ಲಾಕ್‌ಡೌನ್‌ ಬಿಸಿಗೆ ಹೋಟೆಲ್‌ಗಳು ಥಂಡಾ

ಕೊರೊನಾ ನಂತರದ ಕಾಲಕ್ಕೆ ಅನುಗುಣವಾಗಿ ಬದಲಾಗುತ್ತಿರುವ ಹೋಟೆಲ್‌ಗಳ ವಿನ್ಯಾಸ

ದಾವಣಗೆರೆ, ಜು. 20 – ನಗರದ ಗುಂಡಿ ಸರ್ಕಲ್ ಕೊರೊನಾ ಪೂರ್ವ ಕಾಲದಲ್ಲಿ ತಿಂಡಿ ಸರ್ಕಲ್ ಎಂದೇ ಹೆಸರಾಗಿತ್ತು. ಆದರೆ, ಪಕ್ಕದಲ್ಲೇ ಇರುವ ಸಿ.ಜಿ. ಜಿಲ್ಲಾಸ್ಪತ್ರೆಯನ್ನು ಕೋವಿಡ್ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸಿದ್ದೇ ತಡ, ತಿಂಡಿ ಗಾಡಿಗಳೆಲ್ಲಾ ಮಂಗ ಮಾಯವಾಗಿವೆ. ಇದು ಒಂದು ರೀತಿ ಇಡೀ ಹೋಟೆಲ್ ಉದ್ಯಮದ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ.

ಕೊರೊನಾ ಪೂರ್ವ ಕಾಲದಲ್ಲಿ ಭರ್ಜರಿಯಾಗಿ ನಡೆಯುತ್ತಿದ್ದ ವೀಕೆಂಡ್ ಪಾರ್ಟಿಗಳು, ಸಕುಟುಂಬ ಸಮೇತವಾಗಿ ಹೋಟೆಲ್‌ಗಳಿಗೆ ಇಡುತ್ತಿದ್ದ ದಾಳಿಗಳು, ಆಹಾರಕ್ಕಾಗಿ ನಡೆಸುತ್ತಿದ್ದ ವಿಹಾರಗಳಿಗೆ ಇನ್ನಿಲ್ಲದ ಕಡಿವಾಣ ಬಿದ್ದಿದೆ. ದೊಡ್ಡ ದೊಡ್ಡ ಕೋಮು ಗಲಭೆಗಳು ನಡೆದ ಸಂದರ್ಭದಲ್ಲೂ ಸಹ ತಿಂಗಳುಗಳಲ್ಲೇ ಚೇತರಿಸಿಕೊಳ್ಳುತ್ತಿದ್ದ ಹೋಟೆಲ್ ಉದ್ಯಮ ಈ ಬಾರಿ ಬೃಹತ್ ಸವಾಲು ಎದುರಿಸುತ್ತಿದೆ.

ಹೋಟೆಲ್ ಉದ್ಯಮ ಇದೇ ಮೊದಲ ಬಾರಿಗೆ §ಬದಲಾದ ಜೀವನ ಶೈಲಿ‌’ ಸವಾಲನ್ನು ಎದುರಿಸುತ್ತಿದೆ. ಬಹುಶಃ ಇತ್ತೀಚಿನ ದಶಕಗಳಲ್ಲಿ ಈ ಸವಾಲು ಎದುರಾಗಿರುವುದು ಇದೇ ಮೊದಲು. ಕಲಿತ ಚಾಳಿ ಕಲ್ಲು ಹಾಕಿದರೂ ಹೋಗದು ಎಂಬಂತೆ, ಹೊಸ ಜೀವನ ಶೈಲಿಯೂ ಹೊಸ ಚಾಳಿಯಾದರೆ ಹೋಟೆಲ್ ಉದ್ಯಮ ದೊಡ್ಡ ಕಷ್ಟವನ್ನೇ ಎದುರಿಸಬೇಕಾಗುತ್ತದೆ.

ವಹಿವಾಟು ಕುಸಿತ : ಲಾಕ್‌ಡೌನ್, ಸೀಲ್‌ಡೌನ್, ಸಂಚಾರದ ಮೇಲಿನ ನಿರ್ಬಂಧ, ಕೊರೊನಾ ಭೀತಿಗಳಿಂದಾಗಿ ಹೋಟೆಲ್ ಉದ್ಯಮದ ವಹಿವಾಟು ಶೇ.80ರವರೆಗೆ ಕಡಿಮೆಯಾಗಿದೆ ಎಂದು ಉದ್ಯಮದ ಮೂಲಗಳು ತಿಳಿಸುತ್ತಿವೆ. 

ಇನ್ನೇನು ಲಾಕ್‌ಡೌನ್ ಮುಗಿದು ಅನ್‌ಲಾಕ್ ಆರಂಭವಾಯಿತು ಎಂದು ಜನ ನಿಟ್ಟುಸಿರು ಬಿಡುವ ಬೆನ್ನಲ್ಲೇ ಮತ್ತೆ ಲಾಕ್‌ಡೌನ್‌ ಗುಮ್ಮ ಬಂದಿದೆ. ಇದು ಪ್ರಯಾಣದ ಮೇಲೆ ನಿರ್ಬಂಧಕ್ಕೆ ಕಾರಣವಾಗಿದ್ದು, ಹೋಟೆಲ್ ಉದ್ಯಮಕ್ಕೆ ಮತ್ತೆ ಸಮಸ್ಯೆ ತಂದಿದೆ.

ಮಾಲೀಕರೇ ವರ್ಕರ್ : ಮಾಲೀಕರು ಹಾಗೂ ಅವರ ಕುಟುಂಬದ ಒಬ್ಬಿಬ್ಬರು ನಿರ್ವಹಿಸುವ ಸಣ್ಣ ಹೋಟೆಲ್‌ಗಳು ಹಾಗೂ ಹೀಗೂ ನಡೆಯುತ್ತಿವೆ. ಕೆಲವು ಹೋಟೆಲ್‌ಗಳಲ್ಲಿ ಮಾಲೀಕರೇ ವರ್ಕರ್ ಸಹ ಆಗಿ ಬಿಟ್ಟಿದ್ದಾರೆ. ಕೆಲಸದವರನ್ನು ಕರೆದುಕೊಂಡು ಹೋಟೆಲ್ ನಿಭಾಯಿಸುವಷ್ಟು ವ್ಯಾಪಾರ ಆಗುತ್ತಿಲ್ಲ ಎಂಬುದು ಇವರ ಸಮಸ್ಯೆ. ಇನ್ನು ಕೆಲ ಹೋಟೆಲ್‌ಗಳು ಬಾಗಿಲ ಲಾಕ್‌ಗಳು ಇನ್ನೂ ಡೌನ್ ಆಗೇ ಇವೆ.

ಕ್ಯಾಟರಿಂಗ್‌ಗೂ ಕೊರೊನಾ ಕಾಟ : ಮದುವೆ ಇತ್ಯಾದಿ ಸಮಾರಂಭಗಳು ಈಗ ಅಷ್ಟಕ್ಕಷ್ಟೇ ಎಂಬಂತಾಗಿವೆ. ಮೊದಲಿಗೆ ಹೋಲಿಸಿದರೆ ಆರ್ಡರ್ ಕಡಿಮೆ, ಒಂದು ವೇಳೆ ಸಮಾರಂಭ ನಡೆದರೂ ತಯಾರಿಸುವ ಊಟದ ಪ್ರಮಾಣವೂ ಕಡಿಮೆ ಎಂದು ಕ್ಯಾಟರಿಂಗ್ ಸೇವೆಯ ರಾಘವೇಂದ್ರ ಹೇಳಿದ್ದಾರೆ.

ಬದಲಾದ ಭೇಟಿ, ಸಭೆ : ಕಂಪನಿಗಳು ಈ ಹಿಂದೆ ತಮ್ಮ ಉದ್ಯೋಗಿಗಳನ್ನು ಕ್ಷೇತ್ರ ಭೇಟಿಗೆ ಕಳಿಸುತ್ತಿದ್ದರು. ಹೋಟೆಲ್‌ಗಳಲ್ಲಿ ಸಭೆಗಳನ್ನೂ ನಡೆಸುತ್ತಿದ್ದರು. ಅವೆಲ್ಲವೂ ಈಗ ಬಹುತೇಕ ನಿಂತಿವೆ. ವಾಟ್ಸ್‌ಅಪ್‌ನಲ್ಲೇ ವಿಡಿಯೋ ಸಂವಾದ, ಝೂಮ್‌ನಲ್ಲೇ ಮೀಟಿಂಗ್ ಎಂಬಲ್ಲಿಗೆ ಸ್ಥಿತಿ ಬಂದಿದೆ.

ತಂತ್ರಜ್ಞಾನದ ನೆರವಿನಿಂದ ಇದ್ದಲ್ಲಿಯಿಂದಲೇ ಸಭೆಗಳನ್ನು ನಡೆಸಬಹುದು. ಕಳೆದ ನಾಲ್ಕು ತಿಂಗಳಿನಿಂದ ಈ ರೀತಿಯ ಸಭೆಗಳು ಫಲಪ್ರದವೂ ಆಗುತ್ತಿವೆ. ಇದರಿಂದಾಗಿ ಕಂಪನಿಗಳಿಗೆ ಸಾಕಷ್ಟು ಉಳಿತಾಯವಾಗುತ್ತಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಕೊರೊನಾ ಕಡಿಮೆಯಾದರೂ, ಆನ್‌ಲೈನ್‌ಗೆ ಹೋದವರು ನೇರ ಸಭೆಗಳಿಗೆ ಮುಂದಾಗುವುದು ಅನುಮಾನ ಎಂದು ಖಾಸಗಿ ಕಂಪನಿಯ ಉದ್ಯೋಗಿ ಅರವಿಂದ್ ಹೇಳಿದ್ದಾರೆ.

ಬದಲಾಗುತ್ತಿರುವ ಉದ್ಯಮ : ಹಾಗೆಂದು ಉದ್ಯಮಗಳು ನಿಂತ ನೀರಾಗಿಲ್ಲ. ಬೃಹತ್ ಹೋಟೆಲ್‌ಗಳು ಈಗಾಗಲೇ ಸಾಮಾಜಿಕ ಅಂತರದ ಯುಗಕ್ಕೆ ದೊಡ್ಡ ಪ್ರಮಾಣದ ಸಿದ್ಧತೆ ನಡೆಸಿವೆ. ಹೋಟೆಲ್‌ಗೆ ಪ್ರವೇಶಿಸುವುದರಿಂದ ಹಿಡಿದು ವಸತಿಯವರೆಗೆ ಸಾಮಾಜಿಕ ಅಂತರ ಹಾಗೂ ಸೋಂಕು ರಹಿತ ವಾತಾವರಣಕ್ಕೆ ವಿನೂತನ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

ಸ್ವಿಗ್ಗಿ, ಜೊಮ್ಯಾಟೋ ಇತ್ಯಾದಿಗಳು ಮನೆಗಳಿಗೇ ಆಹಾರ ತಲುಪಿಸುತ್ತಿವೆ. ಇಂತಹ ಸೇವೆಗಳು ಮುಂದಿನ ದಿನಗಳಲ್ಲಿ ಹೋಟೆಲ್‌ಗಳಿಗೆ ಹೊಸ ಬಾಗಿಲುಗಳು ತೆರೆಯುವ ಸಾಧ್ಯತೆಗಳೂ ಇವೆ. ಕೊರೊನಾ ನಂತರದ ಯುಗದಲ್ಲಿ ಹೋಟೆಲ್ ಉದ್ಯಮ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುವತ್ತ ಸಾಗಿದರೆ ಮಾತ್ರ ಉತ್ತಮ ಭವಿಷ್ಯ ಕಾಣಲಿದೆ. ಹೊಸ ಹೊಸ ರುಚಿಗಳನ್ನೇ ಸಂಶೋಧಿಸುವವರಿಗೆ ಹೊಸ ವ್ಯವಸ್ಥೆ ತೀರಾ ಕಷ್ಟವೇನೂ ಆಗಲಾರದು, ಅಲ್ಲವೇ?


ಎಸ್.ಎ. ಶ್ರೀನಿವಾಸ್‌,
[email protected]

error: Content is protected !!