಣರು ಸಾರಿ ಸಾರಿ ಹೇಳಿದರು.