ಹರಿಹರ, ಜು. 19 – ಕೊರೊನಾ ರೋಗದ ಲಕ್ಷಣಗಳು ತಡೆಗಟ್ಟಲು ರಾಜ್ಯ ಸರ್ಕಾರ ನಾಲ್ಕು ಭಾನುವಾರ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದ್ದರ ಪರಿಣಾಮವಾಗಿ ಇಂದು ಮೂರನೇ ಭಾನುವಾರ ನಗರದಲ್ಲಿ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡುವ ಮೂಲಕ ಬೆಂಬಲ ನೀಡಿದರು.
ನಗರದ ದಿನಸಿ ಪದಾರ್ಥ, ತರಕಾರಿ, ಬಟ್ಟೆ, ಹೋಟೆಲ್, ಬೇಕರಿ, ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್, ಕಟಿಂಗ್, ಕೈಗಾರಿಕೆ, ಗ್ಯಾರೇಜ್, ಬಾರ್ ಅಂಡ್ ರೆಸ್ಟೋರೆಂಟ್, ಸಿಮೆಂಟ್, ಟೈರ್ ಟ್ಯೂಬ್, ಮೊಬೈಲ್, ದೇವಾಲಯ ಸೇರಿದಂತೆ ಹಲವಾರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿತ್ತು. ಅಗತ್ಯ ವಸ್ತುಗಳಾದ ಆಸ್ಪತ್ರೆ, ಔಷಧಿ ಅಂಗಡಿಗಳು ಮಾತ್ರ ತೆರೆದುಕೊಂಡು ವ್ಯಾಪಾರ ವಹಿವಾಟು ಮಾಡಲಾಯಿತು.
ನಗರದ ಮುಖ್ಯ ರಸ್ತೆ, ದೇವಸ್ಥಾನ ರಸ್ತೆ, ಹೈಸ್ಕೂಲ್ ಬಡಾವಣೆ, ತರಕಾರಿ ಮಾರುಕಟ್ಟೆ, ಶೋಭಾ ಟಾಕೀಸ್ ರಸ್ತೆ, ಹಳೆ ಪಿ.ಬಿ. ರಸ್ತೆ, ಹರಪನಹಳ್ಳಿ ರಸ್ತೆ, ಗಾಂಧಿ ವೃತ್ತ, ಬಸ್ ನಿಲ್ದಾಣ ಸೇರಿದಂತೆ ಹಲವಾರು ಪ್ರಮುಖ ವ್ಯಾಪಾರಿ ಕೇಂದ್ರಗಳು ಸಾರ್ವಜನಿಕರ ಓಡಾಟವಿಲ್ಲದೆ ಬಿಕೋ ಎನ್ನುತ್ತಿದ್ದವು.
ನಗರದಲ್ಲಿ ನಿನ್ನೆ ಯಿಂದ ನಿಷೇಧಾಜ್ಞೆ ಜಾರಿಯಲ್ಲಿ ಇತ್ತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತರಾದ ಶ್ರೀಮತಿ ಎಸ್. ಲಕ್ಷ್ಮಿ, ಸಿಪಿಐ ಎಸ್.ಶಿವಪ್ರಸಾದ್, ಐಪಿಎಸ್ ಎಸ್ ಶೈಲಾಶ್ರೀ ಯಾವುದೇ ಅಹಿತಕರ ಘಟನೆಗಳು ನಡೆಯ ದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.